ಹನೂರು ಶಾಸಕ ನರೇಂದ್ರಗೆ ನಿರಾಸೆ
ಚಾಮರಾಜನಗರ

ಹನೂರು ಶಾಸಕ ನರೇಂದ್ರಗೆ ನಿರಾಸೆ

June 7, 2018

ಚಾಮರಾಜನಗರ:  ಜಿಲ್ಲೆಯ ಹನೂರು ಕ್ಷೇತ್ರದ ಶಾಸಕ ಆರ್. ನರೇಂದ್ರ ಅವರಿಗೆ ಸಚಿವ ಸ್ಥಾನ ದೊರೆಯ ದಿರುವುದು ಅವರಲ್ಲಿ ನಿರಾಸೆ ಮೂಡಿಸಿದೆ.

ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಚಾಮ ರಾಜನಗರ ಹಾಗೂ ಕೊಳ್ಳೇಗಾಲ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಸಿ.ಪುಟ್ಟರಂಗ ಶೆಟ್ಟಿ ಮತ್ತು ಆರ್.ನರೇಂದ್ರ ಹ್ಯಾಟ್ರಿಕ್ ಜಯ ಸಾಧಿಸಿದ್ದರು. ಕೊಳ್ಳೇಗಾಲ ಕ್ಷೇತ್ರ ದಲ್ಲಿ ಬಿಎಸ್‍ಪಿಯ ಎನ್.ಮಹೇಶ್ ಗುಂಡ್ಲು ಪೇಟೆ ಕ್ಷೇತ್ರದಲ್ಲಿ ಬಿಜೆಪಿಯ ಸಿ.ಎಸ್. ನಿರಂಜನ್‍ಕುಮಾರ್ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆಯೇ ಸಚಿವ ಸ್ಥಾನಕ್ಕಾಗಿ ಸಿ.ಪುಟ್ಟರಂಗಶೆಟ್ಟಿ ಹಾಗೂ ನರೇಂದ್ರ ಲಾಬಿ ನಡೆಸಿದ್ದರು. ಇದರಲ್ಲಿ ಪುಟ್ಟರಂಗಶೆಟ್ಟಿ ಯಶಸ್ವಿಯಾದರೆ, ನರೇಂದ್ರ ವಿಫಲರಾಗಿದ್ದಾರೆ. ಪುಟ್ಟರಂಗಶೆಟ್ಟಿ ಹಿಂದುಳಿದ ಉಪ್ಪಾರ ಜನಾಂಗಕ್ಕೆ ಸೇರಿದವರು. ಈ ಜನಾಂಗದ ಏಕೈಕ ಶಾಸಕ ಪುಟ್ಟರಂಗಶೆಟ್ಟಿ ಆಗಿದ್ದು, ಇದು ಅವರು ಸಚಿವರಾಗಲು ಪ್ರಮುಖ ಕಾರಣವಾಗಿದೆ. ಜಾತಿವಾರು ಕೋಟಾ ದಡಿ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ರಾಗುವ ಯೋಗ ಕೂಡಿ ಬಂದಿದೆ.

ಆರ್.ನರೇಂದ್ರ ಒಕ್ಕಲಿಗ ಜನಾಂಗಕ್ಕೆ ಸೇರಿದವರು. ಈ ಸಮುದಾಯಕ್ಕೆ ಸೇರಿದ ಕಾಂಗ್ರೆಸ್‍ನಲ್ಲಿ ಡಿ.ಕೆ.ಶಿವಕುಮಾರ್, ಕೃಷ್ಣ ಭೈರೇಗೌಡ, ಶಿವಶಂಕರರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಹೀಗಾಗಿ ಆರ್.ನರೇಂದ್ರ ಅವರಿಗೆ ಸಚಿವ ಸ್ಥಾನ ‘ಕೈ’ ತಪ್ಪಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಜಿಲ್ಲೆಯ ಇಬ್ಬರು ಶಾಸಕರಾಗಿ ಸಚಿವ ಸ್ಥಾನ ದೊರೆತಿರುವುದು ಇದೇ ಮೊದಲು. ಸಚಿವರಾದ ಶಾಸಕರನ್ನು ನಾನು ಅಭಿನಂದಿಸುತ್ತೇನೆ. ಇವರ ಅಧಿಕಾರ ವಧಿಯಲ್ಲಿ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಆಶಿಸುತ್ತೇನೆ. ಸಚಿವ ಸಂಪುಟ ವಿಸ್ತರಣೆ ಜಾತಿವಾರು ಲೆಕ್ಕಾಚಾರದಲ್ಲಿ ನಡೆದಿದೆ. ಹೀಗಾಗಿ ನನಗೆ ಸಚಿವ ಸ್ಥಾನ ದೊರೆತಿಲ್ಲ. ಇದಕ್ಕಿಂತ ನಾನು ಏನೂ ಹೇಳೊಲ್ಲ ಎಂದು ಕಾಂಗ್ರೆಸ್ ಶಾಸಕ ಆರ್.ನರೇಂದ್ರ ಹೇಳಿದರು.

Translate »