ಗಾಂಧಿ ಜಯಂತಿ ಅಂಗವಾಗಿ ಅ.6ರಂದು ನಂಜನಗೂಡಿನಲ್ಲಿ ಬೃಹತ್ ಉದ್ಯೋಗ ಮೇಳ
ಮೈಸೂರು

ಗಾಂಧಿ ಜಯಂತಿ ಅಂಗವಾಗಿ ಅ.6ರಂದು ನಂಜನಗೂಡಿನಲ್ಲಿ ಬೃಹತ್ ಉದ್ಯೋಗ ಮೇಳ

September 25, 2018

ಮೈಸೂರು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಂಜನ ಗೂಡು ತಾಲೂಕು ಘಟಕದ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಅ.6ರಂದು ನಂಜನಗೂಡು ಪಟ್ಟಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ವೃತ್ತದ ಬಳಿಯ ವಿದ್ಯಾ ವರ್ಧಕ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಅಂದು ಬೆಳಿಗ್ಗೆ 10ಕ್ಕೆ ಎಐಸಿಸಿ ಮೈಸೂರು ವಿಭಾಗದ ಕಾರ್ಯದರ್ಶಿ ಪಿ.ಸಿ.ವಿಷ್ಣುನಾದ್ ಮೇಳಕ್ಕೆ ಚಾಲನೆ ನೀಡಲಿದ್ದು, ಸಂಸದ ಆರ್.ಧ್ರುವನಾರಾಯಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಡಾ.ಯತೀಂದ್ರ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮೇಳದಲ್ಲಿ ಮೈಸೂರು ಹಾಗೂ ಬೆಂಗಳೂರಿನ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಖಾಸಗಿ ಕಂಪನಿಗಳು 100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿವೆ. ಮಾರುಕಟ್ಟೆ, ಹಣಕಾಸು, ಇನ್ಶೂರೆನ್ಸ್, ಕೈಗಾರಿಕೆ, ವೈದ್ಯಕೀಯ ಕ್ಷೇತ್ರ ಸೇರಿದಂತೆ ನಾನಾ ವಲಯಗಳ ಖಾಸಗಿ ಕಂಪನಿಗಳು ಸಂದರ್ಶನ ನಡೆಸಿ ಉದ್ಯೋಕಾಂಕ್ಷಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ವಿತರಣೆ ಮಾಡಲಿದ್ದಾರೆ. ಅಂದು ಸಂಜೆ 4 ಗಂಟೆಯವರೆಗೆ ಮೇಳ ನಡೆಯಲಿದ್ದು, 7ನೇ ತರಗತಿಯಿಂದ ಎಸ್‍ಎಸ್‍ಎಲ್‍ಸಿ ಪಾಸ್ ಅಥವಾ ಫೇಲ್ ಆದ ಉದ್ಯೋಗಾ ಕಾಂಕ್ಷಿಗಳು ಸಹ ಮೇಳದಲ್ಲಿ ಭಾಗವಹಿಸಬಹುದು ಎಂದರು. ಇದರೊಂದಿಗೆ ಪಿಯುಸಿ, ಐಟಿಐ, ಡಿಪ್ಲೋಮಾ, ಬಿಎಸ್‍ಸಿ ಸೇರಿದಂತೆ ಎಲ್ಲಾ ವಿಷಯಗಳ ಸ್ನಾತಕೋತ್ತರ ಪದವೀ ಧರರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಸ್ಥಳದಲ್ಲೇ ನೋಂದಣಿಗೆ ಅವ ಕಾಶವಿದ್ದು, 2 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿವರಗಳಿಗೆ ಮೊ.ಸಂ. 9620485806, 9740840993, 9449223297 ಅನ್ನು ಸಂಪರ್ಕಿಸಬಹುದು ಎಂದರು. ಜಿಪಂ ಸದಸ್ಯೆ ಲತಾಸಿದ್ದಶೆಟ್ಟಿ, ನಂಜನಗೂಡು ನಗರಸಭೆ ಸದಸ್ಯೆ ಪುಷ್ಪಲತಾ ಕಮಲೇಶ್, ಮೇಳದ ಸಂಯೋಜನಾಧಿಕಾರಿ ಕುಮಾರ್ ಉಪ್ಪಾರ್, ಕಾಂಗ್ರೆಸ್ ಮುಖಂಡರಾದ ಬಸವರಾಜು, ಗುರುಸ್ವಾಮಿ ಗೋಷ್ಠಿಯಲ್ಲಿದ್ದರು.

Translate »