ಮೊದಲು ರೈತರಿಗೆ ನೀರು ಕೊಡಿ ನಂತರ ಕೆಆರ್‍ಎಸ್‍ನಲ್ಲಿ ಡಿಸ್ನಿ-ಪಸ್ನಿ ಮಾಡಿಕೊಳ್ಳಿ…
ಮೈಸೂರು

ಮೊದಲು ರೈತರಿಗೆ ನೀರು ಕೊಡಿ ನಂತರ ಕೆಆರ್‍ಎಸ್‍ನಲ್ಲಿ ಡಿಸ್ನಿ-ಪಸ್ನಿ ಮಾಡಿಕೊಳ್ಳಿ…

December 14, 2018

ಬೆಳಗಾವಿ(ಸುವರ್ಣಸೌಧ): ಕೃಷ್ಣರಾಜ ಸಾಗರ ಅಣೆಕಟ್ಟು ಕೆಳಭಾಗ ದಲ್ಲಿ 1500 ಕೋಟಿ ರೂ. ವೆಚ್ಚ ಮಾಡಿ ಡಿಸ್ನಿಲ್ಯಾಂಡ್ ನಿರ್ಮಿಸುವ ಬದಲು ಆಲಮಟ್ಟಿ ಜಲಾಶಯದ ಯೋಜನೆಗಳನ್ನು ಪೂರ್ಣಗೊಳಿಸಿ ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿಂದು ಆಗ್ರಹಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಯಶವಂತರಾಯಗೌಡ ವಿಠಲಗೌಡ ಪಾಟೀಲ್ ಪ್ರಸ್ತಾವ ಮಾಡಿದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಪ್ರತಿಪಕ್ಷದ ನಾಯಕ, ಹೊಸ ಸರ್ಕಾರ ಬಂದ ನಂತರ ನೀರಾವರಿ ಯೋಜನೆಗಳು ಕುಂಠಿತಗೊಂಡಿವೆ ಎಂದರು.

ದಿನನಿತ್ಯ ರೈತರ ಬಗ್ಗೆ ಮಾತನಾಡುವ ನೀವು, ಮೊದಲು ಅವರ ಹೊಲಕ್ಕೆ ಮತ್ತು ಕುಡಿಯಲು ನೀರು ಕಲ್ಪಿಸಿ, ನಂತರ ಡಿಸ್ನಿ-ಪಸ್ನಿ ಲ್ಯಾಂಡ್ ಮಾಡಿ ಎಂದು ಕಿಡಿಕಾರಿದರು. ಇದಕ್ಕೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಡಿಸ್ನಿಲ್ಯಾಂಡ್ ಯೋಜನೆಗೆ ಸರ್ಕಾರ ಒಂದು ನಯಾ ಪೈಸೆ ಬಂಡವಾಳ ಹೂಡುತ್ತಿಲ್ಲ. ನಮ್ಮದು ಜಾಗವಷ್ಟೆ, ಅದಕ್ಕೆ ಖಾಸಗಿ ಜಮೀನು ಬೇಕಿದ್ದರೂ ಯೋಜನೆ ಕೈಗೆತ್ತಿಕೊಳ್ಳುವವರೇ ಹಣ ಹೂಡಬೇಕು.

ಯೋಜನೆ ಅನುಷ್ಠಾನ ನಂತರ ಸರ್ಕಾರಕ್ಕೆ ವಾರ್ಷಿಕ 30ರಿಂದ 50 ಕೋಟಿ ರೂ.ವರೆಗೂ ಆದಾಯ ಬರಲಿದೆ ಎಂದರು. ರಾಜ್ಯವನ್ನು ವಿಭಜಿಸಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಅಖಂಡ ಕರ್ನಾಟಕದಲ್ಲಿ ಎಲ್ಲಾ ಭಾಗವೂ ಒಂದೇ, ನಮ್ಮ ಸರ್ಕಾರ ಕೃಷಿಗೆ ಹೆಚ್ಚು ಆದ್ಯತೆ ನೀಡಿದೆ. ಇದಕ್ಕೆ ಪೂರಕವಾಗಿ ನಾವು ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು ಪೂರ್ಣಗೊಳಿಸುತ್ತೇವೆ ಎಂದು ಸಮಜಾಯಿಷಿ ನೀಡಿದರು. ನೀರಾವರಿ ಯೋಜನೆಗಳ ಬಗ್ಗೆ ಸದಸ್ಯರು ಮತ್ತಷ್ಟು ಬೆಳಕು ಚೆಲ್ಲಲಿ, ಚರ್ಚೆಗಾಗಿ ಒಂದು ದಿನ ಮೀಸಲಿಡಿ ಎಂದು ಸಚಿವರೇ, ಸಭಾಧ್ಯಕ್ಷ ರಮೇಶ್‍ಕುಮಾರ್ ಅವರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಭಾಧ್ಯಕ್ಷರು, ಮಂಗಳವಾರ ಚರ್ಚೆಗೆ ಮೀಸಲಿಡುತ್ತೇನೆ, ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಬೆಳಕು ಚೆಲ್ಲಲಿ ಎಂದರು. ಮುಂದುವರಿದು ಮಾತನಾಡಿದ ಸಚಿವರು, ಆಲಮಟ್ಟಿ ಅಣೆಕಟ್ಟನ್ನು 524.25 ಮೀಟರ್‍ಗೆ ಏರಿಸಲು ಸರ್ಕಾರ ಸಿದ್ಧವಿದೆ, ಭೂಸ್ವಾಧೀನಕ್ಕೆ 30,000 ಕೋಟಿ ರೂ. ಅಗತ್ಯವಿದೆ, ಕೃಷ್ಣ ನ್ಯಾಯಾಧೀಕರಣದ ಅಂತಿಮ ತೀರ್ಪಿಗೆ ಸರ್ವೋಚ್ಛ ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ವಿಳಂಬವಾಗುತ್ತಿದೆ ಎಂದರು.

 

Translate »