ಬಿಡಾಡಿ ಹುಚ್ಚು ಕುದುರೆಗಳ ದಾಳಿಗೆ  ಮೈಸೂರಲ್ಲಿ ಬಡ ಮಹಿಳೆ ಬಲಿ
ಮೈಸೂರು

ಬಿಡಾಡಿ ಹುಚ್ಚು ಕುದುರೆಗಳ ದಾಳಿಗೆ ಮೈಸೂರಲ್ಲಿ ಬಡ ಮಹಿಳೆ ಬಲಿ

December 19, 2018

ಮೈಸೂರು: ಬಿಡಾಡಿ ಹುಚ್ಚು ಕುದುರೆಗಳ ದಾಳಿಗೆ, ಮನೆ ಮನೆಗೆ ಹೋಗಿ ಸೊಪ್ಪು ಮಾರುವ ಬಡ ಮಹಿಳೆ ಬಲಿಯಾದ ಘಟನೆ ಮೈಸೂರಿನ ಗಾಯತ್ರಿಪುರಂನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

ಮೈಸೂರಿನ ಉದಯಗಿರಿ ಠಾಣಾ ವ್ಯಾಪ್ತಿಯ ಮುನೇಶ್ವರನಗರದ ಮದೀನ ಮಸೀದಿ ಬಳಿ ನಿವಾಸಿ ಲೇಟ್ ಎಂ.ಆರ್.ಕೂಸಯ್ಯ ಅವರ ಪತ್ನಿ ಶ್ರೀಮತಿ ಪಾರ್ವತಮ್ಮ (55), ಹುಚ್ಚು ಕುದುರೆಗಳ ದಾಳಿಗೊಳಗಾಗಿ ಸ್ಥಳದಲ್ಲೇ ಮೃತಪಟ್ಟವರು. ಸೊಪ್ಪು ಮಾರುವ ಅವರು ಇಂದು ಬೆಳಿಗ್ಗೆ ಸುಮಾರು 10 ಗಂಟೆ ವೇಳೆಗೆ ಗಾಯತ್ರಿಪುರಂ 1ನೇ ಹಂತ (ನಾರ್ತ್ ಆಫ್ ಗಾಯತ್ರಿಪುರಂ)ದ ಬೀದಿಯಲ್ಲಿ ಮನೆ-ಮನೆಗೆ ತೆರಳಿ ಸೊಪ್ಪು ಮಾರುತ್ತಿದ್ದರು. ಹೀಗೆ ಒಂದು ಮನೆಯಿಂದ ಮತ್ತೊಂದು ಮನೆಗೆ ಈ ಮಹಿಳೆ ಹೋಗುತ್ತಿದ್ದಾಗ ಪೆಟ್ರೋಲ್ ಬಂಕ್ ರಸ್ತೆ ಕಡೆಯಿಂದ ಕಾದಾಡಿಕೊಂಡು ಹುಚ್ಚೆದ್ದು ಬಂದ ಕುದುರೆಗಳು ಪಾರ್ವತಮ್ಮನ ಮೇಲೆರಗಿ ದವು. ಈ ವೇಳೆ ನೆಲಕ್ಕುರುಳಿದ ಪಾರ್ವತಮ್ಮ ರನ್ನು ಮನಬಂದಂತೆ ತುಳಿದವು. ಸಾರ್ವಜನಿ ಕರು ಹತ್ತಿರ ಬಂದು ರಕ್ಷಿಸಲೆತ್ನಿಸಿದರಾದರೂ, ಮೂಗು, ಬಾಯಿಯಲ್ಲಿ ತೀವ್ರ ರಕ್ತಸ್ರಾವವಾದ ಕಾರಣ ತೀವ್ರ ಅಸ್ವಸ್ಥರಾದ ಅವರು ಸ್ಥಳದಲ್ಲೇ ಅಸುನೀಗಿದರು ಎಂದು ಅಲ್ಲಿನ ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಸ್ಥಳೀಯರೇ ತಕ್ಷಣ ಕರೆ ಮಾಡಿ 108 ಆಂಬುಲೆನ್ಸ್ ಕರೆಸಿದರು. ಪಾರ್ವತಮ್ಮ ನವರ ಉಸಿರು ನಿಂತು ಹೋಗಿರುವುದನ್ನು ಆಂಬು ಲೆನ್ಸ್ ನರ್ಸ್‍ಗಳು ದೃಢಪಡಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ವಿಷಯ ತಿಳಿ ಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಮೈಸೂರು ಮಹಾನಗರಪಾಲಿಕೆ ಪಶು ವೈದ್ಯಾ ಧಿಕಾರಿ ಡಾ. ಸುರೇಶ್ ಹಾಗೂ ಸಿಬ್ಬಂದಿ ಕುದುರೆ ಹಿಡಿಯುವವರನ್ನು ಕರೆಸಿ ಅಲ್ಲಿಯೇ ಪಕ್ಕದ ಖಾಲಿ ಜಾಗದಲ್ಲಿ ನಿಂತಿದ್ದ ಐದೂ ಕುದುರೆಗಳನ್ನು ಹಿಡಿದು ಸೂಯೇಜ್ ಫಾರಂ ಬಳಿಯ ಪಾಲಿಕೆ ದೊಡ್ಡಿಗೆ ಸಾಗಿಸಿದರು.

ಘಟನಾ ಸ್ಥಳಕ್ಕೆ ಉದಯಗಿರಿ ಠಾಣೆ ಪೊಲೀ ಸರು ಬಂದು ಸ್ಥಳ ಮಹಜರು ನಡೆಸಿದರಾದರೂ ಪಾರ್ವತಮ್ಮನವರ
ಮಗ ಪ್ರಕಾಶ್ ನಮಗೆ ಕೇಸು-ವಗೈರೆ ಬೇಡ, ಮರಣೋತ್ತರ ಪರೀಕ್ಷೆ ನಡೆಸುವುದು ಇಷ್ಟವಿಲ್ಲ. ನಾವು ದೂರನ್ನೂ ನೀಡುವುದಿಲ್ಲ ಎಂದು ಹೇಳಿ ಮೃತದೇಹ ತೆಗೆದು ಕೊಂಡು ಹೋಗಿ ಮುನೇಶ್ವರನಗರ ರುದ್ರಭೂಮಿಯಲ್ಲಿ ಸಂಜೆ ಅಂತ್ಯಕ್ರಿಯೆ ನಡೆಸಿದರು.
ಕುದುರೆಗಳ ದಾಳಿ ವಿಷಯ ತಿಳಿಯುತ್ತಿದ್ದಂತೆಯೇ ನಂಜನಗೂಡಿನಲ್ಲಿದ್ದ ಮೈಸೂರು ನಗರ ಪಾಲಿಕೆ ಸ್ಥಳೀಯ ಸದಸ್ಯ ಜಿ.ಎಸ್. ಸತ್ಯರಾಜು, ಸ್ಥಳಕ್ಕೆ ದಾವಿಸಿ ನಿವಾಸಿಗಳಿಂದ ಮಾಹಿತಿ ಪಡೆದರು. ಮಾಂಸದ ಅಂಗಡಿಯವರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯು ವುದರಿಂದ ಅದನ್ನು ತಿನ್ನಲು ಕೋತಿ, ನಾಯಿ, ಬೆಕ್ಕು, ಹಾವುಗಳು ಬರುತ್ತಿರುವ ಕಾರಣ ಜನರು ವಾಸಿಸುವುದೇ ದುಸ್ತರವಾಗಿದೆ ಎಂದು ದೂರಿದ ನಿವಾಸಿಗಳು, ಇದರ ಬಗ್ಗೆ ಕ್ರಮ ಕೈಗೊಳ್ಳದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು. ಅನಾಹುತ ನಡೆದು ಹೋದ ನಂತರ ಪಾಲಿಕೆ ಅಧಿಕಾರಿಗಳನ್ನು ಕರೆಸಿದ ಕಾರ್ಪೊ ರೇಟರ್ ಸತ್ಯರಾಜು, ಸ್ವಚ್ಛತಾ ಕಾರ್ಯ ತೀವ್ರಗೊಳಿಸಿ, ಬಿಡಾಡಿ ದನಗಳು, ಕುದುರೆಗಳ ಬೀದಿಯಲ್ಲಿ ಬಿಡದಂತೆ ಸೂಕ್ತ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.

ದಾಳಿ ನಡೆಸಿದ ಕುದುರೆಗಳು ಯಾರಿಗೆ ಸೇರಿದವು ಎಂಬುದು ತಿಳಿದಿಲ್ಲ. ಮಾಲೀಕರು ಪತ್ತೆಯಾಗದ ಕಾರಣ, ಸ್ಥಳೀಯರ ನೆರವಿನಿಂದ ಹುಡುಕಿಸುತ್ತಿದ್ದೇವೆ. ಯಾರೆಂದು ತಿಳಿದ ತಕ್ಷಣ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ದಂಡ ವಸೂಲಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಸುರೇಶ್ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಕಳೆದ 2 ವರ್ಷಗಳ ಹಿಂದೆ ಮೈಸೂರಿನ ಕುಕ್ಕರಹಳ್ಳಿ ಬಳಿ ಕುದುರೆಯೊಂದು ಮಹಿಳೆಯೊ ಬ್ಬರ ಮೇಲೆರಗಿ ಗಾಯಗೊಳಿಸಿದ್ದನ್ನು ಹೊರತುಪಡಿಸಿದರೆ, ಮೈಸೂರು ಇತಿಹಾಸದಲ್ಲೇ ಇದೇ ಮೊದಲು ಹುಚ್ಚು ಕುದುರೆಗಳ ಅಟ್ಟಹಾಸಕ್ಕೆ ಮಹಿಳೆ ಬಲಿಯಾಗಿದ್ದಾರೆ.

Translate »