ಮೈಸೂರಲ್ಲಿ ರೈತರಿಂದ ದಿಢೀರ್ ಹೆದ್ದಾರಿ ತಡೆ
ಮೈಸೂರು

ಮೈಸೂರಲ್ಲಿ ರೈತರಿಂದ ದಿಢೀರ್ ಹೆದ್ದಾರಿ ತಡೆ

December 14, 2018

ಮೈಸೂರು:  ಕಬ್ಬು ಬೆಳೆಗಾರರು ಸೇರಿದಂತೆ ರೈತ ಸಮು ದಾಯದ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯ ದಲ್ಲಿ ಗುರುವಾರ ರೈತರು ದಿಢೀರ್ ರಸ್ತೆ ತಡೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ಎಪಿಎಂಸಿ ಸಮೀಪದ ರಿಂಗ್ ರಸ್ತೆ ಜಂಕ್ಷನ್‍ನಲ್ಲಿ ಜಮಾಯಿಸಿದ ರೈತರು, ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ದರು. ರೈತಪರ ಸರ್ಕಾರ ಎಂದು ಬಿಂಬಿಸಿ ಕೊಂಡಿರುವ ರಾಜ್ಯ ಸರ್ಕಾರ ರೈತ ಪರವಾದ ಯಾವುದೇ ನಿಲುವು ತಾಳದೇ ಕೈಚೆಲ್ಲಿದೆ. ಭತ್ತಕ್ಕೆ ಕ್ವಿಂಟಾಲ್‍ಗೆ 1750 ರೂ. ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಇದರೊಂದಿಗೆ ಪ್ರತಿ ಕ್ವಿಂಟಾಲ್‍ಗೆ 250 ರೂ. ಪ್ರೋತ್ಸಾಹ ಧನ ಸೇರಿಸಿ 2 ಸಾವಿರ ರೂ. ನೀಡಬೇಕು. ಜೊತೆಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಕಬ್ಬಿನ ಎಫ್‍ಆರ್‍ಪಿ ದರವನ್ನು ರೈತರ ಗದ್ದೆಯಲ್ಲಿನ ದರ (ಎಕ್ಸ್‍ಫೀಲ್ಡ್ ದರ) ಎಂದು ನಿಗದಿಗೊಳಿಸಬೇಕು. ಸಕ್ಕರೆ ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ರೈತರಿಗೆ ನಷ್ಟ ಉಂಟಾಗು ವಂತಹ ರೀತಿಯಲ್ಲಿ ಎಫ್‍ಆರ್‍ಇ ದರ ನಿಗದಿ ಮಾಡಿದೆ. ಪರಿಣಾಮ ಪ್ರತಿ ಟನ್‍ಗೆ 200 ರೂ. ನಷ್ಟ ಅನುಭವಿಸುವಂತಾಗಿದೆ. ಈ ಕೂಡಲೇ ಕೇಂದ್ರ ಸರ್ಕಾರ ಪುನರ್ ಪರಿಶೀಲನೆ ನಡೆಸಿ ಅನ್ಯಾಯ ಸರಿಪಡಿಸ ಬೇಕು. ಸರ್ಕಾರದ ಆದೇಶ ಧಿಕ್ಕರಿಸುವ ಹಾಗೂ ಕಾನೂನುಬದ್ಧವಾಗಿ ಕಬ್ಬಿನ ಹಣ ಪಾವತಿಸದೇ ವಿಳಂಬ ಮಾಡುವ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ದಂಡ ಹಾಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರದ ಕಬ್ಬಿನ ಎಫ್‍ಆರ್‍ಪಿ ಬೆಲೆ ನಿಗದಿ ಮಾಡುವಾಗ ಎಥನಾಲ್‍ನಿಂದ ಬರುವ ಲಾಭಾಂಶವನ್ನು ರೈತರಿಗೆ ಹಂಚಿಕೆ ಮಾಡುವ ಮಾನದಂಡ ಅನುಸರಿಸುವಂತೆ ಎಫ್‍ಆರ್‍ಪಿ ಕಾನೂ ನಿಗೆ ತಿದ್ದುಪಡಿ ತರಬೇಕು. ಸಕ್ಕರೆಯನ್ನು ಶೇ.73ರಷ್ಟು ವಾಣಿಜ್ಯ ಬಳಕೆಗೆ ಉಪ ಯೋಗಿಸಲಾಗುತ್ತದೆ. ಇದಕ್ಕೆ ವಾಣಿಜ್ಯ ದರ ನಿಗದಿಗೊಳಿಸಬೇಕು. ಗ್ರಾಹಕರು ಬಳಕೆ ಮಾಡುವ ಶೇ.29ರಷ್ಟು ಸಕ್ಕರೆಗೆ ನಿಗದಿತ ದರ ಘೋಷಣೆ ಮಾಡಬೇಕು. ಕಬ್ಬಿನ ಎಫ್‍ಆರ್‍ಪಿ ದರವನ್ನು ಎಕ್ಸ್‍ಫೀಲ್ಡ್ ದರ ಎಂದು ಘೋಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಕ್ಕರೆ ಕಾರ್ಖಾನೆಗಳು ಹಾಗೂ ಕಬ್ಬು ಬೆಳೆಗಾರರ ನಡುವೆ ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ರಾಜ್ಯ ಸರ್ಕಾರ ಕಾನೂನು ಬದ್ಧಗೊಳಿಸಿದೆ. ಆದರೆ ಬಹುತೇಕ ಕಾರ್ಖಾನೆ ಗಳು ಇದನ್ನು ಪಾಲನೆ ಮಾಡುತ್ತಿಲ್ಲ. ಈ ಸಂಬಂಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಉತ್ತರ ಪ್ರದೇಶ ಸರ್ಕಾರ ಕಬ್ಬಿನ ಎಫ್‍ಆರ್‍ಪಿ ದರದ ಮೇಲೆ ಹೆಚ್ಚು ವರಿ ಬೆಲೆ ನಿಗದಿ ಮಾಡಿದೆ. ಇದೇ ಮಾದರಿ ಯಲ್ಲಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಎಫ್‍ಆರ್‍ಪಿ ದರದ ಮೇಲೆ ಹೆಚ್ಚುವರಿ ಯಾಗಿ ಪ್ರತಿ ಟನ್‍ಗೆ 300 ರೂ. ದರ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಧ್ಯಕ್ಷ ಪಿ.ಸೋಮಶೇಖರ್, ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಮುಖಂಡರಾದ ಬಿ.ಪಿ.ಪರಶಿವಮೂರ್ತಿ, ಕುರುಬೂರ್ ಸಿದ್ದೇಶ್ ಸೇರಿದಂತೆ ಹಲವು ಮಂದಿ ರೈತರು ಪಾಲ್ಗೊಂಡಿದ್ದರು.

Translate »