ನಾಳೆಯಿಂದ ಮೈಸೂರು-ಬೆಂಗಳೂರು ನಡುವೆ MEMU ರೈಲು ಸಂಚಾರ
ಮೈಸೂರು

ನಾಳೆಯಿಂದ ಮೈಸೂರು-ಬೆಂಗಳೂರು ನಡುವೆ MEMU ರೈಲು ಸಂಚಾರ

December 22, 2018

ಮೈಸೂರು:  ಮೈಸೂರು-ಬೆಂಗಳೂರು ನಡುವೆ ವಾರಕ್ಕೆ ನಾಲ್ಕು ದಿನ MEMU (ಮೇನ್ ಲೈನ್ ಎಲೆಕ್ಟ್ರಿಕ್ ಮಲ್ಟಿ ಪಲ್ ಯೂನಿಟ್) ರೈಲು ಸಂಚಾರ ಡಿಸೆಂಬರ್ 23ರಿಂದ ಆರಂಭವಾಗಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಸಂಸದ ಪ್ರತಾಪ್ ಸಿಂಹ ಅವರು ಹಸಿರು ನಿಶಾನೆ ತೋರುವ ಮೂಲಕ ಭಾನುವಾರ ಮೈಸೂರು ರೈಲು ನಿಲ್ದಾಣದಲ್ಲಿ ಕೆಎಸ್‍ಆರ್ ಬೆಂಗಳೂರು ಮತ್ತು ಮೈಸೂರು ನಡುವೆ ಮೆಮು ರೈಲು ಸಂಚಾರ ಸೇವೆಗೆ ಚಾಲನೆ ನೀಡುವರು. ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕರಾದ ಎಲ್.ನಾಗೇಂದ್ರ,

ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ, ಆರ್.ಧರ್ಮಸೇನ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನಯೀಮಾ ಸುಲ್ತಾನ, ನಜೀರ್ ಅಹಮದ್ ಸೇರಿದಂತೆ ಹಲವು ಗಣ್ಯರು ಮೆಮು ರೈಲು ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಬುಧವಾರ ಗುರುವಾರ, ಶುಕ್ರವಾರ ಮತ್ತು ಶನಿವಾರಗಳಂದು ರಾತ್ರಿ 7.55ಕ್ಕೆ ಬೆಂಗಳೂರಿನಿಂದ ಹೊರಡುವ ಮೆಮು ವಿಶೇಷ ರಾತ್ರಿ 10.50 ಗಂಟೆಗೆ ಮೈಸೂರು ತಲುಪಲಿದೆ. ಅದೇ ರೀತಿ ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಗಳಂದು ಮುಂಜಾನೆ 4.45 ಗಂಟೆಗೆ ಮೈಸೂರಿನಿಂದ ಹೊರಡುವ ರೈಲು ಬೆಳಿಗ್ಗೆ 8.30 ಗಂಟೆಗೆ ಬೆಂಗಳೂರು ತಲುಪುವುದು.

ಈ ಮೆಮು ರೈಲು 3 ಮೋಟಾರ್ ಕಾರುಗಳು ಮತ್ತು 9 ಟ್ರೈಲಿಂಗ್ ಕಾರುಗಳನ್ನು ಒಳಗೊಂಡಿದ್ದು, ಗಂಟೆಗೆ 110 ಕಿ.ಮೀ. ವೇಗ ಸಾಮಥ್ರ್ಯ ಹೊಂದಿದೆ. ಮೋಟಾರು ಕೋಚ್‍ಗಳು 55 ಆಸನ ಹಾಗೂ ಟ್ರೇಲರ್ ಕೋಚ್‍ಗಳು 80 ಆಸನಗಳನ್ನು ಹೊಂದಿವೆ. ಕುಳಿತು ಹಾಗೂ ನಿಂತು ಒಟ್ಟಾರೆ 3500 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ನಾಯಂಡಹಳ್ಳಿ, ಜ್ಞಾನಭಾರತಿ, ಕೆಂಗೇರಿ, ಹೆಜ್ಜಾಲ, ಬಿಡದಿ, ಕೇತೋಹಳ್ಳಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಪಾಂಡವಪುರ ಮತ್ತು ಶ್ರೀರಂಪಟ್ಟಣಗಳಲ್ಲಿ ಮೆಮು ವಿಶೇಷ ರೈಲು ನಿಲ್ಲುತ್ತದೆ.

ಈ ವಿಶೇಷ ರೈಲು ಸಂಚಾರ ಸೇವೆಯಿಂದಾಗಿ ಮೈಸೂರು-ಬೆಂಗಳೂರು ನಡುವೆ ಪ್ರಯಾಣಿಸುವವರಿಗೆ ಅನುಕೂಲವಾಗುತ್ತದೆ ಎಂದು ಸೀನಿಯರ್ ಡಿವಿಷನಲ್ ಕಮರ್ಷಿಯಲ್ ಮ್ಯಾನೇಜರ್ ಎಸ್.ಜಿ.ಸತೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »