ನಾಳೆ ಜಾಗತಿಕ ಲಿಂಗಾಯತ ಮಹಾಸಭಾ ಉದ್ಘಾಟನೆ
ಚಾಮರಾಜನಗರ

ನಾಳೆ ಜಾಗತಿಕ ಲಿಂಗಾಯತ ಮಹಾಸಭಾ ಉದ್ಘಾಟನೆ

July 25, 2018

ಕೊಳ್ಳೇಗಾಲ:  ಚಾಮರಾಜ ನಗರ ಶ್ರೀಶಿವಕುಮಾರಸ್ವಾಮಿ ಭವನದಲ್ಲಿ ಜು.26ರಂದು ಬೆಳಿಗ್ಗೆ 10.30ಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ(ರಿ) ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಲಿಂಗಾಯತ -ಸ್ವತಂತ್ರಧರ್ಮ ಕುರಿತ ಜಾಗೃತಿ ಸಮಾ ವೇಶ ಕಾರ್ಯಕ್ರಮ ನಡೆಯಲಿದ್ದು, ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಬಂಧುಗಳು ಹಾಗೂ ಬಸವ ಭಕ್ತರು ಪಾಲ್ಗೊಳ್ಳುವಂತೆ ಜಾಗತಿಕ ಮಹಾಸಭಾ ಅಧ್ಯಕ್ಷ ಸುಂದ್ರಪ್ಪ ಅವರು ಗುರುಮಲ್ಲೇಶ್ವರ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

12ನೇ ಶತಮಾನದಲ್ಲಿ ಬಸವಣ್ಣನವ ರಿಂದ ಸ್ಥಾಪಿಸಲ್ಪಟ್ಟ ಲಿಂಗಾಯತ ಧರ್ಮ ಅತ್ಯಂತ ಪ್ರಮುಖ ಹಾಗೂ ಸ್ವತಂತ್ರ ಧರ್ಮ ವಾಗಿದೆ. ಧರ್ಮ ಸ್ಥಾಪನೆಗೊಂಡು 900 ವರ್ಷ ಕಳೆದರೂ ಹಲವಾರು ಕಾರಣಗಳಿಂದ ಸ್ವತಂತ್ರ ಧರ್ಮವಾಗಿ ಪರಿಪೂರ್ಣ ವಾಗಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಸ್ವತಂತ್ರ ಬಂದು 70 ವರ್ಷ ಕಳೆದರು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕಿಲ್ಲ, ಇದಕ್ಕೆ ಲಿಂಗಾಯತ ಸಮಾಜದ ಜನರಲ್ಲಿನ ಅರಿವಿನ ಕೊರತೆ. ಹೋರಾಟ ಸರಿಯಾದ ದಿಕ್ಕಿನಲ್ಲಿ ಸಾಗದೆ ಇರುವುದು ಪ್ರಮುಖ ಕಾರಣ. ಬ್ರಿಟೀಷರ ಅಧಿಕಾರಾವಧಿಯಲ್ಲಿ ಲಿಂಗಾಯತ ಒಂದು ಸ್ವತಂತ್ರ ಧರ್ಮವೆಂದು ಪರಿಗಣಿಸಲ್ಪಟ್ಟಿತ್ತು. ಸ್ವಾತಂತ್ರ್ಯ ನಂತರ ಪಟ್ಟಭದ್ರ ಹಿತಾಸಕ್ತಿ ಗಳು ಹಾಗೂ ಲಿಂಗಾಯತ ಧರ್ಮ ವಿರೋ ಧಿಗಳ ಕುತಂತ್ರದಿಂದ ಸ್ವತಂತ್ರ ಧರ್ಮದ ಮಾನ್ಯತೆ ದೊರೆಯಲಿಲ್ಲ ಎಂದರು.

ಲಿಂಗಾಯತ ಧರ್ಮ ಇತರೆ ಧರ್ಮಗಳಿ ಗಿಂತ ವಿಭಿನ್ನವಾಗಿದ್ದು ಇದು ಎಲ್ಲರನ್ನು ಒಳಗೊಂಡ ಧರ್ಮ. ಸ್ತ್ರೀಯರಿಗೆ ಸಮಾನತೆಯನ್ನು ನೀಡಿದ ಮೊದಲ ಧರ್ಮ, ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ ಶರಣ ಧರ್ಮ, ವೈಚಾರಿಕತೆಯ ಜೊತೆಗೆ ಸಾಮಾಜಿಕ ಅನಿಷ್ಟ ಪದ್ದತಿಗಳನ್ನು ದೂರ ಮಾಡುವ, ಸಮಾನತೆ ಸಾರುವ ಧರ್ಮ ಇದಾಗಿದೆ. ಲಿಂಗಾಯತರು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿಯುತ್ತಿರುವುದಕ್ಕೆ ಸರಕಾರದಿಂದ ಯಾವುದೇ ಮೀಸಲಾತಿಯಾಗಲಿ ಸವಲತ್ತುಗಳಾಗಲಿ ದೊರೆಯದೆ ಇರುವುದು ಪ್ರಮುಖ ಕಾರಣ. ಸಿಖ್, ಜೈನ ಮುಂತಾದ ಧರ್ಮಗಳಿಗೆ ಸ್ವತಂತ್ರ ಮಾನ್ಯತೆ ಸಿಕ್ಕಿದ್ದು ಲಿಂಗಾಯತ ಧರ್ಮಕ್ಕೂ ಸ್ವತಂತ್ರ ಧರ್ಮದ ಮಾನ್ಯತೆ ದೊರಕಬೇಕಿದೆ. ಇದಕ್ಕಾಗಿ ಜಾಗತಿಕ ಲಿಂಗಾಯತ ಮಹಾಸಭಾ ಹೋರಟ ನಡೆಸುತ್ತಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಾಣೆಹಳ್ಳಿ ತರಳಬಾಳು ಶಾಖಾ ಮಠದ ಪೀಠಾಧ್ಯಕ್ಷರಾದ ಡಾ.ಪಂಡಿತಾ ರಾಧ್ಯಶಿವಾಚಾರ್ಯ ಸ್ವಾಮೀಜಿ ಹಾಗೂ ದೇವನೂರು ಗುರುಮಲ್ಲೇಶ್ವರ ಮಹಾಸಂಸ್ಥಾ ನದ ಮಠಾಧ್ಯಕ್ಷರಾದ ಮಹಾಂತಸ್ವಾಮೀಜಿ ಯವರು ವಹಿಸುವರು. ಮರಿಯಾಲ ಶ್ರೀ ಮುರುಘರಾಜೇಂದ್ರಸ್ವಾಮಿ ಮಹಾ ಸಂಸ್ಥಾನ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಉದ್ಘಾಟಿಸುವರು. ಕೂಡಲಸಂಗಮ ಬಸವ ಮೃತ್ಯುಂಜಯ ಸ್ವಾಮೀಜಿ, ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ, ಚಾಮರಾಜನಗರ ಸಿದ್ದ ಮಲ್ಲೇಶ್ವರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ. ಚಿಕ್ಕಮಗಳೂರು ಜಿಲ್ಲೆ ಕೆ.ಆರ್.ಪುರ ಮಠದ ಬಸವಯೋಗಿ ಪ್ರಭು ಸ್ವಾಮಿಗಳು ದಿವ್ಯ ಸಮ್ಮುಖ ವಹಿಸುವರು. ಜಾಗತಿಕ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕೆರೆನೀರು ಗುರುಸ್ವಾಮಿ ಅಧ್ಯಕ್ಷತೆ ವಹಿಸುವರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಬಿ.ಪಾಟೀಲ್, ರಾಜ್ಯ ಪ್ರಧಾನ ಕಾರ್ಯ ದರ್ಶಿ ಎಸ್.ಜಯಣ್ಣ. ರಾಜ್ಯ ಕಾರ್ಯದರ್ಶಿ ಶ್ರೀಕಾಂತಸ್ವಾಮಿ, ರಾಜ್ಯ ಕಾರ್ಯದರ್ಶಿ ಮಹಾದೇವಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾ ಧ್ಯಕ್ಷ ಶಶಿಕುಮಾರ್, ಮಹಿಳಾ ಉಪಾಧ್ಯಕ್ಷೆ ರಾಧ ನಿರಂಜನ್, ಗ್ರಾಮೀಣ ವಿಭಾಗದ ಸಂಚಾಲಕಿ ಬಸವಮ್ಮಣ್ಣಿ ಹಾಜರಿದ್ದರು.

Translate »