ಮನಸ್ಸಿಲ್ಲದಿದ್ದರೂ ಉನ್ನತ ಶಿಕ್ಷಣ ಖಾತೆ ವಹಿಸಿಕೊಂಡ ಜಿ.ಟಿ. ದೇವೇಗೌಡ
ಮೈಸೂರು

ಮನಸ್ಸಿಲ್ಲದಿದ್ದರೂ ಉನ್ನತ ಶಿಕ್ಷಣ ಖಾತೆ ವಹಿಸಿಕೊಂಡ ಜಿ.ಟಿ. ದೇವೇಗೌಡ

June 23, 2018

ಬೆಂಗಳೂರು: ತಮಗೆ ದೊರೆತ ಖಾತೆ ವಹಿಸಿ ಕೊಳ್ಳಲು ಮೊದಲು ಹಿಂಜರಿದಿದ್ದ ಜಿ.ಟಿ. ದೇವೇಗೌಡ ಅವರು ಇಂದು ಉನ್ನತ ಶಿಕ್ಷಣ ಇಲಾಖೆಯ ಹೊಣೆಗಾರಿಕೆಯನ್ನು ಕೊನೆಗೂ ವಹಿಸಿ ಕೊಂಡರು. ವಿಧಾನಸೌಧದ 3ನೇ ಮಹಡಿಯ ತಮ್ಮ ಕೊಠಡಿಯಲ್ಲಿ ಪೂಜೆ ಸಲ್ಲಿಸಿ, ಮುಖ್ಯಮಂತ್ರಿ ಕುಮಾರಸ್ವಾಮಿ ವಹಿಸಿಕೊಟ್ಟ ಹೊಣೆ ಗಾರಿಕೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಇಲಾಖಾ ಅಧಿಕಾರಿಗಳು, ಸಂಪುಟದ ಇತರೆ ಸಚಿವರು, ಸ್ನೇಹಿತರು, ಹಿತೈಷಿ ಗಳು, ಪಕ್ಷದ ಕಾರ್ಯಕರ್ತರು ಶುಭ ಕೋರಿದರು. ನನ್ನ ವಿದ್ಯಾ ಭ್ಯಾಸವೇ 8ನೇ ತರಗತಿ, ನಾನು ಹೇಗೆ ಉನ್ನತ ಶಿಕ್ಷಣ ಹೊಣೆಗಾರಿಕೆ ನಿರ್ವಹಿಸಲಿ ಎಂದು ತಮ್ಮ ಸಂಕಷ್ಟ ತೋಡಿಕೊಂಡಿದ್ದ ದೇವೇ ಗೌಡ ಅವರು, ತಮಗೆ ಗ್ರಾಮೀಣ ಜನಸಂಪರ್ಕ ಇರುವ ಖಾತೆ ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಪಕ್ಷದ ಹಿರಿಯ ನಾಯಕ ದೇವೇಗೌಡ ಅವರಲ್ಲಿ ಮನವಿ ಮಾಡಿದ್ದರು.

ಇದಕ್ಕೆ ಸ್ಪಂದಿಸಿ ಖಾತೆ ಬದ ಲಾವಣೆಗೂ ಕುಮಾರಸ್ವಾಮಿ ಹೊರಟಿದ್ದರು, ಆದರೆ ಮೈತ್ರಿ ಸರ್ಕಾ ರದಲ್ಲಿ ತಕ್ಷಣಕ್ಕೆ ಅದು ಸುಲಭವಾಗ ಲಿಲ್ಲ. ನಿನ್ನೆ ಮತ್ತೆ ಗೌಡರ ಮನ ವೊಲಿಸಿ,  ಉನ್ನತ ಶಿಕ್ಷಣ ಹೊಣೆಗಾರಿಕೆ ಒಪ್ಪಿಕೊಳ್ಳುವಂತೆ ಸಲಹೆ ನೀಡಿದರು. ಮುಖ್ಯಮಂತ್ರಿ ಅವರಷ್ಟೇ ಅಲ್ಲ ದೊಡ್ಡಗೌಡರು ಕೂಡ ನಿನ್ನೆ ಜಿ.ಟಿ. ದೇವೇಗೌಡರನ್ನು ಮನೆಗೆ ಕರೆಸಿಕೊಂಡು, ಓದು-ಬರಹ ಬಾರದ ಕಾಮರಾಜ್ ಬರೀ ಹೆಬ್ಬೆಟ್ಟಿನಲ್ಲೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಒಳ್ಳೆ ಅಧಿಕಾರ ನೀಡಿ, ಪ್ರಧಾನಿ ಆಗುವ ಮಟ್ಟಕ್ಕೂ ಬೆಳೆದಿದ್ದರು.

ಕಾಮರಾಜ್ ಅವರ ಕೀರ್ತಿ ಇಡೀ ರಾಷ್ಟ್ರಕ್ಕಲ್ಲದೆ, ಇಡೀ ವಿಶ್ವಕ್ಕೆ ಮಾದರಿಯಾಗಿತ್ತು. ನೀನೇನೂ ಹೆಬ್ಬೆಟ್ಟಲ್ಲ, ನಿನಗೆ ವಹಿಸಿರುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿ, ನೀನು ಏನು ಎಂಬುದನ್ನು ಸಾಧಿಸಿ ತೋರಿಸು ಎಂದು ಕಿವಿಮಾತು ಹೇಳಿ ಕಳುಹಿಸಿದ್ದರು. ಪಕ್ಷದ ಆದೇಶಕ್ಕೆ ಮಣಿದ ಜಿಟಿಡಿ ಇಂದು ಇಲಾಖೆ ಹೊಣೆಗಾರಿಕೆ ವಹಿಸಿಕೊಂಡು, ಕಾರ್ಯಪ್ರವೃತ್ತರಾದರು. ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಉನ್ನತ ಶಿಕ್ಷಣದಲ್ಲಿ ಬದಲಾವಣೆ ತರಲಾಗುವುದು ಎಂದರು.

ಇಂತಹ ದೊಡ್ಡ ಇಲಾಖೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದಾಗಿ ಹೇಳಿದರು. ಉನ್ನತ ಶಿಕ್ಷಣ ದೊಡ್ಡ ಖಾತೆಯಾಗಿದ್ದು, ಅದರ ಬಗ್ಗೆ ಹಗುರವಾಗಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪ್ರೊ .ರಂಗಪ್ಪ ಸೇರಿದಂತೆ ಶಿಕ್ಷಣ ತಜ್ಞರ ಸಭೆ ಕರೆದು ಅವರ ಸಲಹೆ ಪಡೆದು ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲಾಗುವುದು ಎಂದು ಹೇಳಿದರು. ಉನ್ನತ ಶಿಕ್ಷಣ ಪಡೆಯುವವರ ಶೇಕಡಾವಾರು ಪ್ರಮಾಣ ಹೆಚ್ಚಳಕ್ಕೆ ಪ್ರಯತ್ನಿಸಲಾಗುವುದು. ಪ್ರಸ್ತುತ ಶೇ.25ರಷ್ಟು ಮಂದಿ ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿ ದ್ದಾರೆ. ಗ್ರಾಮೀಣ ಪ್ರದೇಶದ ಜನರ ಜತೆ ಇರಬೇಕೆಂಬ ಆಸೆ ಇತ್ತು. ತಾವು 8ನೆ ತರಗತಿ ಓದಿದ್ದು, ಹೇಗೆ ಉನ್ನತ ಶಿಕ್ಷಣ ನಿಭಾಯಿಸುತ್ತಾರೆ ಎಂಬ ಟೀಕೆ ಕೇಳಿಬಂದವು.

ತಮ್ಮ ತಂದೆ ನಿಧನರಾದ ಕಾರಣದಿಂದ ಹೆಚ್ಚಿನ ಶಿಕ್ಷಣ ಪಡೆಯಲು ಸಾಧ್ಯವಾಗ ಲಿಲ್ಲ, ಆದರೆ, ತಮ್ಮ ಮಕ್ಕಳು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಂಗಪ್ಪ ಅವರನ್ನು ಉನ್ನತ ಶಿಕ್ಷಣ ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಸಲಹೆ ಮಾಡಿಲ್ಲ. ರಂಗಪ್ಪ ಅವರು ಕೂಡ ನಮ್ಮ ಸಲಹೆಗಳನ್ನು ತೆಗೆದುಕೊಳ್ಳಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಕಂದಾಯ, ನೀರಾವರಿ ಖಾತೆಗಳನ್ನು ಕೇಳಿದ್ದೆವು. ಆದರೆ, ಆ ಖಾತೆಗಳು ಕಾಂಗ್ರೆಸ್ ಪಕ್ಷದ ಪಾಲಾಗಿವೆ. ಬೇರೆ ಖಾತೆಯನ್ನು ಕೂಡ ಬಯಸುವುದಿಲ್ಲ ಎಂದರು.

Translate »