ಸಾಲ ಮನ್ನಾಕ್ಕೆ ಆತುರ ಬೇಡ
ಮೈಸೂರು

ಸಾಲ ಮನ್ನಾಕ್ಕೆ ಆತುರ ಬೇಡ

May 26, 2018

ಬೆಂಗಳೂರು: ರೈತರ ನೋವು ಚೆನ್ನಾಗಿ ಗೊತ್ತು, ಅವರ ಸಾಲ ಮನ್ನಾ ಮಾಡುತ್ತೇನೆ. ಅದಕ್ಕೆಲ್ಲ ಸ್ವಲ್ಪ ಸಮಯಾವಕಾಶ ಬೇಕು. ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ಮಾಡಿ, ಅವರ ವಿಶ್ವಾಸ ತೆಗೆದುಕೊಂಡು ನಿರ್ಣಯ ತೆಗೆದುಕೊಳ್ಳುತ್ತೇನೆ. ಬಿಎಸ್‍ವೈ ಅವರಿಗೆ ಇರುವ ಆತುರ ನಮಗೆ ಇಲ್ಲ. ಸಂಪೂರ್ಣ ವಿಶ್ವಾಸ ಮತ ಪಡೆದ ಬಳಿಕ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಜಗದೀಶ್ ಶೆಟ್ಟರ್ ಹೇಳಿಕೆ ಉಲ್ಲೇಖಿಸಿ ಟಾಂಗ್ ಕೊಟ್ಟ ಸಿಎಂ ಕುಮಾರಸ್ವಾಮಿ, ದಯವಿಟ್ಟು ಉತ್ತರ ಕರ್ನಾಟಕ- ದಕ್ಷಿಣ ಕರ್ನಾಟಕ ಎಂದು ವಿಭಾಗಿಸಬೇಡಿ ಎಂದರು. ನಮ್ಮ ಸರ್ಕಾರ 5 ವರ್ಷ ಆಡಳಿತ ನಡೆಸುತ್ತದೆ. ಇದರಲ್ಲಿ ಯಾವುದೇ ಅನುಮಾನಬೇಡ. ನಾವು ಬಡವರ ಮೇಲೆ ತೆರಿಗೆ ಹಾಕಿಲ್ಲ ಅನ್ನೋದನ್ನು ಸದನದಲ್ಲಿ ಕುಮಾರಸ್ವಾಮಿ ಪ್ರಸ್ತಾಪಿಸಿದರು.
ಸಾಲ ಮನ್ನಾ ಮಾಡುವುದನ್ನು ನಿಮ್ಮಿಂದ ಹೇಳಿಸಿಕೊಳ್ಳಬೇಕಾಗಿಲ್ಲ. 2006ರಲ್ಲಿ ನಮ್ಮ – ನಿಮ್ಮ ಸರ್ಕಾರ ಇದ್ದಾಗ ಸಾಲ ಮನ್ನಾ ಮಾಡುವ ಪ್ರಸ್ತಾಪ ಮಾಡಿದರೆ, ಬಿ.ಎಸ್. ಯಡಿಯೂರಪ್ಪ ನಿರಾಕರಿಸಿದ್ದರು. 2010ರಲ್ಲಿ ವಿಧಾನಸಭೆಯಲ್ಲಿ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಹೇಳಿದ್ದ ಪತ್ರಿಕಾ ಉಲ್ಲೇಖವನ್ನು ಕಲಾಪದಲ್ಲಿ ಪ್ರಸ್ತಾಪಿಸಿದರು. ಈ ಮೂಲಕ ಬಿಎಸ್‍ವೈ ಅವರ ಸಾಲ ಮನ್ನಾ ಸವಾಲಿಗೆ ಕುಮಾರಸ್ವಾಮಿ ಉತ್ತರ ಕೊಟ್ಟರು

ರಾಜ್ಯದ ಜನ ನನಗೆ ಮತ್ತೆ ಅವಕಾಶ ನೀಡಿದ್ದಾರೆ. ನನಗೆ ಗೊತ್ತು ಜನ ಯಾರಿಗೂ ಬಹುಮತ ಕೊಟ್ಟಿಲ್ಲ. 2008 ರಲ್ಲೂ ಬಿಜೆಪಿಗೆ ಸಂಪೂರ್ಣ ಬಹುಮತ ಕೊಟ್ಟಿದ್ದಿಲ್ಲ. ಅವತ್ತು ಕಾಂಗ್ರೆಸ್‍ನ 5 ಬಂಡಾಯ ಶಾಸಕರು ಗೆದ್ದಿದ್ದರು. ಆಗ ಕಾಂಗ್ರೆಸ್ ಮನಸ್ಸು ಮಾಡಿದ್ದರೆ ನೀವು ಸರ್ಕಾರ ರಚನೆ ಮಾಡಲಾಗುತ್ತಿರಲಿಲ್ಲ.

ಸಿಂಗಲ್ ಲಾರ್ಜೆಸ್ಟ್ ಪಾರ್ಟಿಗೆ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಿದ್ದನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಇದರ ಬಗ್ಗೆ ನನ್ನ ಆಕ್ಷೇಪವೇನೂ ಇಲ್ಲ. ಆದರೆ ಗೋವಾ ಸೇರಿದಂತೆ ಇತರ ರಾಜ್ಯಗಳಲ್ಲಿ ರಾಜ್ಯಪಾಲರು ಅನುಮತಿ ನೀಡಿದ್ದು ಸರಿಯೇ ಎಂದು ಬಿಎಸ್ ವೈ ಹೇಳಿಕೆಗೆ ಕುಮಾರಸ್ವಾಮಿ ಪ್ರತ್ಯುತ್ತರ ನೀಡಿದರು.

ಬಿಜೆಪಿ ಅಲ್ಲದೇ ಬೇರೆ ಪಕ್ಷ ಅಧಿಕಾರಕ್ಕೆ ಬರಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು. ಇದು ಸರಿಯೇ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ತೆಗೆದುಕೊಂಡ ನಿರ್ಧಾರ ಹಾಗೂ ಆ ಪಕ್ಷದ ನಾಯಕರು ನನ್ನ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ವಾಗ್ದಾನ ಮಾಡಿದರು ಕೇಂದ್ರ ಸರ್ಕಾರ ಯಾವ ರೀತಿ ಸುಳ್ಳು ದಾಖಲೆ ನಿರ್ಮಾಣ ಮಾಡಿದ್ದಾರೆ. ಕೇಂದ್ರ ಸರ್ಕಾರದ ಯಾವುದೇ ಬೆದರಿಕೆಗಳಿಗೆ ನಾನು ಬಗ್ಗುವುದಿಲ್ಲ. ಕೇಂದ್ರ ಸರ್ಕಾರ ಗೂಟ ಹೊಡೆದುಕೊಂಡು ಇರ್ತಾರಾ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗ್ತಾರೆ ಎಂಬ ಭಯದಿಂದ ಜೆಡಿಎಸ್ ಬೆಂಬಲ ನೀಡಿದ್ದಾರೆ ಎಂದು ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಇದು ಬಿಜೆಪಿ ರಾಜಕೀಯ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ಯಡಿಯೂರಪ್ಪ ಅವರು ಬಳಸಿದ ಭಾಷೆ ಸರಿಯಿಲ್ಲ. ಅವರು ಇನ್ನು ಮುಂದೆ ಅಧಿಕಾರಕ್ಕೆ ಬರಲ್ಲ. ಹಾಗಾಗಿಯೇ ಅವರು ಇವತ್ತು ಬಯಲು ರಂಗದ ಆಟಕ್ಕೆ ರಿಹರ್ಸಲ್ ಮಾಡ್ತಿದ್ದಾರೆ ಎಂದು ಟೀಕಿಸಿದರು.

Translate »