ಬರ ಪರಿಹಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ನರೇಂದ್ರಗೆ 2 ಸಾವಿರ ರೂ. ಪರಿಹಾರ ನೀಡಿದ ಕಂದಾಯ ಇಲಾಖೆ.. !  ಶಾಸಕ ನರೇಂದ್ರರ ಸಹಿ ಫೋರ್ಜರಿ ಮಾಡಿರುವ ದಾಖಲೆ ಬಿಡುಗಡೆ ಮಾಡಿದ ಆರ್‍ಟಿಐ ಕಾರ್ಯಕರ್ತ
ಚಾಮರಾಜನಗರ

ಬರ ಪರಿಹಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ನರೇಂದ್ರಗೆ 2 ಸಾವಿರ ರೂ. ಪರಿಹಾರ ನೀಡಿದ ಕಂದಾಯ ಇಲಾಖೆ.. ! ಶಾಸಕ ನರೇಂದ್ರರ ಸಹಿ ಫೋರ್ಜರಿ ಮಾಡಿರುವ ದಾಖಲೆ ಬಿಡುಗಡೆ ಮಾಡಿದ ಆರ್‍ಟಿಐ ಕಾರ್ಯಕರ್ತ

May 4, 2018

ಕೊಳ್ಳೇಗಾಲ: ಬರಪರಿಹಾರದಲ್ಲಿ ಹನೂರು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ನರೇಂದ್ರ ಅವರಿಗೆ ಕಂದಾಯ ಇಲಾಖೆ 2014 ರಲ್ಲಿ 2ಸಾವಿರ ರೂ. ಪರಿಹಾರ ನೀಡಿದೆ. ಇದು ಮಾಹಿತಿ ಹಕ್ಕು ಕಾರ್ಯಕರ್ತ ಅಣಗಳ್ಳಿ ದಶರಥ್ ಪಡೆದಿರುವ ಮಾಹಿತಿಯಿಂದ ಬಹಿರಂಗಗೊಂಡಿದೆ.

ಹನೂರು ಶಾಸಕ ನರೇಂದ್ರ ಅವರು ದೊಡ್ಡಿಂದುವಾಡಿ ಗ್ರಾಮದಲ್ಲಿ 1 ಎಕರೆ 89 ಸೆಂಟ್ ಜಮೀನು ಹೊಂದಿದ್ದಾರೆ. ಸರ್ವೆನಂಬರ್ 5ಎ, 6ಎರಲ್ಲಿ ನರೇಂದ್ರ ಲೇಟ್ ರಾಜೂಗೌಡ ಹೆಸರಿನಲ್ಲಿ ಜಮೀನು ಇದೆ. 2013-14ನೇ ಸಾಲಿ ನಲ್ಲಿ ನರೇಂದ್ರ ಅವರು 2ಸಾವಿರ ರೂ. ಬರ ಪರಿಹಾರ ಪಡೆದಂತೆ ದಾಖಲೆ ಸೃಷ್ಠಿಯಾಗಿದ್ದು ಇದು ಈಗ ವಿವಾದಕ್ಕೀಡಾಗಿದೆ.

ಶಾಸಕ ನರೇಂದ್ರ ಅವರು ಬಿಎ ಎಲ್‍ಎಲ್‍ಬಿ ಪದವೀಧರರು. ಮೂಲತಃ ರಾಜಕೀಯಕ್ಕೆ ಬರುವ ಮುನ್ನ ವಕೀಲರಾಗಿದ್ದವರು. ಅವರು ಸಹಿ ಮಾಡುತ್ತಾರೆ. ಆದರೆ ಕಂದಾಯ ಇಲಾಖೆ ದಾಖಲೆಗಳ ಮೂಲಕ ಅವರ ಸಹಿಯನ್ನು ಫೋರ್ಜರಿ ಮಾಡಲಾಗಿದೆ. ಹೆಬ್ಬೆಟ್ಟು ಗುರುತು ಹಾಕಿಸಿಕೊಳ್ಳಲಾಗಿದ್ದು, ಅವರ ಸಹಿ ಫೋರ್ಜರಿ ಮಾಡಲಾಗಿರುವುದು ಬೆಳಕಿಗೆ ಬಂದಿದೆ. ತಮ್ಮ ಸಹಿಯನ್ನು ಕಂದಾಯ ಇಲಾಖಾಧಿಕಾರಿಗಳು ಫೋರ್ಜರಿ ಮಾಡಿದ್ದಾರೆ ಎಂಬ ಸತ್ಯ ತಿಳಿದಿದ್ದರೂ ಸಹಾ ಶಾಸಕರು ಸಂಬಂಧಪಟ್ಟ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮುಂದಾಗದಿರುವುದು ಈಗ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ದೊಡ್ಡಿಂದುವಾಡಿಯ ಜಮೀನಿನಲ್ಲಿ ಶಾಸಕ ನರೇಂದ್ರ ಅವರಿಗೆ 2ಸಾವಿರ ಬರಪರಿಹಾರ ನೀಡಿದಂತೆ ಅಧಿಕಾರಿಗಳು ದಾಖಲೆ ಸೃಷ್ಠಿಸಿರುವುದು.

ಬರ ಪರಿಹಾರದಲ್ಲಿ ಈಗಾಗಲೇ ಕಳೆದ 2ವರ್ಷಗಳ ಹಿಂದೆ 2012ರಿಂದ 15ನೇ ಸಾಲಿನ ತನಕ ನಾಲ್ಕೈದು ವರ್ಷಗಳ ಕಾಲ ವ್ಯಾಪಕ ಭ್ರಷ್ಟಾಚಾರ ನಡೆದಿತ್ತು. ಅಂದಿನ ಉಪವಿಭಾಗಾಧಿಕಾರಿಗಳು ಮಹದೇಶ್ವರಬೆಟ್ಟ ರಾಜು. ಮಧುವನಹಳ್ಳಿ ನಿರಂಜನ್ ಕುಮಾರ್. ರಾಮಾಪುರ ಪ್ರಸಾದ್. ಹೂಗ್ಯಂ ನಟೇಶ್ ಸೇರಿದಂತೆ ಹಲವು ಗ್ರಾಮ ಲೆಕ್ಕಿಗರನ್ನು ಬರಪರಿಹಾರದ ಹಣ ದುರ್ಬಳಕೆಯಡಿ ಅಮಾನತುಗೊಳಿ ಸಲಾಗಿತ್ತು. ಆದರೆ ಪಾಳ್ಯ ಹೋಬಳಿಯಲ್ಲಿ ಮಾತ್ರ ತಪ್ಪಿತಸ್ಥ ಅಧಿಕಾರಿಗಳನ್ನು ರಕ್ಷಿಸುವ ಕೆಲಸವನ್ನು ಪ್ರಭಾವಿ ರಾಜಕಾರಣ ಯೊಬ್ಬರು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಪಾಳ್ಯ ಹೋಬಳಿ ಬರ ಪರಿಹಾರದ ಹಣವನ್ನು ಸ್ಥಳೀಯ ಶಾಸಕರಾಗಿರುವ ನರೇಂದ್ರ ಅವರ ಹೆಸರಿನಲ್ಲೂ ಪಡೆಯುವ ಮೂಲಕ ಅಧಿಕಾರಿಗಳು ಅವ್ಯವಹಾರ ಎಸಗಿದ್ದರೂ ಸಹಾ ಶಾಸಕರು ಮೌನ ವಹಿಸಿರುವುದೇಕೆ ಎಂದು ಆರ್‍ಟಿಐ ಕಾರ್ಯಕರ್ತ ದಶರಥ್ ಪ್ರಶ್ನಿಸಿದ್ದಾರೆ. ಶಾಸಕರ ಹೆಸರಿನಲ್ಲೇ ಸರ್ಕಾರದ ಚೆಕ್‍ಗೆ ಸಹಿ ಫೋರ್ಜರಿ ಮಾಡಲಾಗಿದೆ ಎಂದರೆ ಇನ್ನು ಹನೂರು ಕ್ಷೇತ್ರದಲ್ಲಿ ಎಂತಹ ಭ್ರಷ್ಚಾಚಾರ ನಡೆದಿರ ಬಹುದು ಎಂದು ಅವರು ಪ್ರಶ್ನಿಸಿದ್ದಾರೆ.

ಬರಪರಿಹಾರದಲ್ಲಿ 2 ಸಾವಿರ ಪರಿಹಾರ ನಾನು ಪಡೆದಿಲ್ಲ. ಅದರ ಅಗತ್ಯ ನನಗಿಲ್ಲ. ಜಮೀನು ನನ್ನ ಹೆಸರಿನಲ್ಲಿರುವುದು ನಿಜ. ಅದು ನನ್ನ ಜಮೀನೆ. ಆದರೆ ಜಮೀನನ್ನು ನಾನು ಹಲವು ವರ್ಷಗಳ ಕಾಲ ರಾಜು ಎಂಬುವರಿಗೆ ಗುತ್ತಿಗೆ ನೀಡಿದ್ದೆ. ಕಳೆದ 15-20 ದಿನಗಳ ಹಿಂದೆಯಷ್ಟೆ ನಾನು ಜಮೀನು ಬಿಡಿಸಿ ಕೊಂಡಿದ್ದೇನೆ. ನಾನು ಜಮೀನು ಬೇರೆಯವರಿಗೆ ನೀಡಿ ಸುಮಾರು 25-30ವರ್ಷಗಳೇ ಸಂದಿತ್ತು. ಈಗ ಗ್ರಾಮಸ್ಥರ ಸಮ್ಮುಖದಲ್ಲೇ ಬಿಡಿಸಿಕೊಂಡಿದ್ದೇನೆ. ಅದಕ್ಕೂ ಮುನ್ನ ಪರಿಹಾರದ ಚೆಕ್ ಯಾರೋ ಪಡೆದುಕೊಂಡಿರಬಹುದು.
– ಶಾಸಕ ನರೇಂದ್ರ

ಶಾಸಕರು ಬರಪರಿಹಾರದಲ್ಲಿ ತಮ್ಮ ಜಮೀನಿನ ಹಣ ಪಡೆದಿಲ್ಲ ಎಂದ ಮೇಲೆ ತಪ್ಪಿತಸ್ಥರ ವಿರುದ್ದ ಏಕೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಿಲ್ಲ. ಹನೂರು ಕ್ಷೇತ್ರದಲ್ಲಿ ಜಲಾನಯನ ಇಲಾಖೆಯಲ್ಲಿ ಈಗಾಗಲೇ 6.45ಕೋಟಿ ಲೂಟಿಯಾಗಿದೆ. ಇದರ ಪ್ರಮುಖ ರೂವಾರಿ ಸ್ವಜಾತಿಯವರು ಎಂಬ ಕಾರಣಕ್ಕೆ ಸಿದ್ದೆಗೌಡ ಎಂಬುವರನ್ನು ಇವರೆ ರಕ್ಷಿಸಿದ್ದಾರೆ. ಕುಡಿಯುವ ನೀರು ಪೂರೈಕೆಯಲ್ಲೂ ಕೋಟಿಗಟ್ಟಲೆ ಲೂಟಿಯಾಗಿದೆ. ಇವರ ಅವಧಿಯಲ್ಲೇ ಸಾಕಷ್ಟು ಭ್ರಷ್ಚಾಚಾರ ನಡೆದಿದೆ.
– ಅಣಗಳ್ಳಿ ದಶರಥ್, ಆರ್‍ಟಿಐ ಕಾರ್ಯಕರ್ತ.

ಗ್ರಾಮಸ್ಥರ ಮೇಲೆ ನರೇಂದ್ರ ಬೆಂಬಲಿಗರ ಹಲ್ಲೆ

ಕೊಳ್ಳೇಗಾಲ:  ಮತಯಾಚನೆಯ ವೇಳೆ ಗ್ರಾಮಸ್ಥರು ಶಾಸಕ ಆರ್.ನರೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡ ಸಂದರ್ಭದಲ್ಲಿ ಶಾಸಕರ ಬೆಂಬಲಿಗರು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ ಪ್ರಸಂಗ ನಡೆದಿದೆ.

ಹನೂರು ಶಾಸಕ ಆರ್.ನರೇಂದ್ರ ಸಮೀಪದ ಚಂಗಡಿ ಗ್ರಾಮಕ್ಕೆ ಮತಯಾಚನೆಗೆ ತೆರಳಿದ್ದರು. ಈ ವೇಳೆ ಗ್ರಾಮಸ್ಥರು ಕಳೆದ 10ವರ್ಷಗಳಿಂದ ಶಾಸಕರಾಗಿದ್ದರೂ ಇಲ್ಲಿನ ದುರವಸ್ಥೆಯನ್ನು ಆಲಿಸಲು ಗ್ರಾಮಕ್ಕೆ ಬಾರದೆ, ಇಂದು ಓಟಿಗಾಗಿ ಬಂದಿದ್ದೀರೆಂದು ಕಾರು ಅಡ್ಡಗಟ್ಟಿ ತರಾಟೆ ತೆಗೆದುಕೊಂಡರು. ಈ ವೇಳೆ ಕುಪಿತಗೊಂಡ ಶಾಸಕರ ಬೆಂಬಲಿಗÀರು ಗ್ರಾಮಸ್ಥರಿಗೆ ಧಮಕಿ ಹಾಕಿ ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲಿದ್ದ ಯುವಕನೊಬ್ಬನ ಬಟ್ಟೆಯನ್ನು ಹರಿದು ಹಾಕಿ, ಹನೂರಿಗೆ ಬನ್ನಿ ಆಗ ನಿಮಗೊಂದು ಗತಿಕಾಣ ಸುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿದರೆಂದು ಗ್ರಾಮಸ್ಥರಾದ ದೊಡ್ಡೇಗೌಡ ದೂರಿದ್ದಾರೆ. ಈ ಘಟನೆ ಬಗ್ಗೆ ಗ್ರಾಮಸ್ಥರು ಕಾಂಗ್ರೆಸ್‍ನ ಆರು ಮಂದಿ ವಿರುದ್ಧ ದೂರು ನೀಡಿದ್ದರೆ, ಕಾಂಗ್ರೆಸ್‍ನವರು ಗ್ರಾಮದ 21 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.

 

Translate »