ಹಾಸನ: ಹಳೆ ಬಸ್ ನಿಲ್ದಾಣ ಬಳಿ ಶ್ರೀ ಗಣಪತಿ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ 64ನೇ ವರ್ಷದ ಪೆಂಡಲ್ ಗಣಪತಿ ವಿಸರ್ಜನಾ ಮಹೋತ್ಸವ ಈ ಬಾರಿ ಸರಳವಾಗಿ ನೆರವೇರಿತ್ತಾದರೂ ಹೂವಿನ ಅಂಬಾರಿ, ಸಾಂಸ್ಕೃತಿಕ ಕಲಾ ತಂಡಗಳು ನೋಡುಗರ ಗಮನ ಸೆಳೆಯಿತು.
ಪ್ರತಿವರ್ಷ ವಿವಿಧ ಕಲಾತಂಡದೊಡನೆ ಅದ್ಧೂರಿಯಾಗಿ ವಿಸರ್ಜನಾ ಮಹೋ ತ್ಸವ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಕೊಡಗು ನೆರೆಸಂತ್ರಸ್ತರ ನೆರವಿಗೆ ಹಣ ನೀಡಿದ್ದರಿಂದ ವಿವಿಧ ಕಲಾತಂಡಗಳನ್ನು ರದ್ದು ಮಾಡಲಾಗಿತ್ತು. ಹಾಗಾಗಿ ಮೆರವಣಿಗೆಯಲ್ಲಿ ಅಷ್ಟೊಂದು ಸಂಭ್ರಮ ಕಂಡು ಬರಲಿಲ್ಲ. ಆದರೆ ಗಣಪತಿ ಹೊತ್ತ ಹೂವಿನಿಂದ ಮಾಡಿದ ಅಂಬಾರಿ, ವಿವಿಧ ಕಲಾಕೃತಿಗಳು ಮಹೋತ್ಸವದ ಮೆರುಗನ್ನೇ ಹೆಚ್ಚಿಸಿದವು.
ವಿಸರ್ಜನಾ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 10.50ಕ್ಕೆ ಶ್ರೀ ಗಣಪತಿ ಹಾಗೂ ಗೌರಮ್ಮ ಮೂರ್ತಿಳಿಗೆ ವಿಶೇಷ ಪೂಜೆ ಸಲ್ಲಿಸಿ ಅಲಂಕರಿಸಿದ್ದ ಹೂವಿನ ಮಂಟಪದಲ್ಲಿ ಕೂರಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ, ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಹೆಚ್. ನಾಗರಾಜು, ಉಪಾಧ್ಯಕ್ಷ ಹೆಚ್. ಆರ್. ಕಸ್ತೂರಿ ರಂಗಾಚಾರ್ ಇತರರು ಮಂಟಪಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿ ಗೆಗೆ ಚಾಲನೆ ನೀಡಿದರು.
ವೈಭವ ಪೂರ್ಣ ಪುಷ್ಪಾಲಂಕೃತ ಮೆರವಣಿಗೆಯು ನಗರದ ಪ್ರಮುಖ ರಾಜ ಬೀದಿಗಳಲ್ಲಿ ಸಂಚರಿಸಿ ಸಂಜೆ 7 ಗಂಟೆಗೆ ದೇವಿ ಕೆರೆ ತಲುಪಿತು. ನಂತರ ತೆಪ್ಪೋತ್ಸವ ನೆರವೇರಿಸಿದ ಬಳಿಕ ಮೂರ್ತಿ ಗಳನ್ನು ವಿಸರ್ಜಿಸಲಾಯಿತು.
ಮೆರವಣಿಗೆಯಲ್ಲಿ ಸ್ಯಾಕ್ಷೋಫೋನ್, ನಾದಸ್ವರ, ನಂದಿಧ್ವಜ, ಜೋಡಿ ಬೃಹತ್ ಎತ್ತುಗಳು, ಮಹಾತ್ಮ ಗಾಂಧೀಜಿ, ಲೋಕಮಾನ್ಯ ಬಾಲ ಗಂಗಾಧರನಾಥ್ ತಿಲಕ್ ಸ್ತಬ್ಧಚಿತ್ರ, ಡೋಲುಗಳು, ಕಳಸ ಹೊತ್ತ ಮಹಿಳೆಯರ ತಂಡ ಉತ್ಸವಕ್ಕೆ ಮೆರಗು ನೀಡಿತು. ಭಕ್ತಾದಿಗಳಿಗೆ ಲಾಡು ಪ್ರಸಾದ ವಿತರಿಸಲಾಯಿತು.
ಕಾರ್ಯದರ್ಶಿ ಚನ್ನ ವೀರಪ್ಪ, ಸಹ ಕಾರ್ಯದರ್ಶಿ ವೈ.ಎಸ್. ಮುರು ಗೇಂದ್ರ, ಅನಂತರಾವ್, ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಗಿರೀಶ್ ಚನ್ನ ವೀರಪ್ಪ, ಕಮಲ್ ಕುಮಾರ್, ಸಮಾಜ ಸೇವಕ ಆರ್.ಕೆ.ಸ್ವರೂಪ್ ಇತರರಿದ್ದರು.