ಮೈಸೂರು-ಬೆಂಗಳೂರು ನಡುವೆ  ಮೆಮು ರೈಲು ಸಂಚಾರ ಆರಂಭ
ಮೈಸೂರು

ಮೈಸೂರು-ಬೆಂಗಳೂರು ನಡುವೆ ಮೆಮು ರೈಲು ಸಂಚಾರ ಆರಂಭ

December 24, 2018

ಮೈಸೂರು: ಮೈಸೂರು-ಬೆಂಗ ಳೂರು ನಡುವೆ ವಾರದಲ್ಲಿ ನಾಲ್ಕು ದಿನ ಸಂಚರಿಸ ಲಿರುವ ವಿದ್ಯುತ್ ಚಾಲಿತ ಹೊಸ ಮೆಮು ರೈಲಿಗೆ ಸಂಸದ ಪ್ರತಾಪ ಸಿಂಹ ಭಾನುವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಮೈಸೂರು ಕೇಂದ್ರ ರೈಲ್ವೆ ನಿಲ್ದಾಣದ ಆವರಣದಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಮೈಸೂರು-ಬೆಂಗ ಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ನಡುವೆ ಸಂಚರಿಸಲಿರುವ ಹೊಸ ರೈಲಿಗೆ ಚಾಲನೆ ನೀಡಲಾಯಿತು. ಇಂದು ಮೊದಲ ಪ್ರಯಾಣ ಬೆಳೆಸಿದ ಮೆಮು ರೈಲಿನಲ್ಲಿ 300ಕ್ಕೂ ಹೆಚ್ಚು ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣಿ ಸಿದರು. ಇದೇ ವೇಳೆ ಸಂಸದ ಪ್ರತಾಪ ಸಿಂಹ ಮಾತನಾಡಿ, ಸಂಜೆ 7 ಗಂಟೆಯಿಂದ ರಾತ್ರಿ 10ಗಂಟೆವರೆಗೂ ಬೆಂಗಳೂರಿ ನಿಂದ ಮೈಸೂರಿಗೆ ಯಾವುದೇ ರೈಲು ಸಂಚಾರ ಇರುವುದಿಲ್ಲ. ಇದರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಹಲ ವಾರು ಪ್ರಯಾಣಿಕರು ನನಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನಾನು ಬೆಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದಿಂದ ರಾಮನಗರದವರೆಗೂ ಸಂಚರಿ ಸುತ್ತಿದ್ದ ಮೆಮು ರೈಲನ್ನು ಮೈಸೂರಿನವರೆಗೂ ವಿಸ್ತರಿಸುವ ಅಗತ್ಯವಿರುವುದನ್ನು ಮನಗಂಡು ಕೇಂದ್ರದ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿ ಮಾಡಿ, ಮೆಮು ರೈಲು ಸಂಚಾರವನ್ನು ಮೈಸೂರಿನವರೆಗೂ ವಿಸ್ತರಿಸುವಂತೆ ಮನವಿ ಮಾಡಿದೆ. ಈ ಹಿಂದೆ ಹೊಸ ರೈಲು ಅಥವಾ ರೈಲಿಗೆ ಹೊಸದಾಗಿ ಬೋಗಿ ಸೇರಿಸಬೇಕಾದರೆ ರೈಲ್ವೆ ಬಜೆಟ್ ಅನ್ನೇ ಕಾಯಬೇಕಾದ ಪರಿಸ್ಥಿತಿ ಇತ್ತು. ಆದರೆ ಮೆಮು ರೈಲನ್ನು ಕೇವಲ 2.30 ಗಂಟೆಯೊಳಗೆ ಮೈಸೂರಿಗೆ ಸಂಚಾರವನ್ನು ವಿಸ್ತರಿಸುವ ಆದೇಶವನ್ನು ರೈಲ್ವೆ ಮಂತ್ರಿಗಳು ಮಾಡಿದರು. ಇದರಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಅಭಿವೃದ್ಧಿಗೆ ಸದಾ ಕ್ರಿಯಾಶೀಲವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಮೈಸೂರು-ಕೊಡಗು ಸಂಸದನಾಗಿ ಬಂದ ವೇಳೆ ಮೈಸೂರು-ಬೆಂಗಳೂರು ನಡುವಿನ ಜೋಡಿ ರೈಲು ಮಾರ್ಗದ ಕಾಮಗಾರಿ ರಾಮನಗರ ಹಾಗೂ ಶ್ರೀರಂಗಪಟ್ಟಣದಲ್ಲಿ ಸ್ಥಗಿತ ಗೊಂಡಿತ್ತು. ರಾಮನಗರದಲ್ಲಿ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಶ್ರೀರಂಗಪಟ್ಟಣದಲ್ಲಿ ಟಿಪ್ಪು ಶಸ್ತ್ರಾಗಾರದ ಸ್ಥಳಾಂತರ ಮಾಡಬೇಕಾಗಿತ್ತು ಎಂದರು.

ಮೈಸೂರು ನಗರಕ್ಕೆ ಸಂಪರ್ಕದ ಕೊರತೆಯಿರುವುದನ್ನು ಮನಗಂಡು ಉದ್ಯಮಿಗಳು ಹೊಸ ಕೈಗಾರಿಕೆ ಸ್ಥಾಪನೆ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಇದರಿಂದ ಜೋಡಿ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಕ್ರಮ ಕೈಗೊಂಡೆ. ವಿದ್ಯುತ್ ಚಾಲಿತ ರೈಲು ಮಾರ್ಗವೂ ಪೂರ್ಣಗೊಂಡಿದ್ದು, ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೋಡಿ ರೈಲು ಮಾರ್ಗವನ್ನು ಉದ್ಘಾಟಿಸಿದ್ದರು. ಇದರಿಂದ ಎರಡು ನಗರಗಳ ನಡುವಿನ ಪ್ರಯಾಣಿಕರಿಗೆ ನೆರವಾಗಿದೆ ಎಂದರು.

ಇನ್ನಷ್ಟು ರೈಲುಗಳನ್ನು ಮೈಸೂರಿನಿಂದ ವಿವಿಧೆಡೆಗೆ ಆರಂಭಿಸುವ ಆಲೋಚನೆ ಇಲಾಖೆಯದ್ದಾಗಿದೆ. ಆದರೆ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿ ರುವ ಮೈಸೂರು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಸ್ಥಳಾಭಾವವಿದೆ. ಇದರಿಂದ ಪ್ರಧಾನಿ ಅವರ ಗಮನ ಸೆಳೆದು, ನಾಗನಹಳ್ಳಿ ಬಳಿ 785 ಕೋಟಿ ರೂ. ವೆಚ್ಚದಲ್ಲಿ 400 ಎಕರೆ ಜಾಗದಲ್ಲಿ ಸ್ಯಾಟಲೈಟ್ ರೈಲ್ವೆ ನಿಲ್ದಾಣವನ್ನು ನಿರ್ಮಿಸುವುದಕ್ಕೆ ಅನುಮೋದನೆ ಪಡೆಯ ಲಾಗಿದೆ. ಮೈಸೂರು-ಬೆಂಗಳೂರು ನಡುವಿನ ರಸ್ತೆ ಮಾರ್ಗವನ್ನು 10 ಪಥದ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವುದಕ್ಕೆ ಕೇಂದ್ರ ಸರ್ಕಾರ 7 ಸಾವಿರ ಕೋಟಿ ರೂ. ನೀಡಿದೆ. ರಸ್ತೆ ಅಗಲೀಕರಣಕ್ಕೆ ಭೂಮಿ ವಶಪಡಿಸಿಕೊಳ್ಳುವ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗುತ್ತದೆ. 2021ರ ಜನವರಿ ವೇಳೆಗೆ 10 ಪಥದ ರಸ್ತೆ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿರುತ್ತದೆ. ಈ ನಡುವೆ ಮೈಸೂರು ವಿಮಾನ ನಿಲ್ದಾಣವನ್ನು ವಿಸ್ತರಿಸುವ ಹಾಗೂ ಹೆಚ್ಚಿನ ವಿಮಾನಗಳ ಸಂಚಾರ ಆರಂಭಿಸುವುದಕ್ಕೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈಲುಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಇಲಾಖೆ ಭದ್ರತೆ ಒದಗಿಸಿರುವುದು ಶ್ಲಾಘನೀಯ. ಈ ಹಿಂದೆ ಅಹಿತಕರ ಘಟನೆ ನಡೆಯುತ್ತಿದ್ದವು. ಆದರೆ ಇತ್ತೀಚಿಗೆ ಆರ್‍ಪಿಎಫ್ ಸಿಬ್ಬಂದಿ ರೈಲುಗಳ ಪ್ರಯಾಣಿಕರಿಗೆ ಭದ್ರತೆ ಒದಗಿಸುತ್ತಿದ್ದಾರೆ. ಮೆಮು ರೈಲು ಸಂಚಾರ ಮೈಸೂರಿನವರೆಗೂ ವಿಸ್ತರಣೆಯಾಗಲು ಕಾರಣರಾದ ಸಂಸದರಿಗೆ ಅಭಿನಂದಿಸುವುದಾಗಿ ತಿಳಿಸಿದರು.

ಪ್ರಯಾಣ ವಿಸ್ತರಣೆ: ಶಾಸಕ ಎಲ್.ನಾಗೇಂದ್ರ ಮಾತನಾಡಿ, ಮೆಮು ರೈಲು ಮೈಸೂರಿನವರೆಗೂ ಪ್ರಯಾಣ ವಿಸ್ತರಿಸುವುದಕ್ಕೆ ಸಂಸದ ಪ್ರತಾಪ ಸಿಂಹ ಅವರ ಪರಿಶ್ರಮ ಕಾರಣವಾಗಿದೆ. ನಾಗರೀಕರ ಬೇಡಿಕೆಯನ್ನು ಸಂಸದರು ಕೊಂಡೊಯ್ದಿದ್ದಕ್ಕೆ ಸಕಾರಾತ್ಮಕವಾಗಿ ಕೇಂದ್ರದ ಸಚಿವರು ಸ್ಪಂದಿಸಿದ್ದಾರೆ. ಇದರಿಂದ ನರೇಂದ್ರ ಮೋದಿ ಸರ್ಕಾರ ಜನರ ಪರವಾಗಿರುವುದು ಸಾಭೀತಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಮೈಸೂರು-ಬೆಂಗಳೂರು ನಡುವೆ ಪ್ರತಿ ದಿನ ಸಾವಿರಾರು ನೌಕರರು ನಿತ್ಯವೂ ಸಂಚರಿಸುತ್ತಿದ್ದಾರೆ. ಮೆಮು ರೈಲು ಸಂಚಾರದಿಂದ ಇವರಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಪರ್ಣ ಗಾರ್ಗ್ ಮಾತನಾಡಿ, ಮೈಸೂರಿ ನಿಂದ ಇದುವರೆಗೂ 28 ರೈಲುಗಳ ಸೇವೆ ನೀಡಲಾಗುತ್ತಿತ್ತು. ಮೆಮು ರೈಲು ಸಂಚಾರದಿಂದ 29 ರೈಲುಗಳ ಸೇವೆ ನೀಡಲಾಗುತ್ತಿದೆ. ಮೆಮು ರೈಲು 110 ಕಿ.ಮಿ. ವೇಗದ ಸಾಮಥ್ರ್ಯ ಹೊಂದಿದೆ. 12 ಕಾರುಗಳು, 9 ಟ್ರೇಲಿಂಗ್ ಹೊಂದಿರುತ್ತದೆ. ತಲಾ 55 ಆಸನವುಳ್ಳ 3 ಮೋಟಾರ್ ಕೋಚ್, 80 ಆಸನ ಸೌಲಭ್ಯವುಳ್ಳ 9 ಟ್ರೈಲಿಂಗ್ ಕೋಚುಗಳಿವೆ. ಒಟ್ಟಾರೆ ಈ ರೈಲಿನಲ್ಲಿ ನಿಂತು ಹಾಗೂ ಕುಳಿತುಕೊಂಡು ಒಟ್ಟು 3500 ಪ್ರಯಾಣಿಕರು ಸಾಗಬಹುದಾಗಿದೆ. ಮೈಸೂರು-ಬೆಂಗಳೂರು ನಡುವಿನ ಪ್ರಯಾಣ ದರ ಕೇವಲ 30 ರೂ. ಆಗಿದೆ ಎಂದು ವಿವರಿಸಿದರು.

ಮೈಸೂರು-ಚೆನ್ನೈ ನಡುವೆ ಮತ್ತೊಂದು ಶತಾಬ್ದಿ ರೈಲು ಅಗತ್ಯ: ಎಂಎಲ್‍ಸಿ ಸಂದೇಶ್ ನಾಗರಾಜು
ಮೈಸೂರು: ಮೈಸೂರು-ಚೆನ್ನೈ ನಡುವೆ ಮತ್ತೊಂದು ಶತಾಬ್ದಿ ರೈಲು ಸಂಚಾರ ಅಗತ್ಯವಿದ್ದು, ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಮೈಸೂರು ಬಿಟ್ಟರೆ, ರಾತ್ರಿ ವಾಪಸ್ಸಾಗುವ ವ್ಯವಸ್ಥೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜು ಒತ್ತಾಯಿಸಿದ್ದಾರೆ. ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ನಡೆದ ನೂತನ ಮೆಮು ರೈಲು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಸ್ತುತ ಚೆನ್ನೈನಿಂದ ಮೈಸೂರಿಗೆ ಬರುತ್ತಿರುವ ಶತಾಬ್ದಿ ರೈಲು, ಅದೇ ದಿನ ಸಂಜೆ ಚೆನ್ನೈಗೆ ಪ್ರಯಾಣ ಬೆಳೆಸುತ್ತಿದೆ. ಅದೇ ಮಾದರಿಯಲ್ಲಿ ಬೆಳಿಗ್ಗೆ 6 ಗಂಟೆಗೆ ಮೈಸೂರಿನಿಂದ ಚೆನ್ನೈಗೆ ಶತಾಬ್ದಿ ರೈಲು ಪ್ರಯಾಣಿಸುವಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ಸಂಜೆ 7 ಗಂಟೆಗೆ ಚೆನ್ನೈನಿಂದ ಮೈಸೂರಿಗೆ ವಾಪಸ್ಸಾಗುವಂತೆ ಮಾಡಿದಾಗ ಮಾತ್ರ ಸಾವಿರಾರು ಪ್ರಯಾಣಿಕರಿಗೆ ಉಪಯೋಗ ವಾಗಲಿದೆ. ಇದು ನನ್ನ ಕನಸಾಗಿದ್ದು, ಹಲವಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಇದಕ್ಕೆ ರೈಲ್ವೆ ಇಲಾಖೆ ಎರಡು ಬಾರಿ ಹಿಂಬರಹ ನೀಡಿದ್ದು, ಆ ಸಮಯದಲ್ಲಿ ಬೇರೆ ರೈಲುಗಳ ಸಂಚಾರ ಇರುವುದರಿಂದ ಹಾಗೂ ರೈಲ್ವೆ ಹಳಿ ಖಾಲಿ ಇಲ್ಲದ ಕಾರಣ ಮತ್ತೊಂದು ಶತಾಬ್ದಿ ಎಕ್ಸ್‍ಪ್ರೆಸ್ ಅನ್ನು ಸಂಚಾರಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ವಿಷಾಧಿಸಿದರು.

Translate »