ಹಾಸನ 5 ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಾಂತಿಯುತ ಮತದಾನ
ಹಾಸನ

ಹಾಸನ 5 ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಾಂತಿಯುತ ಮತದಾನ

September 1, 2018

ಹಾಸನ: ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ನಡೆದ ಮತ ದಾನವು ಕೆಲವೆಡೆ ಮತಯಂತ್ರ ದೋಷ, ಸಣ್ಣ-ಪುಟ್ಟ ಗೊಂದಲ ಹೊರತುಪಡಿಸಿ ಯಾವುದೇ ಅಹಿತಕರ ಘಟನೆ ಸಂಭವಿಸಿ ದಂತೆ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿತು.

5 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 135 ವಾರ್ಡ್‍ಗಳಲ್ಲಿ 486 ಅಭ್ಯರ್ಥಿಗಳು ಸ್ಪರ್ಧಿ ಸಿದ್ದು, 274 ಮತಗಟ್ಟೆಗಳಲ್ಲಿ ಇಂದು ಮತ ದಾನ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 5ಗಂಟೆಗೆ ಮುಕ್ತಾಯಗೊಂಡು, ಹಾಸನ ನಗರಸಭೆಯಲ್ಲಿ ಶೇ. 63.02, ಅರಸೀಕೆರೆ ನಗರಸಭೆಯಲ್ಲಿ ಶೇ.67.67, ಚನ್ನರಾಯ ಪಟ್ಟಣ ಪುರಸಭೆಯಲ್ಲಿ ಶೇ. 70.66, ಹೊಳೆ ನರಸೀಪುರ ಪುರಸಭೆಯಲ್ಲಿ ಶೇ.69.18, ಸಕಲೇಶಪುರ ಪುರಸಭೆಯಲ್ಲಿ ಶೇ.77.04 ರಷ್ಟು ಫಲಿತಾಂಶ ದಾಖಲಾಯಿತು.
ಹಾಸನ ನಗರಸಭೆ: ಇಲ್ಲಿನ 35 ವಾರ್ಡ್ ಗಳಿಂದ 157 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 135 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಎಲ್ಲಾ ವಾರ್ಡ್‍ಗಳ ಮತ ಕೇಂದ್ರಗಳಲ್ಲಿ ನಿಗದಿಯಂತೆ ಬೆಳಿಗ್ಗೆ 7ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಪ್ರಾರಂಭವಾಗಿ ಸಂಜೆ 5 ಗಂಟೆವರೆಗೂ ನಡೆಯಿತು. ಎಲ್ಲಾ ಮತಗಟ್ಟೆ ಗಳಿಗೂ ಬಿಗಿ ಪೊಲೀಸ್ ಒದಗಿಸದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿ ಸದೆ ಶಾಂತಿಯುತವಾಗಿ ಮತದಾನ ಜರುಗಿತು.

ಕೆಲ ಮತಗಟ್ಟೆಗಳಲ್ಲಿ ಮತದಾರರ ಪಟ್ಟಿ ಯಲ್ಲಿ ದೋಷ ಕಂಡು ಬಂದು ಮತದಾ ರರು ವಾಪಸ್ಸಾದ ಪ್ರಸಂಗವೂ ಕಂಡು ಬಂತು. ಬೆಳಿಗ್ಗೆ 9 ಗಂಟೆ ವೇಳೆಗೆ ಶೇ.8.35ರಷ್ಟು, 11 ಗಂಟೆ ವೇಳೆಗೆ ಶೇ.21. 97ರಷ್ಟು ಮತದಾನ ವಾದರೆ ಮಧ್ಯಾಹ್ನ 2 ಗಂಟೆ ವೇಳೆಗೆ ಶೇ.50, 4 ಗಂಟೆ ವೇಳೆಗೆ ಶೇ.60, 5 ಗಂಟೆ ವೇಳೆಗೆ ಮತದಾನ ಕೊನೆಗೊಂಡಿತು. ಅಂತಿಮ ವಾಗಿ ಶೇ.63.02 ಫಲಿತಾಂಶ ದಾಖಲಾಯಿತು. ಸದ್ಯ ಮತಯಂತ್ರಗಳನ್ನು ಬಿಗಿ ಪೊಲೀಸ್ ಬಿಗಿ ಭದ್ರತೆಯಲ್ಲಿ ನಗರದ ಸರ್ಕಾರಿ ಇಂಜಿನಿ ಯರ್ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿರಿಸಲಾಗಿದೆ. ಸೆ.3ರಂದು ಮತ ಎಣಿಕೆ ನಡೆಯಲಿದೆ.

ಅರಸೀಕೆರೆ ನಗರಸಭೆ: 31 ವಾರ್ಡ್ ಗಳಲ್ಲಿ 107 ಅಭ್ಯರ್ಥಿಗಳು ಕಣದಲ್ಲಿದ್ದರು. 50 ಮತಗಟ್ಟೆಗಳಲ್ಲಿ ಮತದಾನ ನಡೆ ಯಿತು. ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡು 9 ಗಂಟೆವರೆಗೆ ಎಲ್ಲಾ 50 ಮತಗಟ್ಟೆಯಿಂದ ಶೇ.9.67ರಷ್ಟು ಮತ ದಾನ ದಾಖಲಾಯಿತು. 11 ಗಂಟೆ ವೇಳೆಗೆ ಶೇ.23.77, ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.39.80 ಮತದಾನ ದಾಖಲಾಯಿತು. ಮಧ್ಯಾಹ್ನ 3 ಗಂಟೆಗೆ ಶೇ.53.81, ಸಂಜೆ 5 ಗಂಟೆ ವೇಳೆ ಮತದಾನ ಪೂರ್ಣ ಗೊಂಡು ಯಾವುದೇ ಆಹಿತಕರ ಘಟನೆ ನಡೆಯದಂತೆ ಶೇ.67.67 ಫಲಿತಾಂಶ ದಾಖಲಾಯಿತು. ಬೆಳಿಗ್ಗೆಯಿಂದಲೇ ನೀರಸ ವಾಗಿ ಪ್ರಾರಂಭವಾದ ಮತದಾನ ಮಧ್ಯಾ ಹ್ನದ ನಂತರ ಕಾವು ಪಡೆದುಕೊಂಡಿತು. ಪ್ರತಿ ವಾರ್ಡ್‍ಗಳಲ್ಲೂ ಪ್ರತಿನಿಧಿಸಿರುವ ಅಭ್ಯರ್ಥಿಗಳು ತಮ್ಮ ಪರವಾಗಿ ಮತ ಹಾಕುವಂತೆ ಮನವಿ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮತಗಟ್ಟೆ ಸಂಖ್ಯೆ 19ರ ಪೌರಕಾರ್ಮಿಕರ ಕಾಲೋನಿಯಲ್ಲಿ ಅತ್ಯಂತ ಕಡಿಮೆ ಮತದಾನ ದಾಖಲಾಯಿತು. ಮತ ಯಂತ್ರಗಳನ್ನು ನಗರದ ಶ್ರೀ ವಿವೇಕಾ ನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ.

ಹೊಳೆನರಸೀಪುರ ಪುರಸಭೆ: ಇಲ್ಲಿನ 23 ವಾರ್ಡ್‍ಗಳಿಂದ 65 ಅಭ್ಯರ್ಥಿಗಲು ಕಣದಲ್ಲಿದ್ದು, 33 ಮತಗಟ್ಟೆಗಳಲ್ಲಿ ಮತ ದಾನ ನಡೆಯಿತು. ಮತದಾನ ಬಹುತೇಕ ಶಾಂತಿಯುತವಾಗಿ ಮುಗಿದರೂ ಮಧ್ಯಾಹ್ನ ದವರೆಗೂ ನೀರಸ ಪ್ರತಿಕ್ರಿಯೆ ಕಂಡು ಬಂದಿತು. ನಂತರ ಚುರುಕು ಪಡೆದು ಕೊಂಡಿತು. ಸಂಜೆ 5ರ ವೇಳೆಗೆ ಬಹುತೇಕ ಮತದಾನ ಪೂರ್ಣಗೊಂಡು 69.18ರಷ್ಟು ಫಲಿತಾಂಶ ದಾಖಲಾಯಿತು. ಸದ್ಯ ಮತ ಯಂತ್ರಗಳನ್ನು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿ ಬಿಗಿ ಬಂದೋಸ್ತ್‍ನಲ್ಲಿಡಲಾಗಿದೆ.

ಚನ್ನರಾಯಪಟ್ಟಣ ಪುರಸಭೆ: 23 ವಾರ್ಡ್‍ಗಳಿಂದ 72 ಅಭ್ಯರ್ಥಿಗಳು ಸ್ಪರ್ಧಿ ಸಿದ್ದು, 33 ಮತಗಟ್ಟೆಗಳಲ್ಲಿ ಮತದಾನ ನಡೆ ಯಿತು. ಪುರಸಭೆ ವಾರ್ಡ್ ನಂ.2 ಮತ್ತು 17ರಲ್ಲಿ ಅಧಿಕಾರಿಗಳ ಯಡವಟ್ಟಿನಿಂದ ಅಭ್ಯರ್ಥಿಗಳ ಕ್ರಮಸಂಖ್ಯೆ ಅದಲು ಬದಲಾ ಗಿರುವುದನ್ನು ವಿರೋಧಿಸಿ ಚುನಾವಣೆ ಮುಂದೂಡುವಂತೆ ಆಗ್ರಹಿಸಿದ ಪರಿಣಾಮ ಕೆಲಕಾಲ ಮತದಾನ ಗೊಂದಲ ಸೃಷ್ಟಿಯಾ ಯಿತು. ಇದರಿಂದ ಅರ್ಧ ಗಂಟೆಗಳಷ್ಟು ಮತ ದಾನ ಸ್ಥಗಿತಗೊಂಡಿತ್ತು. ತಹಶೀಲ್ದಾರ್ ಗೊಂದಲ ಬಗೆಹರಿಸಿದ ನಂತರ ಮತದಾನ ಮುಂದುವರೆದು, ಅಂತಿಮವಾಗಿ ಶೇ. 70.66 ಫಲಿತಾಂತ ದಾಖಲಾಯಿತು.

ಸಕಲೇಶಪುರ ಪುರಸಭೆ: 23 ವಾರ್ಡ್ ಗಳಿಂದ 85 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 23 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಮುಂಜಾನೆಯಿಂದಲೇ ಬಿರುಸಿನಿಂದ ಮತ ದಾನ ಪ್ರಕ್ರಿಯೆ ನಡೆಯಿತು. ಬಹುತೇಕ ಮತ ಕೇಂದ್ರಗಳಲ್ಲಿ ಮಧ್ಯಾಹ್ನ 2 ಗಂಟೆವರೆಗೂ ನಿಧಾನಗತಿಯಲ್ಲಿ ಮತದಾನ ಜರುಗಿತು. ಬೆಳಿಗ್ಗೆಯಿಂದ ಮಳೆ ಆರಂಭವಾಗಿದ್ದರೂ ಕೆಲಸಮಯ ಬಿಡುವು ಕೊಟ್ಟಿದ್ದರಿಂದ ಮತ ದಾನಕ್ಕೆ ಅಷ್ಟಾಗಿ ತೊಂದರೆ ಉಂಟಾಗಲಿಲ್ಲ. ಸಂಜೆ 3.45ರ ನಂತರ ಸುರಿದ ಮಳೆಯಿಂದ ಮತದಾನಕ್ಕೆ ತುಸು ಅಡ್ಡಿಯುಂಟಾಯಿತು. ಅಂತಿಮವಾಗಿ ಶೇ.77.04ರಷ್ಟು ಫಲಿತಾಂಶ ದಾಖಲಾಯಿತು. ಸದ್ಯ ಮತಯಂತ್ರಗಳು ತಾಲೂಕು ಕಚೇರಿಯಲ್ಲಿರಿಸಲಾಗಿದೆ.

Translate »