ಸಾಲೂರು ಮಠದ ಕಿರಿಯ ಸ್ವಾಮೀಜಿ ಪೊಲೀಸ್ ವಶಕ್ಕೆ
ಮೈಸೂರು

ಸಾಲೂರು ಮಠದ ಕಿರಿಯ ಸ್ವಾಮೀಜಿ ಪೊಲೀಸ್ ವಶಕ್ಕೆ

December 19, 2018

ಕೊಳ್ಳೇಗಾಲ: ಸುಳವಾಡಿ ಕಿಚ್‍ಗುತ್ ಮಾರಮ್ಮನ ದೇವಸ್ಥಾನ ದಲ್ಲಿ ಪ್ರಸಾದಕ್ಕೆ ವಿಷ ಬೆರೆಸಿದ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ಇಂದು ಮಧ್ಯರಾತ್ರಿ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಅವರನ್ನು ಪೊಲೀಸರು ವಶಕ್ಕೆ ಪಡೆದು, ಅಜ್ಞಾತ ಸ್ಥಳಕ್ಕೆ ತನಿಖೆಗಾಗಿ ಕರೆದೊಯ್ದಿದ್ದಾರೆ.

ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಮತ್ತು ಚಾಮರಾಜನಗರ ಜಿಲ್ಲಾ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ಇಂದು ಇಡೀ ದಿನ ಕೊಳ್ಳೇಗಾಲದ ಡಿವೈಎಸ್‍ಪಿ ಕಚೇರಿಯಲ್ಲೇ ಇದ್ದು, ಆರೋಪಿಗಳ ತನಿಖೆ ನಡೆಸಿದ್ದರು. ಸುಳವಾಡಿ ಮಾರಮ್ಮ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ರುವ ಪ್ರಮುಖ ವ್ಯಕ್ತಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಪ್ರಸಾದಕ್ಕೆ ವಿಷ ಬೆರೆಸಲಾಗಿದೆ ಎಂಬುದು ಪ್ರಾಥ ಮಿಕ ತನಿಖೆಯಿಂದ ಗೊತ್ತಾಗಿದ್ದು, ದುರ್ಘ ಟನೆ ನಡೆದ ಡಿಸೆಂಬರ್ 14ರಿಂದಲೂ ದೇವ ಸ್ಥಾನದ ಟ್ರಸ್ಟಿ ಚಿನ್ನಪ್ಪಿ ಮತ್ತು ವ್ಯವಸ್ಥಾಪಕ ಮಹದೇವಸ್ವಾಮಿ ಅಲಿಯಾಸ್ ಮಾದೇಶ ಪೊಲೀಸ್ ವಶದಲ್ಲೇ ಇದ್ದಾರೆ. ಈಗ ಮಾದೇಶ್ ಪತ್ನಿ ಅಂಬಿಕಾ, ದೊಡ್ಡಯ್ಯ ಸುಮಾರು 10 ಮಂದಿ ಪೊಲೀಸರ ವಶದಲ್ಲಿದ್ದು, ಅವರಲ್ಲಿ ಹಂತಕರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಲ್ಲರ ಕಣ್ತಪ್ಪಿಸಿ ಪ್ರಸಾದಕ್ಕೆ ವಿಷ ಬೆರೆ ಸಿದ್ದು ಹೇಗೆ? ಅದಕ್ಕೆ ಕಾರಣವೇನು? ಪ್ರಸಾದಕ್ಕೆ ಬೆರೆಸಿದ ಕ್ರಿಮಿನಾಶಕವನ್ನು ಯಾರು? ಎಲ್ಲಿಂದ ತಂದರು? ಎಂಬ ವಿವರ ಗಳನ್ನು ಕಲೆ ಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈಗಾಗಲೇ ವಿಷ ಬೆರೆಸಿದ ಕಿರಾತಕರನ್ನೂ ಪತ್ತೆ ಹಚ್ಚಿ ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸು ತ್ತಿರುವ ಪೊಲೀಸರು, ಕಾನೂನು ಬದ್ಧ ವಾಗಿ ಪ್ರಕ್ರಿಯೆಗಳನ್ನು ಮುಗಿಸಿ, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿ ಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ತನಿಖೆ ಕೊಳ್ಳೇಗಾಲ ಡಿವೈಎಸ್‍ಪಿ ಪುಟ್ಟ ಮಾದಯ್ಯ ನೇತೃತ್ವದ ತಂಡ ನಡೆಸುತ್ತಿದ್ದು, ತನಿಖೆಯಲ್ಲಿ ಕಿಂಚಿತ್ತೂ ಲೋಪ ಉಂಟಾಗದಂತೆ ಎಚ್ಚರ ವಹಿಸುವ ಸಲುವಾಗಿ ಸ್ವತಃ ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಮತ್ತು ಚಾಮರಾಜನಗರ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಅವರುಗಳು ಕೊಳ್ಳೇಗಾಲಕ್ಕೆ ಆಗಮಿಸಿ ತನಿಖಾತಂಡಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು.

ಪೊಲೀಸರ ವಶದಲ್ಲಿ ಹಂತಕರು ಮಾತ್ರವಲ್ಲದೇ ಪ್ರಕರಣದ ಸಾಕ್ಷಿದಾರರೂ ಸಹ ಇದ್ದಾರೆ ಎಂದು ಹೇಳಲಾಗಿದ್ದು, ಸಾಕ್ಷಿದಾರರು ನೀಡಿರುವ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಶಂಕಿತ ಹಂತಕರನ್ನು ವಿಚಾರಣೆಗೊಳಪಡಿಸಿದಾಗ ಸಾಕ್ಷಿದಾರರ ಹೇಳಿಕೆಗಳಿಗೆ ಪುಷ್ಠಿ ನೀಡುವಂತಹ ಮಹತ್ವದ ಮಾಹಿತಿಗಳು ತನಿಖಾ ತಂಡಕ್ಕೆ ಲಭ್ಯವಾಗಿದೆ. ಪ್ರಸಾದಕ್ಕೆ ಬೆರೆಸಿದ ಕ್ರಿಮಿನಾಶಕವನ್ನು ಎಲ್ಲಿಂದ ತರಲಾಗಿದೆ ಎಂಬುದನ್ನೂ ಕೂಡ ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಕ್ರಿಮಿನಾಶಕ ವನ್ನು ಹಂತಕರಿಗೆ ಶಿಫಾರಸ್ಸು ಮಾಡಿದವರು ಯಾರು? ಎಂಬುದೂ ಕೂಡ ಪತ್ತೆಯಾಗಿದ್ದು, ಆ ವ್ಯಕ್ತಿಯನ್ನೂ ಪೊಲೀಸರು ಈಗಾಗಲೇ ವಶಕ್ಕೆ ತೆಗೆದುಕೊಂಡಿದ್ದಾರೆ. ಅಂಗಡಿಯಿಂದ ಕ್ರಿಮಿನಾಶಕ ಖರೀದಿಸಿ ಹಂತಕರಿಗೆ ನೀಡಿದ ವ್ಯಕ್ತಿಯೂ ಕೂಡ ಪೊಲೀಸರ ವಶದಲ್ಲೇ ಇದ್ದಾನೆ. ತನಿಖೆಯು ಎಲ್ಲಾ ಆಯಾಮಗಳಲ್ಲೂ ನಡೆದಿದ್ದು, ಶೀಘ್ರದಲ್ಲೇ ಹಂತಕರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರು ಸಜ್ಜಾಗಿದ್ದಾರೆ.

ಇಮ್ಮಡಿ ಮಹದೇವಸ್ವಾಮಿ ಅನ್ನದಲ್ಲಿ ವಿಷ  ಹಾಕಿದ್ದಾರೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ

ಮೈಸೂರು: ಏನು ನಡೆಯುತ್ತಿದೆ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ಆದರೆ ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಅವರು ಅನ್ನದಲ್ಲಿ ವಿಷ ಹಾಕಿಸಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಸಾಲೂರು ಮಠದ ಹಿರಿಯ ಸ್ವಾಮೀಜಿ ವೇದಬ್ರಹ್ಮ ಶ್ರೀ ಗುರುಸ್ವಾಮಿ ಅವರು ತಿಳಿಸಿದರು. ಈ ಸಂಬಂಧ ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸಿದ `ಮೈಸೂರು ಮಿತ್ರ’ ಜೊತೆ ಮಾತನಾಡಿದ ಅವರು, ದೇವಸ್ಥಾನದ ಶಂಕುಸ್ಥಾಪನೆಗೆ ನಾನೂ ಹೋಗಿದ್ದೆ. ದೇವಸ್ಥಾನವನ್ನು ಚೆನ್ನಾಗಿ ನಡೆಸಿಕೊಂಡು ಹೋಗಿ ಎಂದು ಹೇಳಿ ಬಂದಿದ್ದೆ. ಆದರೆ ಅಲ್ಲಿ ಅನ್ನಕ್ಕೆ ವಿಷವಿಕ್ಕಿ ಅಮಾಯಕ ಜನರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದಾಗ ಮನಸ್ಸಿಗೆ ತುಂಬಾ ನೋವಾಯಿತು. ಮನುಷ್ಯರಾದ ನಾವು ಮನುಷ್ಯರಾಗೇ ನಡೆದುಕೊಳ್ಳಬೇಕು. ಅನ್ನಕ್ಕೆ ವಿಷವಿಕ್ಕಿದವರು ಮನುಷ್ಯರೇ ಅಲ್ಲ. ಅವರು ಮೃಗಗಳಿಗಿಂತ ಕೀಳಾದವರು ಎಂದು ಆಕ್ರೋಶ ವ್ಯಕ್ತಪಡಿಸಿದ ಶ್ರೀಗಳು, ಇಂತಹವರಿಗೆ ನಾವಾಗಲೀ ಅಥವಾ ಸರ್ಕಾರವಾಗಲೀ ಕೊಡುವ ಶಿಕ್ಷೆಗಿಂತ ಶಿವ (ದೇವರು) ಖಂಡಿತವಾಗಿ ಕಠಿಣವಾದ ಶಿಕ್ಷೆಯನ್ನೇ ಕೊಡುತ್ತಾನೆ. `ಮಾಡಿದ್ದುಣ್ಣೋ ಮಾರಾಯ’ ಎಂಬಂತೆ ಅನ್ನಕ್ಕೆ ವಿಷವಿಕ್ಕಿ ಪಾತಕಿ ಕೆಲಸ ಮಾಡಿರುವ ಮೃಗೀಯ ಮನಸ್ಸಿನವರಿಗೆ ಖಂಡಿತವಾಗಿಯೂ ಶಿಕ್ಷೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಮೈಸೂರು:  ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೇರಿದೆ. ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದ ಮಹಿಳೆ ಮಂಗಳವಾರ ಅಸುನೀಗಿದ್ದಾರೆ.

ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠದ ರಸ್ತೆಯ ನಿವಾಸಿ ಲೇ.ನಾಗರಾಜು ಎಂಬವರ ಪತ್ನಿ ದುಂಡಮ್ಮ (52) ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟರು. ಶುಕ್ರ ವಾರ ಮೈಸೂರಿಗೆ ಕರೆತಂದಿದ್ದಾಗ ಗಂಭೀರ ಸ್ಥಿತಿಯಲ್ಲಿದ್ದ ದುಂಡಮ್ಮ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ದೇಹದಲ್ಲಿ ವಿಷದ ಪ್ರಮಾಣ ಹೆಚ್ಚಾಗಿದ್ದರಿಂದ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿ ಇಂದು ಮಧ್ಯಾಹ್ನ ಸಾವಿಗೀಡಾ ದರು ಎಂದು ವೈದ್ಯರು ತಿಳಿಸಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆ, ಕೊಲಂಬಿಯಾ ಏಷಿಯಾ ಆಸ್ಪತ್ರೆ, ಡಿಆರ್‍ಎಂ, ಭಾನವಿ, ಸುಯೋಗ್, ಕಾವೇರಿ, ಜೆಎಸ್‍ಎಸ್, ಅಪೊಲೋ, ಸೇಂಟ್ ಜೋಸೆಫ್, ನಾರಾಯಣ ಹೃದಯಾಲಯ, ಗೋಪಾಲಗೌಡ, ಕೊಳ್ಳೇಗಾಲದ ವಿವಿಧ ಆಸ್ಪತ್ರೆಗಳಲ್ಲಿ 90 ಮಂದಿ ದಾಖಲಾಗಿದ್ದು, ಅವರಲ್ಲಿ 23 ಮಂದಿಯನ್ನು ವೆಂಟಿಲೇಟರ್‍ನಲ್ಲಿಡಲಾಗಿದೆ. ಆರು ಮಂದಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಉಳಿದ ರೋಗಿಗಳ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡು ಬರುತ್ತಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು.

ಮಗಳ ಮನೆಗೆ ಬಂದು ಮಡಿದ ದುಂಡಮ್ಮ: ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠದ ರಸ್ತೆಯ ನಿವಾಸಿಯಾಗಿರುವ ದುಂಡಮ್ಮ, ಮಹದೇಶ್ವರ ಬೆಟ್ಟದ ದಾಸೋಹ ಭವನದಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. 25 ವರ್ಷ ಹಿಂದೆಯೇ ಪತಿ ನಾಗ ರಾಜುವನ್ನು ಕಳೆದುಕೊಂಡಿದ್ದ ಇವರಿಗೆ, ಐವರು ಮಕ್ಕಳು. ಪುತ್ರಿಯರಾದ ಮಹ ದೇವಮ್ಮ, ಪ್ರೇಮ, ಅನ್ನಪೂರ್ಣ, ನೇತ್ರಾ, ನಾಗರತ್ನ ಅವರಿಗೆ ವಿವಾಹ ಮಾಡಿದ್ದರು. ಮಹದೇಶ್ವರಬೆಟ್ಟದಲ್ಲಿ ಏಕಾಂಗಿ ಜೀವನ ಸಾಗಿಸುತ್ತಿದ್ದರು. ಕೆಲಸಕ್ಕೆ ಎರಡು ದಿನ ರಜೆ ಹಾಕಿ ಮಾರ್ಟಳ್ಳಿಯಲ್ಲಿರುವ ಪುತ್ರಿಯರಾದ ಮಹದೇವಮ್ಮ ಹಾಗೂ ನೇತ್ರ ಮನೆಗೆ ಡಿ.13ರಂದು(ಗುರುವಾರ) ಸಂಜೆ ಬಂದಿದ್ದರು. ಮರುದಿನ ಮೊದಲು ನೇತ್ರಳ ಮನೆಗೆ ಬಂದ ದುಂಡಮ್ಮ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯಕ್ಕೆ ಹೋಗಿ ಬರುವುದಾಗಿ ಹೇಳಿ, ದೊಡ್ಡ ಮಗಳು ಮಹದೇವಮ್ಮಳ ಮನೆಗೆ ತೆರಳಿದ್ದಾರೆ. ಅಲ್ಲಿಯೂ ಮಾರಮ್ಮ ದೇವಾಲಯಕ್ಕೆ ಹೋಗುವುದಾಗಿ ಹೇಳಿ ಒಬ್ಬರೇ ಗ್ರಾಮಸ್ಥರೊಂದಿಗೆ ದೇವಾಲಯಕ್ಕೆ ತೆರಳಿ ವಿಷ ಪ್ರಸಾದ ಸೇವಿಸಿ ಮನೆಗೆ ಬಂದು ಅಸ್ವÀಸ್ಥರಾದರು. ಕೂಡಲೇ ಮಾರ್ಟಳ್ಳಿ, ಹನೂರು ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಮೈಸೂರಿನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸುಧಾರಣೆ ಕಂಡಿತ್ತು: ಕಳೆದ ನಾಲ್ಕು ದಿನಗಳಿಂದ ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದುಂಡಮ್ಮ ಅವರ ಆರೋಗ್ಯ ಸುಧಾರಣೆ ಕಂಡಿತ್ತು. ಸೋಮವಾರ ಸಂಜೆಯಷ್ಟೇ ದುಂಡಮ್ಮ ಅವರನ್ನು ಭೇಟಿ ಮಾಡಿದ್ದೆ. ಕೈ ಸನ್ಹೆ ಮಾಡಿದರು. ನಮಗೆ ಸಮಾಧಾನವಾಗಿತ್ತು. ಆರೋಗ್ಯ ಚೇತರಿಸುತ್ತಿದೆ, ಬುಧವಾರ ಬೆಳಿಗ್ಗೆ ವಾರ್ಡ್‍ಗೆ ವರ್ಗಾಯಿಸುತ್ತೇವೆ ಎಂದು ವೈದ್ಯರು ಹೇಳಿದ್ದರು. ಆದರೆ ಇಂದು ಮಧ್ಯಾಹ್ನ ಮೃತಪಟ್ಟಿ ದ್ದಾರೆ. ಅವರ ಐವರು ಹೆಣ್ಣು ಮಕ್ಕಳು, 11 ಮೊಮ್ಮಕ್ಕಳು ದಿಗ್ಭ್ರಮೆಗೊಳಗಾಗಿದ್ದಾರೆ ಎಂದು ದುಂಡಮ್ಮ ಅಳಿಯ ಮಹದೇವ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಮಾನವೀಯತೆ ಮೆರೆದ ಅಧಿಕಾರಿಗಳು: ದುಂಡಮ್ಮ ದೇಹವನ್ನು ಮೈಸೂರು ಮೆಡಿಕಲ್ ಕಾಲೇಜಿನ ಶವಾಗಾರಕ್ಕೆ ತರಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ದೇಹವನ್ನು ಮಲೆಮಹದೇಶ್ವರ ಬೆಟ್ಟಕ್ಕೆ ಕೊಂಡೊಯ್ಯಲು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಬಸವರಾಜು, ಕೆಆರ್ ಆಸ್ಪತ್ರೆಯ ಆರ್‍ಎಂಒ ಡಾ.ರಾಜೇಶ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ ಹಾಗೂ ಇನ್ನಿತರರು ಆರ್ಥಿಕ ನೆರವು ನೀಡಿದರು. ಎರಡು ಖಾಸಗಿ ಆಂಬ್ಯುಲೆನ್ಸ್‍ಗಳಲ್ಲಿ ಮೃತದೇಹ ಹಾಗೂ ಅವರ ಸಂಬಂಧಿಗಳನ್ನು ಮಲೆಮಹದೇಶ್ವರ ಬೆಟ್ಟಕ್ಕೆ ಕಳುಹಿಸಿ ಕೊಡಲಾಯಿತು. ಬುಧವಾರ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದರಿಂದ ದೇಹವನ್ನು ಐಸ್ ಬಾಕ್ಸ್‍ನಲ್ಲಿಟ್ಟು ಕಳಿಸುವ ವ್ಯವಸ್ಥೆ ಮಾಡಲಾಯಿತು.

 

Translate »