ಮೈಸೂರು ತಾಪಂ ಇಓ ಛೇಂಬರ್‍ನಲ್ಲೇ ಜೆಡಿಎಸ್ ಸದಸ್ಯನ  ಮೇಲೆ ಬಿಜೆಪಿ ಸದಸ್ಯನಿಂದ ಹಲ್ಲೆ
ಮೈಸೂರು

ಮೈಸೂರು ತಾಪಂ ಇಓ ಛೇಂಬರ್‍ನಲ್ಲೇ ಜೆಡಿಎಸ್ ಸದಸ್ಯನ ಮೇಲೆ ಬಿಜೆಪಿ ಸದಸ್ಯನಿಂದ ಹಲ್ಲೆ

December 22, 2018

ಮೈಸೂರು: ಮೈಸೂರು ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿಯ ಛೇಂಬರ್‍ನಲ್ಲೇ ಮೈಸೂರು ತಾಪಂ ಜೆಡಿಎಸ್ ಸದಸ್ಯನ ಮೇಲೆ ಬಿಜೆಪಿ ಸದಸ್ಯ ಹೆಲ್ಮೆಟ್ ಹಾಗೂ ಕುರ್ಚಿಯಿಂದ ತೀವ್ರ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ. ತಾಪಂನ ಶ್ರೀರಾಂಪುರ ಕ್ಷೇತ್ರದ ಜೆಡಿಎಸ್ ಸದಸ್ಯ ಹನುಮಂತು ಹಲ್ಲೆಗೊಳ ಗಾದವರಾಗಿದ್ದು, ಇವರ ಮೇಲೆ ವಾಜ ಮಂಗಲ ಕ್ಷೇತ್ರದ ಬಿಜೆಪಿ ಸದಸ್ಯ ಮಂಜು ನಾಥ್ ಹಲ್ಲೆ ನಡೆಸಿದ್ದು, ಈ ಸಂಬಂಧ ತಾಪಂ ಕಾರ್ಯ ನಿರ್ವಾಹಕಾಧಿಕಾರಿ ಲಿಂಗ ರಾಜು ನಜರ್‍ಬಾದ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿವರ: ಮೈಸೂರು ತಾಪಂನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಆಡಳಿತ ನಡೆಯುತ್ತಿದೆ. ಒಳ ಒಪ್ಪಂದದಂತೆ ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದ ಕಾರಣ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಬುಧವಾರದಂದು ಈ ಸಂಬಂಧ ತಾಪಂನಲ್ಲಿ ವಿಶೇಷ ಸಭೆ ಕರೆಯಲಾಗಿತ್ತು. ಈ ಸಭೆಗೆ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಗೈರು ಹಾಜರಾದ ಕಾರಣ ಅವಿಶ್ವಾಸಕ್ಕೆ ಸೋಲುಂಟಾಗಿತ್ತು. ಈ ವಿಚಾರವಾಗಿ ತಾಪಂನ ಜೆಡಿಎಸ್ ಸದಸ್ಯ ಹನುಮಂತು ಮತ್ತು ಬಿಜೆಪಿ ಸದಸ್ಯ ಮಂಜು ನಾಥ್ ನಡುವೆ ಮೊಬೈಲ್‍ನಲ್ಲೇ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ. ಬುಧವಾರದಂದು ಹನುಮಂತು ಅವರು ಶ್ರೀರಾಂಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಚೂಡಾಮಣಿ ಮತ್ತು ಉಪಾಧ್ಯಕ್ಷೆ ಉಷಾ ಅವರೊಂದಿಗೆ ತಾಪಂ ಕಚೇರಿಗೆ ಆಗಮಿಸಿ ಕಾರ್ಯ ನಿರ್ವಾಹಕ ಅಧಿಕಾರಿಗಳ ಛೇಂಬರ್‍ನಲ್ಲಿ ಶ್ರೀರಾಂಪುರ ಗ್ರಾಪಂಗೆ ಸಂಬಂಧ ಪಟ್ಟ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಛೇಂಬರ್‍ಗೆ ನುಗ್ಗಿದ ತಾಪಂನ ವಾಜಮಂಗಲ ಸದಸ್ಯ ಮಂಜುನಾಥ್, ಹಠಾತ್ತನೆ ಹೆಲ್ಮೆಟ್‍ನಿಂದ ಹನು ಮಂತು ಅವರ ತಲೆಯ ಮೇಲೆ ಹೊಡೆದರು. ಈ ಸಂದರ್ಭದಲ್ಲಿ ಚೂಡಾಮಣಿ ಮತ್ತು ಉಷಾ ಅವರು ತಡೆಯಲು ಯತ್ನಿಸಿದಾಗ ಮಂಜುನಾಥ್ ಕೈಯಲ್ಲಿದ್ದ ಹೆಲ್ಮೆಟ್ ಕೆಳಗೆ ಬಿದ್ದ ನಂತರ ಅವರು ಚೇರ್‍ವೊಂದನ್ನು ತೆಗೆದುಕೊಂಡು ಹನುಮಂತು ಮೇಲೆಸೆದರು. ಈ ಎಲ್ಲಾ ದೃಶ್ಯಗಳು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಛೇಂಬರ್‍ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಹನುಮಂತು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಲಿಂಗ ರಾಜು ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Translate »