ಚಾಮರಾಜನಗರ: ಸುಳವಾಡಿ ವಿಷ ಪ್ರಸಾದ ಪ್ರಕರಣದಲ್ಲಿ ಮೊದಲ ಹಾಗೂ 2ನೇ ಆರೋಪಿಗಳಾಗಿರುವ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಹಾಗೂ ಅಂಬಿಕಾ ಖತರ್ನಾಕ್ ದೋಸ್ತಿಗೆ 12 ವರ್ಷಗಳ ಇತಿಹಾಸ ವಿದೆ. ಇದು ತನಿಖೆಯ ವೇಳೆ ಬಯಲಾಗಿದೆ. ಈ ಇಬ್ಬರು ಅಂದಿನಿಂದಲೂ ಅತೀವ ಒಡ ನಾಟ ಹೊಂದಿದ್ದರು ಎಂಬುದನ್ನು ತಿಳಿದು ತನಿಖಾಧಿಕಾರಿಗಳೇ ದಂಗಾಗಿದ್ದಾರೆ. ದೂರದ ಸಂಬಂಧಿಗಳಾದ ಇಮ್ಮಡಿ ಮಹದೇವಸ್ವಾಮಿ ಹಾಗೂ ಅಂಬಿಕಾ ಮೂಲತಃ ಶಾಗ್ಯ ಗ್ರಾಮದವರು. ಕಳೆದ 2006ರಿಂದ ಇಬ್ಬರಿಗೂ ಪರಿ ಚಯವಿತ್ತು. ಆಗಲೇ ಮಾದೇಶ್‍ನೊಂದಿಗೆ ವಿವಾಹವಾಗಿದ್ದ ಅಂಬಿಕಾ, ಮಹದೇವಸ್ವಾಮಿ ಯೊಂದಿಗಿನ ಸಂಬಂಧದ ಫಲವಾಗಿ ತನ್ನ ಪತಿಗೆ ಕಿಚ್‍ಗುತ್ ದೇವಾಲಯದಲ್ಲಿ ವ್ಯವಸ್ಥಾಪಕ ಹುದ್ದೆಯನ್ನು ಕೊಡಿಸಿದ್ದರು ಎಂಬುದೂ ಸಹ ತನಿಖೆ ವೇಳೆ ಬಯಲಾಗಿದೆ.
ಅಶ್ಲೀಲ ಸಂದೇಶ ವಿನಿಮಯ: ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಇಬ್ಬರು ಪ್ರಮುಖ ಆರೋಪಿಗಳ ಪದಾರ್ಥಗಳನ್ನು
ಜಪ್ತಿ ಮಾಡಿದ ವೇಳೆ ಇವರ ಮೊಬೈಲ್‍ಗಳಲ್ಲಿದ್ದ ಅಶ್ಲೀಲ ಸಂಭಾಷಣೆ, ವಾಟ್ಸಾಪ್ ಸಂದೇಶ, ಮೆಸೇಜ್‍ಗಳನ್ನು ನೋಡಿ ತನಿಖಾಧಿಕಾರಿಗಳೇ ಹೇಸಿಗೆ ಪಟ್ಟಿದ್ದಾರೆ. ಪ್ರತಿ ನಿತ್ಯ ನೂರಾರು ಬಾರಿ ಸಂಭಾಷಣೆ, ವಾಟ್ಸಾಪ್ ಸಂದೇಶ ಹಾಗೂ ಮೆಸೇಜ್‍ಗಳು ಇವರಿಬ್ಬರ ನಡುವೆ ವಿನಿಮಯವಾಗಿವೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಕೀಯಕ್ಕೆ ಬರುವ ಆಸೆ: ಇಮ್ಮಡಿ ಮಹದೇವಸ್ವಾಮಿ ಬಳಸಿಕೊಂಡು ಸಾಕಷ್ಟು ಹಣ ಗಳಿಸಿ ಒಂದಲ್ಲಾ ಒಂದು ದಿನ ರಾಜಕೀಯಕ್ಕೆ ಬರುವ ಕನಸನ್ನು ಅಂಬಿಕಾ ಹೊತ್ತಿದ್ದಳು ಎಂಬುದು ಬೆಳಕಿಗೆ ಬಂದಿದೆ. ಕಿಚ್‍ಗುತ್ ಮಾರಮ್ಮ ದೇವಸ್ಥಾನದ ಆದಾಯ ತನಗೆ ಬರುವಂತೆ ಮಾಡಿಕೊಂಡರೆ ಅಪಾರ ಹಣ ಗಳಿಸಬಹುದು. ಮುಂದೊಂದು ದಿನ ಕೊಳ್ಳೇಗಾಲ ಹಾಗೂ ಹನೂರು ಭಾಗದಲ್ಲಿ ರಾಜಕೀಯವಾಗಿ ಪ್ರಭಾವಿಯಾಗಿ ಬೆಳೆಯುವ ಆಸೆಯನ್ನು ಅಂಬಿಕಾ ಇಟ್ಟುಕೊಂಡಿದ್ದಳೆಂಬುದು ಕೂಡ ತನಿಖೆಯಿಂದ ಬಯಲಾಗಿದೆ.
ನ್ಯಾಯಾಂಗ ಬಂಧನ: ನ್ಯಾಯಾಧೀಶರು ವಿಷ ಪ್ರಸಾದ ಪ್ರಕರಣದ ನಾಲ್ಕೂ ಆರೋಪಿ ಗಳನ್ನು 4 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದ್ದರು. ಮೂರೇ ದಿನದಲ್ಲಿ ತನಿಖೆ ಪೂರ್ಣಗೊಂಡದ್ದು ಹಾಗೂ ಈ ಹಂತಕರ ಆರೋಗ್ಯ ಕಾರಣಕ್ಕೆ ಒಂದು ದಿನ ಮೊದಲೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳನ್ನು ತೀವ್ರ ತನಿಖೆಗೊಳಪಡಿಸಿ ಸಮಗ್ರ ಮಾಹಿತಿಯನ್ನು ಪಡೆದುಕೊಂಡ ನಂತರ ಅಗತ್ಯವಿರುವ ಸ್ಥಳಗಳಿಗೆ ಅವರನ್ನು ಕರೆದೊಯ್ದು ಮಹಜರ್ ಕೂಡ ನಡೆಸಲಾಗಿತ್ತು. ನ್ಯಾಯಾಧೀಶರು ನೀಡಿದ ಗಡುವು ಇನ್ನೂ ಒಂದು ದಿವಸ ಇರುವಾಗಲೇ ಇಮ್ಮಡಿ ಮಹದೇವಸ್ವಾಮಿ ಹಾಗೂ ಮಾದೇಶ್ ಆರೋಗ್ಯದಲ್ಲಿ ಏರುಪೇರಾದ ಕಾರಣ ತನಿಖಾಧಿಕಾರಿ ಗಳು ನ್ಯಾಯಾಧೀಶರ ಮುಂದೆ ನಿನ್ನೆ ರಾತ್ರಿ ಹಾಜರುಪಡಿಸಿದರು. ಕೊಳ್ಳೇಗಾಲ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕಾಂತ್ ಅವರು ನಾಲ್ವರು ಹಂತಕರನ್ನು ಜ.3ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಚಾಮರಾಜನಗರ ಕೇಂದ್ರ ಕಾರಾಗೃಹದಲ್ಲಿ ಸೂಕ್ತ ಸ್ಥಳಾವಕಾಶ ವಿಲ್ಲದ ಕಾರಣ, ಅದರಲ್ಲೂ ಮಹಿಳಾ ಖೈದಿಗಳಿಗೆ ಅವಕಾಶ ಇಲ್ಲದೇ ಇರುವುದರಿಂದ, ಜೊತೆಗೆ ವೈದ್ಯಕೀಯ ಸೌಲಭ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಎಲ್ಲಾ ಹಂತಕರನ್ನು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು ಎಂದು ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ. ಈ ಮಧ್ಯೆ ದುರಂತ ನಡೆದ ದಿನ ಪ್ರಸಾದ ತಯಾರಿಸಿದವರಲ್ಲಿ ಒಬ್ಬರಾದ ಈರಣ್ಣ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ವಿಚಾರಣೆ ನಡೆಸಲಾಗುತ್ತದೆ.