ರಾಮನಾಥಪುರ: ನಿರ್ಮಾಣ ಹಂತದಲ್ಲಿರುವ ಹಂಪಾಪುರ- ಮಲ್ಲಿನಾಥಪುರ ನಡುವಿನ ರಸ್ತೆ ಡಾಂಬರೀಕರಣ ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಾಮನಾಥಪುರ ಹೋಬಳಿಯ ಮಲ್ಲಿನಾಥಪುರದಿಂದ ಹಂಪಾಪುರಕ್ಕೆ ತೆರಳುವ 6 ಕಿಮೀ ಉದ್ದದ ಈ ರಸ್ತೆಗೆ ಕೆಲ ದಿನಗಳಿಂದ ಹೊಸದಾಗಿ ಡಾಂಬರೀಕರಣ ಮಾಡಲಾಗುತ್ತಿದೆ. ನಿರ್ಮಾಣ ಹಂತದಲ್ಲಿರುವ ಕಾಮಗಾರಿಗೆ ಈಗಾಗಲೇ 2 ಕಿಮೀ ಉದ್ದದಷ್ಟು ಡಾಂಬರೀಕರಣ ಹಾಕಲಾಗಿದ್ದು, ಪೂರ್ತಿ ಕಳಪೆಯಾಗಿದೆ. ಪರಿಣಾಮವಾಗಿ ಕಾಲಿನಿಂದ ಒದ್ದರೆ ಡಾಂಬರು ಕಿತ್ತು ಬರುತ್ತಿದ್ದು ಹೆಚ್ಚು ಕಾಲ ಬಾಳಿಕೆ ಬಾರದಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರರು ರಸ್ತೆಗೆ 2 ಕಿಮೀ ಉದ್ದದವರೆಗೆ ಕಳಪೆಯಾಗಿ ಡಾಂಬರೀಕರಣ ಹಾಕುತ್ತಿ ದ್ದರೂ ಸಂಬಂಧಪಟ್ಟ ಹಾರಂಗಿ ಇಲಾಖೆ ಇಂಜಿನಿಯರ್‍ಗಳು ತಲೆ ಕೆಡಿಸಿಕೊಂಡಿಲ್ಲ. ಗುತ್ತಿಗೆದಾರರಿಗೆ ಸಹಕರಿಸುವ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡಲು ಹುನ್ನಾರ ನಡೆಸಿದ್ದಾರೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ತನಕ ಕೆಲಸ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಮಲ್ಲಿನಾಥಪುರದಿಂದ ಹಂಪಾಪುರ ಗ್ರಾಮಕ್ಕೆ ಹಾದು ಹೋಗಿರುವ ರಸ್ತೆ ಹದಗೆಟ್ಟು ಹೋಗಿತ್ತು. ಕಳೆದ ಬಾರಿ ಮಾಜಿ ಸಚಿವ ಎ.ಮಂಜು ಅವರ ಅಧಿಕಾರಾವಧಿಯಲ್ಲಿ 4 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಲಾ ಗಿತ್ತು. ಈಗ ಗುತ್ತಿಗೆದಾರರು ಡಾಂಬರೀಕರಣ ಕೆಲಸ ಕೈಗೆತ್ತಿಕೊಂಡಿದ್ದು, ತೇಪೆ ಹಾಕುತ್ತಿದ್ದಾರೆ. ಕಾಮಗಾರಿ ಕಳಪೆಯಾಗಿದ್ದು, ಡಾಂಬರೀಕರಣಕ್ಕಾಗಿ ಬಳಸಲು 6 ಲಾರಿಗಳಿಂದ ತರುತ್ತಿದ್ದ ಕಳಪೆ ಡಾಂಬರನ್ನು ತಡೆದು ಗ್ರಾಮಸ್ಥರು ವಾಪಾಸ್ಸು ಕಳುಹಿಸಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಗಂಗೂರು ಗ್ರಾಪಂ ಮಾಜಿ ಅಧ್ಯಕ್ಷ ಹಂಪಾಪುರ ಕುಮಾರ್ ಒತ್ತಾಯಿಸಿದ್ದಾರೆ.
ಗುತ್ತಿಗೆದಾರರು ಕಾಮಗಾರಿಗಾಗಿ ಡಾಂಬರು ಪಡೆದ ಕಂಪನಿ ಕಳಪೆ ಡಾಂಬರು ಪೂರೈಸುತ್ತಿದೆ. ಹೀಗಾಗಿ ಕಾಮಗಾರಿ ಕಳಪೆಯಾಗಿದ್ದರಿಂದ ನಾವೇ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಇದೀಗ ಕೆಲಸ ನಿಲ್ಲಿಸಲಾಗಿದೆ ಎಂದು ಹಾರಂಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಯರಾಮ್ ತಿಳಿಸಿದ್ದಾರೆ.