ವಿಷ ಪ್ರಸಾದ ಪ್ರಕರಣ: ಮೃತರ ಸಂಖ್ಯೆ 17ಕ್ಕೆ ಏರಿಕೆ
ಮೈಸೂರು

ವಿಷ ಪ್ರಸಾದ ಪ್ರಕರಣ: ಮೃತರ ಸಂಖ್ಯೆ 17ಕ್ಕೆ ಏರಿಕೆ

December 23, 2018

ಮೈಸೂರು: ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದ ಗುದ್ದಲಿ ಪೂಜೆ ಕಾರ್ಯಕ್ರಮ ದಲ್ಲಿ ವಿಷ ಪ್ರಸಾದ ಸೇವಿಸಿ ಸುಯೋಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದು, ಸಾವಿನ ಸಂಖ್ಯೆ 17ಕ್ಕೆ ಏರಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ದೊರೆಸ್ವಾಮಿ ಮೇಡು ಗ್ರಾಮದ ಈರಪ್ಪ ಎಂಬುವರ ಮಗ ರಂಗನ್ (45) ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು.

ಡಿ.14ರಂದು ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾ ಲಯದ ಗೋಪುರದ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ರಂಗನ್ ಪತ್ನಿ ಈಶ್ವರಿ(30), ಪುತ್ರಿ ಅನು(5) ಅವರೊಂದಿಗೆ ತೆರಳಿದ್ದರು. ಪೂಜೆಯ ನಂತರ ನೀಡಿದ ಟೊಮಟೋ ಬಾತ್ ಅನ್ನು ಮೂವರೂ ಸೇವಿಸಿದ್ದರು. ಘಾಟು ವಾಸನೆ ಬರುತ್ತಿರುವುದನ್ನು ಗಮನಿಸಿದರೂ ದೇವರ ಪ್ರಸಾದ ಎಂದು ಸೇವಿಸಿದ್ದರು. ದೇವಾಲಯ ದಿಂದ ಮನೆಗೆ ಬಂದ ನಂತರ ಮೊದಲು ಐದು ವರ್ಷದ ಪುತ್ರಿ ಅನು ವಾಂತಿ ಮಾಡಿಕೊಂಡು ಹೊಟ್ಟೆ ಉರಿ ಎಂದು ಅಳಲಾರಂಭಿಸಿದ್ದಾಳೆ. ಕೆಲ ಸಮಯದ ನಂತರವಷ್ಟೇ ರಂಗನ್ ಹಾಗೂ ಆತನ ಪತ್ನಿ ಈಶ್ವರಿಯೂ ಅಸ್ವಸ್ಥರಾಗಿದ್ದಾರೆ. ಕೂಡಲೆ ಮಾರ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ಕಾಮಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಹೊಟ್ಟೆಯನ್ನು ಕ್ಲೀನ್ ಮಾಡಿ, ಹೆಚ್ಚಿನ ಚಿಕಿತ್ಸೆಗೆಂದು ಮೈಸೂ ರಿನ ಕೆ.ಆರ್.ಆಸ್ಪತ್ರೆಗೆ ಕರೆತರ ಲಾಗಿತ್ತು. ಮೂವರ ಸ್ಥಿತಿಯೂ ಗಂಭೀರವಾಗಿದ್ದರಿಂದ ತಾಯಿ ಮತ್ತು ಮಗಳನ್ನು ನಾರಾಯಣ ಹೃದಯಾ ಲಯಕ್ಕೆ ಕರೆದೊಯ್ಯಲಾಗಿತ್ತು. ರಂಗನ್ ಅವರನ್ನು ರಾಮಕೃಷ್ಣ ನಗರದಲ್ಲಿರುವ ಸುಯೋಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 9 ದಿನಗಳಿಂದಲೂ ವೆಂಟಿಲೇಟರ್‍ನಲ್ಲಿದ್ದ ರಂಗನ್ ಇಂದು ಮಧ್ಯಾಹ್ನ 3.15ರಲ್ಲಿ ಕೊನೆಯುಸಿರೆಳೆದರು.

ರಂಗನ್ ಅವರಿಗೆ ನಾಲ್ಕು ದಿನದ ಹಿಂದೆ ಹೃದಯಾ ಘಾತವಾಗಿತ್ತು. ನಂತರ ಮೆದುಳು ನಿಷ್ಕ್ರಿಯವಾಗಿತ್ತು. ಇಂದು ಮಧ್ಯಾಹ್ನ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟರು.

ವಿಷಯ ತಿಳಿದು ಆಸ್ಪತ್ರೆಗೆ ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಸರ್ಜನ್ ಡಾ.ರಘುರಾಮ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್, ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಬಸವರಾಜು ಸೇರಿ ದಂತೆ ಇನ್ನಿತರರು ಭೇಟಿ ನೀಡಿ ಅಂತಿಮ ದರ್ಶನ ಪಡೆದು, ಮೃತರ ಪೋಷಕರಿಗೆ ಸಾಂತ್ವನ ಹೇಳಿದರು.

ನಾಳೆ ಮರಣೋತ್ತರ ಪರೀಕ್ಷೆ: ಸುಯೋಗ್ ಆಸ್ಪತ್ರೆಯಿಂದ ರಂಗನ್ ಮೃತದೇಹವನ್ನು ಮೈಸೂರು ಸರ್ಕಾರಿ ಮೆಡಿಕಲ್ ಕಾಲೇಜಿನ ಶವಾಗಾರಕ್ಕೆ ತಂದು ಇಡಲಾಗಿದೆ. ಸಂಜೆಯಾಗಿ ದ್ದರಿಂದ ನಾಳೆ(ಡಿ.23) ಅಂತ್ಯಕ್ರಿಯೆ ಮಾಡುವುದಕ್ಕೆ ಮೃತನ ಸಂಬಂಧಿಗಳು ನಿರ್ಧರಿಸಿದ್ದರಿಂದ ಶವವನ್ನು ಶೈತ್ಯಾಗಾರದ ಲ್ಲಿಡಲಾಗಿದೆ. ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಿ, ದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಒಂದೆಡೆ ರಂಗನ್ ಸುಯೋಗ್ ಆಸ್ಪತ್ರೆಯಲ್ಲಿ

ಮೃತಪಟ್ಟರೆ, ನಾರಾಯಣ ಹೃದಯಾಲಯದಲ್ಲಿ ವೆಂಟಿಲೇಟರ್‍ನಲ್ಲಿದ್ದ ಆತನ ಪತ್ನಿ ಈಶ್ವರಿ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಐಸಿಯುಗೆ ಸ್ಥಳಾಂತರ ಮಾಡಲಾಗಿದೆ. ಮತ್ತೊಂದೆಡೆ ದಂಪತಿಯ ಪುತ್ರಿ ಅನುವಿನ ಆರೋಗ್ಯದಲ್ಲಿಯೂ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ರಂಗನ್ ಅವರ ತಮ್ಮನ ಪತ್ನಿ ಲಕ್ಷ್ಮೀ ಸಹ ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಕಾವೇರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‍ನಲ್ಲಿದ್ದಾರೆ.

ವಿಷ ಪ್ರಸಾದ ಪರಿಣಾಮ ಮೈಸೂರಿನ 11 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯು ತ್ತಿರುವ ಅಸ್ವಸ್ಥರನ್ನು ಸಚಿವ ಪುಟ್ಟರಂಗ ಶೆಟ್ಟಿ ಹಾಗೂ ಸಂಸದ ಆರ್.ಧ್ರುವನಾರಾಯಣ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಇದೇ ವೇಳೆ ಪತ್ರಕರ್ತರೊಂದಿಗೆ ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ಈ ಪ್ರಕರಣದಲ್ಲಿ ಒಟ್ಟು 110 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಪೈಕಿ 16 ಜನ ಮೃತಪಟ್ಟಿದ್ದಾರೆ. 53 ಮಂದಿ ಸುರಕ್ಷಿತವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 41 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 19 ಜನ ಇನ್ನೂ ವೆಂಟಿಲೇಟರ್‍ನಲ್ಲಿದ್ದಾರೆ. ಅವರಲ್ಲಿ 6 -7 ಪ್ರಕರಣ ಗಂಭೀರವಾಗಿವೆ. ವೈದ್ಯರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.ಚಿಕಿತ್ಸೆ ಪಡೆಯು ತ್ತಿರುವವರಲ್ಲಿ 17 ಪುರುಷರು, 20 ಮಹಿಳೆಯರು ಹಾಗೂ 4 ಮಕ್ಕಳು ಇದ್ದಾರೆ. ಜಾಗ್ರತೆ ಯಿಂದ ನೋಡಿಕೊಳ್ಳುವಂತೆ ವೈದ್ಯರಿಗೆ ಸೂಚನೆ ನೀಡಿದ್ದೇವೆ ಎಂದರು. ಚಾಮರಾಜ ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು.

Translate »