ಕೆ.ಆರ್.ನಗರ: ಹನುಮ ಜಯಂತಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಸಾಂಸ್ಕøತಿಕ ತಂಡದೊಂದಿಗೆ ಶೋಭಾಯಾತ್ರೆ ಅದ್ಧೂರಿಯಾಗಿ ನೆರವೇರಿತು.ನಗರದ ಆಂಜನೇಯ ಬ್ಲಾಕ್‍ನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗಾವಡಗೆರೆಯ ಗುರುಜಂಗಮ ಮಠದ ನಟರಾಜಸ್ವಾಮಿಗಳ ಸಮ್ಮುಖದಲ್ಲಿ ಪೂಜಾ ಕೈಂಕರ್ಯ ಜರುಗಿತು. ಬಳಿಕ ಶೋಭಾ ಯಾತ್ರೆಗೆ ಚಾಲನೆ ದೊರೆಯಿತು.
ಶೋಭಾ ಯಾತ್ರೆ ವೇಳೆ ರಾಜಸ್ಥಾನದ ವರ್ತಕರ ವೃಂದ ಹನುಮನ ಮೂರ್ತಿಗೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಪಾನಕ, ಸಿಹಿ ವಿತರಿಸಿ ಭಕ್ತಿ ಮೆರೆದರು.
ಈ ಸಂದರ್ಭದಲ್ಲಿ ಯುವ ಸಮೂಹ ಕೇಸರಿ ಟಿ-ಶರ್ಟ್, ರುಮಾಲು ಧರಿಸಿ ಗಮನ ಸೆಳೆದರಲ್ಲದೆ, ಕೇಸರಿ ಬಾವುಟ ಹಿಡಿದು ವಾದ್ಯ ವೃಂದದ ಸದ್ದಿಗೆ ಹೆಜ್ಜೆಗೆ ಹಾಕಿ ಸಂಭ್ರಮಿಸಿದರು.
ಈ ವೇಳೆ ಸಂಸದ ಪ್ರತಾಪಸಿಂಹ ಬಯಲು ರಂಗಮಂದಿರದ ಬಳಿ ಆಗಮಿಸಿ ಹನುಮ ಭಕ್ತರನ್ನು ಉದ್ದೇಶಿಸಿ ಮಾತ ನಾಡಿದರು. ಇಂದು ಮಧ್ಯಾಹ್ನ ಕೇಂದ್ರ ರೈಲ್ವೆ ಸಚಿವರು ಮೈಸೂರಿಗೆ ಆಗಮಿಸಲಿದ್ದು. ಅವರನ್ನು ಸ್ವಾಗತಿಸಬೇಕಾದ ಜವಾಬ್ದಾರಿ ಹಿನ್ನೆಲೆ ಯಲ್ಲಿ ಮೈಸೂರಿಗೆ ತೆರಳುತ್ತಿದ್ದು, ಅವಕಾಶ ಆದರೆ ಮತ್ತೆ ಬರುತ್ತೇನೆಂದು ತಿಳಿಸಿ ಶುಭ ಹಾರೈಸಿ ಹಿಂದಿರುಗಿದರು.
ಮೆರವಣಿಗೆಯಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್, ಜಿಪಂ ವಿಪಕ್ಷದ ನಾಯಕ ರವಿಶಂಕರ್, ತಾಲೂಕು ಬಿಜೆಪಿ ಅಧ್ಯಕ್ಷ ಹೊಸಳ್ಳಿ ವೆಂಕಟೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ, ಬಿಜಿಪಿ ಮುಖಂಡ ಹೇಮಂತ್ ಕುಮಾರ್, ಡಾ.ಯೋಗಾನಂದ್, ಪುರಸಭಾ ಸದಸ್ಯರಾದ ಉಮೇಶ್, ರಾಜಾ, ಶ್ರೀಕಾಂತ, ಸುಬ್ರಹ್ಮಣ್ಯ, ಮಾಜಿ ಪುರಸಭಾ ಅಧ್ಯಕ್ಷ ನರಸಿಂಹರಾಜು, ಹನುಮ ಜಯಂತಿ ಸಮಿತಿ ಸಂಚಾಲಕ ಯೋಗಾನಂದ, ಮುಖಂಡರಾದ ಪ್ರಸನ್ನ, ಕೃಷ್ಣಭಟ್ಟ, ಅನಂತರಾಜ, ಮುಕ್ಕೋಟಿ ಇನ್ನಿತರರಿದ್ದರು. ಎಎಸ್‍ಪಿ ಅರುಣ, ಇನ್ಸ್‍ಪೆಕ್ಟರ್ ರಘು, ಸಬ್‍ಇನ್ಸ್‍ಪೆಕ್ಟರ್ ಸುಬ್ರಹ್ಮಣ್ಯ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಏರ್ಪಡಿಸಿದ್ದರು.