2006ರಲ್ಲಿ ಕುಮಾರಸ್ವಾಮಿ ಜೊತೆ ಕೈಜೋಡಿಸಿ ಸರ್ಕಾರ ರಚನೆ ಮಾಡಿದ್ದು ನನ್ನ ಜೀವನದಲ್ಲಿ ನಾನು ಮಾಡಿದ ದೊಡ್ಡ ಅಪರಾಧ…
ಮೈಸೂರು

2006ರಲ್ಲಿ ಕುಮಾರಸ್ವಾಮಿ ಜೊತೆ ಕೈಜೋಡಿಸಿ ಸರ್ಕಾರ ರಚನೆ ಮಾಡಿದ್ದು ನನ್ನ ಜೀವನದಲ್ಲಿ ನಾನು ಮಾಡಿದ ದೊಡ್ಡ ಅಪರಾಧ…

May 26, 2018

ಬೆಂಗಳೂರು: 2006ರಲ್ಲಿ ಕುಮಾರಸ್ವಾಮಿ ಜೊತೆ ಕೈ ಜೋಡಿಸಿ ಸರ್ಕಾರ ಮಾಡಿದ್ದು ನನ್ನ ಜೀವನದಲ್ಲಿ ನಾನು ಮಾಡಿದ ದೊಡ್ಡ ಅಪರಾಧ. ಇದಕ್ಕಾಗಿ ನಾಡಿನ ಜನತೆಯ ಕ್ಷಮೆ ಯಾಚನೆ ಮಾಡುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಪಶ್ಚಾತ್ತಾಪ ಪಟ್ಟಿದ್ದಾರೆ.

ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮೇಲಿನ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಷಣಕ್ಕೆ ಪ್ರತಿಕ್ರಿಯಿಸಿದ ಅವರು, 20 ತಿಂಗಳು ಹೊಂದಾಣ ಕೆ ರಾಜಕಾರಣ ಮಾಡಿಕೊಂಡು ಕುಮಾರಸ್ವಾಮಿ ಸರ್ಕಾರದಲ್ಲಿ ನಾನು ಉಪ ಮುಖ್ಯಮಂತ್ರಿ ಆಗಿದ್ದೆ. ಅವರು ಮುಖ್ಯಮಂತ್ರಿ ಆದ ಸಮಯದಲ್ಲಿ ಒಂದು ದಿನವೂ ನಾನು ಒಂದು ಪ್ರಶ್ನೆ ಮಾಡಿಲ್ಲ, ಎಲ್ಲದಕ್ಕೂ ಸಹಕಾರ ಕೊಟ್ಟೆ. ಆದರೆ 20 ತಿಂಗಳ ನಂತರ ಅಧಿಕಾರ ಕೊಡುವ ವೇಳೆ ಖಾಸಗಿ ಹೋಟೆಲ್‍ನಲ್ಲಿ ಅಪ್ಪ ಮಕ್ಕಳು ಬಂದು ಅನೇಕ ಹೊಸ ಷರತ್ತುಗಳನ್ನು ಹಾಕಿದರು.

ನಮ್ಮ ತಂದೆಗೆ ಇಷ್ಟ ಇರಲಿಲ್ಲ, ಅವರ ಮಾತಿಗೆ ವಿರುದ್ಧವಾಗಿ ನಡೆದುಕೊಂಡೆ. ಈಗ ಪಶ್ಚಾತ್ತಾಪವಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದರು. ನಾನು ಕುಮಾರಸ್ವಾಮಿ ಜೊತೆ ಅಧಿಕಾರ ನಡೆಸಿದ್ದು ನನ್ನ ದೊಡ್ಡ ಅಪರಾಧ. ನಾನು ಅಂದು ಅವರ ಜೊತೆ ಕೈ ಜೋಡಿಸದೇ ಇದ್ದರೆ ನೀವು ಎಲ್ಲಿ ಇರುತ್ತಿದ್ದೀರಿ? 20 ತಿಂಗಳು ಆದ ನಂತರ ಯಾರಿಗೆ ಏನು ಎಂದು ಚರ್ಚೆ ಆಗಿತ್ತಲ್ಲವೇ? ನಮ್ಮ, ನಿಮ್ಮ ಮುಖಂಡರ ಮುಂದೆ ಆಗಿತ್ತಲ್ಲವೇ? ಆದರೂ ನನಗೆ ನಂಬಿಕೆ ದ್ರೋಹ, ವಿಶ್ವಾಸದ್ರೋಹ ಮಾಡಲಿಲ್ಲವೇ? ಧರಂಸಿಂಗ್‍ಗೆ ಕೈ ಕೊಟ್ಟು ಬಂದಿರಿ, ನಂತರ ನಮಗೂ ಅದನ್ನೇ ಮಾಡಿದ್ದೀರಿ. ಇದನ್ನು ನಾಡಿನ ಜನ ಗಮನಿಸಿದ್ದಾರೆ ಎಂದು ತಮ್ಮ ಮೇಲಿನ ಆರೋಪಕ್ಕೆ ತಿರುಗೇಟು ನೀಡಿದರು.

ಸಿದ್ದರಾಮಯ್ಯನವರೇ ನಿಮ್ಮ ವಿರುದ್ಧ ಜಿ.ಟಿ.ದೇವೇಗೌಡರನ್ನು ನಿಲ್ಲಿಸಿ ನಿಮ್ಮನ್ನು ಸೋಲಿಸಿ ಅಪಹಾಸ್ಯ ಮಾಡಲಿಲ್ಲವೇ? ಇದು ಸತ್ಯವಲ್ಲವೇ? ಎಂದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು, ಯಡಿಯೂರಪ್ಪರನ್ನು ಧರ್ಮಕ್ಕೆ ಕೂರಿಸಿದ್ದೇವಾ, ಸಂವಿಧಾನಬದ್ಧವಾಗಿ ಬಂದಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರ ಬಾಯನ್ನೇ ಮುಚ್ಚಿಸಿದರು.

Translate »