ಮೈತ್ರಿ ಸರ್ಕಾರದ ವಿರುದ್ಧ ಮಿತ್ರ ಶಾಸಕರ ಆಕ್ರೋಶ
ಮೈಸೂರು

ಮೈತ್ರಿ ಸರ್ಕಾರದ ವಿರುದ್ಧ ಮಿತ್ರ ಶಾಸಕರ ಆಕ್ರೋಶ

December 19, 2018

ಬೆಳಗಾವಿ: ಸಮ್ಮಿಶ್ರ ಸರ್ಕಾರದಿಂದ ಉತ್ತರ ಕರ್ನಾಟಕ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅನ್ಯಾಯವಾಗುತ್ತಿದೆ ಎಂಬ ಗುರುತರ ಆರೋಪ ಇಂದಿಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಲವರಿಂದ ವ್ಯಕ್ತವಾಯಿತು. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಶಾಸಕರಿಂದ ಅಸಮಾಧಾನಗಳ ಸುರಿಮಳೆಯಾಯಿತು.

ಅಸಮಾಧಾನ ಹೊರ ಹಾಕಿದ ಶಾಸಕ ಕೆ.ಸಿ.ಕೊಂಡಯ್ಯ, ಸಂಪುಟದಲ್ಲಿ ಸ್ಥಾನ ನೀಡಿಕೆ ಹಾಗೂ ಉತ್ತರ ಕರ್ನಾಟಕ ಭಾಗದ ಶಾಸಕರ ಮನವಿಗಳಿಗೆ ಬೆಲೆ ಸಿಗುತ್ತಿಲ್ಲ, ಅನು ದಾನ ನೀಡಿಕೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಅಧಿಕಾರದಿಂದ ಬಿಜೆಪಿಯನ್ನು ದೂರವಿಡಲು ಜೆಡಿಎಸ್‍ಗೆ ಸರ್ಕಾರ ರಚನೆಗೆ ಬೆಂಬಲ ಸೂಚಿಸಲಾಗಿತ್ತು, ಆದರೆ, ಈ ಮೈತ್ರಿಯಿಂದ ಕಾಂಗ್ರೆಸ್ ಶಾಸಕರಿಗೆ ಆದ್ಯತೆ ದೊರೆಯುತ್ತಿಲ್ಲ. ಪಕ್ಷದಲ್ಲಿ ಉತ್ತರ ಕರ್ನಾಟಕದಿಂದ 40 ಶಾಸಕರು ಆಯ್ಕೆಯಾಗಿದ್ದರೂ ಕೇವಲ 5 ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಇಷ್ಟೇ ಸಂಖ್ಯೆಯ ಶಾಸಕರು ಆಯ್ಕೆಯಾಗಿರುವ ದಕ್ಷಿಣ ಕರ್ನಾಟಕಕ್ಕೆ 11 ಸಚಿವ ಸ್ಥಾನ ನೀಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಎಲ್ಲಾ ಮೂವರು ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ, ಒಬ್ಬರು ಉಪಮುಖ್ಯಮಂತ್ರಿಯಾಗಿದ್ದು, ಇನ್ನಿಬ್ಬರು ಮಂತ್ರಿಗಳಾಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಆರು ಶಾಸಕರು ಆಯ್ಕೆಯಾಗಿದ್ದರೂ ಯಾರಿಗೂ ಸಚಿವ ಸ್ಥಾನ ನೀಡಿಲ್ಲ. ಬೇರೊಂದು ಪಕ್ಷದ ಮರ್ಜಿಯಲ್ಲಿ ನಾವು ಬದುಕುವಂತಾಗಿದೆ, ಉತ್ತರ ಕರ್ನಾಟಕದಲ್ಲಿ ನಮಗೆ ಬಿಜೆಪಿ ನೇರ ವಿರೋಧಿ ಪಕ್ಷವಾಗಿದ್ದು, ಸಂಪುಟದಲ್ಲಿ ಕಾಂಗ್ರೆಸ್‍ಗೆ ಹೆಚ್ಚು ಪ್ರಾತಿನಿಧ್ಯ ನೀಡಿದ್ದರೆ ಮುಂದಿನ ಚುನಾವಣೆಯಲ್ಲಿ ಲಾಭವಾಗುತ್ತಿತ್ತು ಎಂದು ದೂರಿದರು.

ಸಭೆ ಆರಂಭದಲ್ಲಿ ಸಿದ್ದರಾಮಯ್ಯ ಮಾತನಾಡಿ, ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹಾಗೂ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸಿದರು. ದೇಶಾದ್ಯಂತ ಪಕ್ಷಕ್ಕೆ ಉತ್ತಮ ವಾತಾವರಣ ಇದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷ ಹೆಚ್ಚು ಸ್ಥಾನ ಗೆಲ್ಲಲು ತಮ್ಮ ಸಹಕಾರ ನೀಡುವಂತೆ ಮನವಿ ಮಾಡಿದರು. ಡಿಸೆಂಬರ್ 22ರಂದು ಸಚಿವ ಸಂಪುಟ ವಿಸ್ತರಣೆ ಖಚಿತ, ಯಾವುದೇ ಕಾರಣಕ್ಕೂ ಮುಂದೂಡಿಕೆ ಇಲ್ಲ, 20ರಂದು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚಿಸಲಾಗುವುದು. ನಿಗಮ-ಮಂಡಳಿ, ಸಂಸದೀಯ ಕಾರ್ಯದರ್ಶಿ ನೇಮಕ ಬಗ್ಗೆ ಚರ್ಚೆ ಆಗಿದೆ. ಕೆಲವು ಕ್ಷೇತ್ರದ ಶಾಸಕರು ಸಮಸ್ಯೆ ಹೇಳಿಕೊಂಡಿದ್ದಾರೆ, ಈ ಬಗ್ಗೆ ಮುಖ್ಯಮಂತ್ರಿ ಬಳಿ ಚರ್ಚಿಸುತ್ತೇನೆ ಎಂದಿದ್ದಾರೆ.

ಸಿಎಂ ಬಯಸಿದರೂ ಆಹ್ವಾನ ಬರಲಿಲ್ಲ…!

ಬೆಳಗಾವಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಭೆಯಲ್ಲಿ ಭಾಗವಹಿಸುವ ಆಸಕ್ತಿ ತೋರಿದರೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಹ್ವಾನವನ್ನೇ ನೀಡಲಿಲ್ಲ.

ಸರ್ಕಾರದಲ್ಲಿ ಭಾಗಿಯಾಗಿರುವ ಕಾಂಗ್ರೆಸ್‍ನ ಕೆಲವು ಶಾಸಕರು ಮುಖ್ಯಮಂತ್ರಿ ವಿರುದ್ಧ ನೇರ ಆರೋಪ ಮಾಡಿ ದ್ದಲ್ಲದೆ, ಕ್ಷೇತ್ರಗಳ ಅಭಿವೃದ್ಧಿ ಮತ್ತು ವರ್ಗಾವಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ಅಪಸ್ವರಗಳು ಕೇಳಿ ಬಂದಿದ್ದವು. ಈ ಆರೋಪಗಳಿಗೆ ಅವರ ನಾಯಕರ ಸಮ್ಮುಖದಲ್ಲೇ ದಾಖಲೆ ಸಮೇತ ಉತ್ತರ ನೀಡಲು ಮತ್ತು ನಿಮ್ಮ ಶಾಸಕರ ಜೊತೆ ಉತ್ತಮ ಸಂಬಂಧ ಹೆಚ್ಚಿಸಿ ಕೊಳ್ಳಲು ತಮಗೆ ಸಿಎಲ್‍ಪಿ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಸ್ವತಃ ಆ ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಮನ್ವಯ ಸಮಿತಿ ಸಭೆಯಲ್ಲಿ ಮಾಡಿದ್ದ ಮನವಿಗೆ ಒಪ್ಪಿಗೆಯೂ ದೊರೆತಿತ್ತು. ಮುಖ್ಯಮಂತ್ರಿ ಅವರೇ ಸ್ವಯಂ ಪ್ರೇರಿತರಾಗಿ ನಾನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನಾಗಿದ್ದರೂ ಸಿಎಲ್‍ಪಿ ಸಭೆಯಲ್ಲಿ ಭಾಗವಹಿಸಿ ಆ ಪಕ್ಷದ ಶಾಸಕರ ಅಹವಾಲುಗಳನ್ನು ಆಲಿಸುತ್ತೇನೆ ಮತ್ತು ಅಲ್ಲಿಯೇ ಪರಿಹಾರ ಕಂಡುಹಿಡಿಯುತ್ತೇನೆ ಎಂಬ ಹೇಳಿಕೆಯನ್ನೂ ನೀಡಿದ್ದರು.

ಕುಮಾರಸ್ವಾಮಿ ಹೇಳಿಕೆಗೆ ಆ ಪಕ್ಷದ ರಾಜ್ಯಾಧ್ಯಕ್ಷರಲ್ಲದೆ, ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಕೂಡ ಬೆಂಬಲ ವ್ಯಕ್ತಪಡಿಸಿದ್ದರು. ಆಹ್ವಾನ ನೀಡಿದರೆ ಇಂದಿನ ಸಭೆಗೆ ಹಾಜರಾಗಬೇಕೆಂದು ತಡರಾತ್ರಿಯಲ್ಲೇ ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿ ಇಂದು ಮುಂಜಾನೆಯೇ ವಿಶೇಷ ವಿಮಾನದಲ್ಲಿ ಬೆಳಗಾವಿಗೆ ಕುಮಾರ ಸ್ವಾಮಿ ಆಗಮಿಸಿದ್ದರು. ಶಾಸಕಾಂಗ ಸಭೆಗೆ ಆಹ್ವಾನ ಇಲ್ಲದ ಕಾರಣ ಸಂಘ ಸಂಸ್ಥೆ ಗಳಿಂದ ಅಹವಾಲು ಸ್ವೀಕರಿಸಿ ವಿಧಾನಮಂಡಲದ ಕಲಾಪದಲ್ಲಿ ಭಾಗವಹಿಸಿದರು. ಸಿದ್ದರಾಮಯ್ಯ ಹೇಳಿಕೆಯೊಂದನ್ನು ನೀಡಿ ಇಂದಿನ ಸಭೆಗೆ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಿರಲಿಲ್ಲ. ಮುಂದೆ ಕಾಂಗ್ರೆಸ್-ಜೆಡಿಎಸ್ ಶಾಸಕರ ಸಭೆಯನ್ನು ಜಂಟಿಯಾಗಿ ನಡೆಸುತ್ತೇವೆ, ಅಲ್ಲಿ ಅವರು ಭಾಗವಹಿಸುತ್ತಾರೆ ಎಂದು ಹೇಳಿ ಕೈತೊಳೆದುಕೊಂಡರು.

ವಿಧಾನ ಪರಿಷತ್ ಸಭಾಪತಿ ಆಯ್ಕೆಯಲ್ಲಿ ಸಿದ್ದರಾಮಯ್ಯ ಅವರಿಗೆ ಭಾರೀ ಹಿನ್ನಡೆಯಾಗಿತ್ತು, ಇದಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಕಾರಣ ಎಂಬ ಭಾವನೆ ಅವರಿಗೆ ಬಂದಂತಿದೆ. ಜೊತೆಗೆ ಮುಖ್ಯಮಂತ್ರಿ ಅವರು ಸಭೆಗೆ ಹಾಜರಾಗಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದರೆ, ಇಲ್ಲವೇ ಅವರ ಜೊತೆ ಮಧುರ ಬಾಂಧವ್ಯ ಬೆಳೆಸಿದರೆ, ತಮ್ಮ ನಾಯಕತ್ವಕ್ಕೆ ಬೆಲೆ ಎಲ್ಲಿಂದ ಬಂತು ಎಂಬ ಕಾರಣಕ್ಕೆ ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಶಾಸಕರೊಬ್ಬರು ತಿಳಿಸಿದ್ದಾರೆ.

Translate »