ಪ್ರಧಾನಿ ಹುದ್ದೆಗೆ ತಕ್ಕಂತೆ ಮಾತನಾಡಿಲ್ಲ
ಚಾಮರಾಜನಗರ

ಪ್ರಧಾನಿ ಹುದ್ದೆಗೆ ತಕ್ಕಂತೆ ಮಾತನಾಡಿಲ್ಲ

May 4, 2018

ಚಾಮರಾಜನಗರ: ಸಂತೇಮರಹಳ್ಳಿಯಲ್ಲಿ ನಡೆದ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿದ್ದಾರೆ. ಪ್ರಧಾನಿ ಹುದ್ದೆಯ ಘನತೆಗೆ ತಕ್ಕಂತೆ ಮಾತನಾಡಿಲ್ಲ ಎಂದು ಸಂಸದ ಆರ್.ಧ್ರುವನಾರಾಯಣ್ ತಿರುಗೇಟು ನೀಡಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಮೋದಿ ಅವರು ತಮ್ಮ ಭಾಷಣದ ಆರಂಭದಲ್ಲಿ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಾದ ಮಲೈಮಹದೇಶ್ವರ, ಬಿಳಿಗಿರಿ ರಂಗನಾಥ, ಹಿಮವದ್ ಗೋಪಾಲಸ್ವಾಮಿ ಪದಗಳನ್ನು ಹೇಳುವಾಗ ಸರಿಯಾಗಿ ಉಚ್ಛರಿಸಿಲ್ಲ. ಮೋದಿ ಅವರಿಗೆ ಹೋಲಿಸಿದರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಪರವಾಗಿಲ್ಲ ಎಂದರು.

ಕಾಂಗ್ರೆಸ್‍ನ್ನು 2+1 ಹಾಗೂ 1+1 ಎನ್ನುವ ಮೂಲಕ ಕಾಂಗ್ರೆಸನ್ನು ಕುಟುಂಬ ರಾಜಕಾರಣದಲ್ಲಿ ತೊಡಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಮೋದಿ ಅವರು ವಾರಣಾಸಿ ಮತ್ತು ಗುಜರಾತ್ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದನ್ನು ಮರೆತಿರಬಹುದು. ಬಿಜೆಪಿ ಬಳ್ಳಾರಿ ಭಾಗದಲ್ಲಿ ರೆಡ್ಡಿ ಕುಟುಂಬಗಳಿಗೆ 6+1 ನೀಡಿದೆ. ಟೀಕೆ ಮಾಡುವಾಗ ತಮ್ಮ ಪಕ್ಷ ನೀತಿ-ನಿಯಮಗಳನ್ನು ಅನುಸರಿಸಿದೆಯೇ ಎಂಬುದನ್ನು ಮೊದಲು ನೋಡಬೇಕು. ಮೋದಿ ಅವರು ಡಬಲ್ ಸ್ಪೆಂಡೆಡ್ ನೀತಿಯನ್ನು ಮೊದಲು ಬಿಡಬೇಕು ಎಂದು ಧ್ರುವನಾರಾಯಣ್ ಹೇಳಿದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ವರ್ಷಕ್ಕೆ 12,071 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿತ್ತು. ಆದರೆ ಈಗಿನ ಎನ್‍ಡಿಎ ಸರ್ಕಾರ ಪ್ರತಿವರ್ಷ 6,562 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದೆ. ಕರ್ನಾಟಕದಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೆಲವು ಹಾಡಿಗಳಿಗೆ, ಸೋಲಾರ್ ದೀಪವನ್ನು ಅಳವಡಿಸಲಾಗಿದೆ. ಉಳಿದ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ಈ ವಿಷಯವನ್ನು ತಿಳಿಯದೆ. ಮೋದಿ ಅವರು ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನು ಸತ್ಯ ಎಂದು ನಂಬಿಸುವುದೇ ಬಿಜೆಪಿ ಹುಟ್ಟುಗುಣ ಎಂದು ಆಪಾದಿಸಿದರು.

ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸದ ಪ್ರಧಾನಿಗಳು ರೈತರ ವರಮಾನವನ್ನು ದ್ವಿಗುಣಗೊಳಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಸಂಸದ ಧ್ರುವನಾರಾಯಣ್, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಪ್ರವಾಸಿತಾಣಗಳ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ 2015ರಲ್ಲಿಯೇ ಕಳುಹಿಸಲಾಗಿದೆ. ಇದಕ್ಕೆ ಅನುಮೋದನೆ ನೀಡಿಲ್ಲ ಎಂದು ದೂರಿದರು.

ಬಿ.ಎಸ್.ಯಡಿಯೂರಪ್ಪ ಮೇ 17ರಂದು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಹೇಳುವ ಮೂಲಕ ಹಗಲು-ಕನಸು ಕಾಣುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ 50 ಸೀಟು ಗೆಲ್ಲೊಲ್ಲ ಎಂದಿದ್ದಾರೆ. ಇದು ನಿಜವೇ ಆದಲ್ಲಿ ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದಿ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ. ಈ ಸವಾಲನ್ನು ಯಡಿಯೂರಪ್ಪ ಸ್ವೀಕರಿಸುತ್ತಾರಾ?
– ಆರ್.ಧ್ರುವನಾರಾಯಣ್, ಸಂಸದ.

ರಾಹುಲ್ ಗಾಂಧಿ ಅವರಿಂದ 5 ಬಾರಿ ವಿಶ್ವೇಶ್ವರಯ್ಯ ಎಂದು ಹೇಳಿಸಿ , ಚೀಟಿ ಇಲ್ಲದೇ 15 ನಿಮಿಷ ಮಾತನಾಡಲಿ ಎಂದು ಮೋದಿ ಸವಾಲು ಹಾಕಿದ್ದಾರೆ. ಆದರೆ ರಾಹುಲ್ ಗಾಂಧಿ ಅವರು ಯಾವುದನ್ನು ಮರೆಯಬಾರದು ಎಂದು ಪಾಯಿಂಟ್‍ಗಳನ್ನು ಬರೆದುಕೊಂಡು ಅವನ್ನು ನೋಡಿ ಭಾಷಣ ಮಾಡುತ್ತಾರೆ. ಆದರೆ ಮೋದಿ ಅವರು ಇದನ್ನೇ ದೊಡ್ಡದು ಎಂದು ಟೀಕಿಸಿದ್ದಾರೆ. ಅವರು ಪ್ರಧಾನಿ ಹುದ್ದೆಗೆ ತಕ್ಕಂತೆ ಮಾತನಾಡಿಲ್ಲ ಎಂದರು.

ಚಾಮರಾಜನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಪ್ರಧಾನಿಗಳು ಹೇಳಿದ್ದಾರೆ. ಆದರೆ ನಗರದಲ್ಲಿ ಇದ್ದ ನೀರಿನ ಸಮಸ್ಯೆ ಬಗ್ಗೆಹರಿಸಿದ್ದೇ ಕಾಂಗ್ರೆಸ್ ಸರ್ಕಾರ. ಚಾ.ನಗರ-ಬೆಂಗಳೂರು ರೈಲು ಮಾರ್ಗ ನಿರ್ಧಾರಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ಅದರೆ ರಾಜ್ಯ ಸರ್ಕಾರ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇದಕ್ಕೆ ಉತ್ತರ ನೀಡಿಲ್ಲ. ಪ್ರಧಾನಮಂತ್ರಿಗಳು ಅಂಕಿ-ಅಂಶಗಳನ್ನು ಇಟ್ಟುಕೊಳ್ಳದೇ ಮಾತನಾಡಿದ್ದಾರೆ. ಮೋದಿ ಅವರು ಪ್ರಧಾನಿ ಹುದ್ದೆಯ ಘನತೆಗೆ ತಕ್ಕಂತೆ ಮಾತನಾಡಿಲ್ಲ ಎಂದು ಧ್ರುವನಾರಾಯಣ್ ಟೀಕಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಪಂ ಸದಸ್ಯ ಕೆ.ಪಿ.ಸದಾಶಿವಮೂರ್ತಿ, ಚೂಡಾ ಅಧ್ಯಕ್ಷ ಸುಹೇಲ್, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಜಿಪಂ ಮಾಜಿ ಸದಸ್ಯ ನಾಗರಾಜಪ್ಪ, ನಗರಸಭೆ ಉಪಾಧ್ಯಕ್ಷ ಆರ್.ಎಂ.ರಾಜಪ್ಪ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.

Translate »