ಮೈಸೂರು: ಕೆಲವು ದಿನಗಳಿಂದ ಮೈಸೂರಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಶುಕ್ರವಾರವೂ ಸುರಿದ ಮಳೆಗೆ ನಗರದ ವಿವಿಧೆಡೆಗಳಲ್ಲಿ ಮರಗಳು ಧರೆಗುರುಳಿ, ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತವಾಗಿತ್ತು.
ಶುಕ್ರವಾರ ಸಂಜೆ 4 ಗಂಟೆ ವೇಳೆಗೆ ಆರಂಭವಾದ ಮಳೆ 1 ಗಂಟೆ ಕಾಲ ಜೋರಾಗಿ ಸುರಿಯಿತು. ಬಳಿಕ ಜಿಟಿಜಿಟಿಯಾಗಿ ತಡರಾತ್ರಿವರೆಗೂ ಸುರಿಯಿತು. ಇದರಿಂದ ಒಂಟಿಕೊಪ್ಪಲಿನ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ರಸ್ತೆ ಪಕ್ಕದಲ್ಲಿ ನಿಂತಿದ್ದ ತಮಿಳುನಾಡು ನೋಂದಣ ಯ (ಟಿಎನ್74 ಎಡಿ3481) ಕಾರಿನ ಮೇಲೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ.
ಈ ವೇಳೆ ಕರವೇ(ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ, ಬಿಜೆಪಿ ಮುಖಂಡ ಕೆ.ಮಾದೇಶ್ ಅವರು, ವಾಲ್ಮೀಕಿ ರಸ್ತೆಯಲ್ಲಿ ಹಲವು ಒಣಗಿದ ಮರದ ಕೊಂಬೆಗಳಿದ್ದು, ಅವುಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ವಾಲ್ಮೀಕಿ ರಸ್ತೆ ಯಲ್ಲಿನ ನ್ಯಾಯಾಧೀಶರ ವಸತಿ ಗೃಹದ ಸಮೀಪದಲ್ಲಿನ ಮರದ ಕೊಂಬೆಯೊಂದು ವಿದ್ಯುತ್ ಕಂಬದ ಮೇಲೆ ಮುರಿದು ಬಿದ್ದ ಪರಿಣಾಮ ವಿದ್ಯುತ್ ತಂತಿ ತುಂಡಾಗಿದೆ. ಕೂಡಲೇ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಅಪಾಯ ಸಂಭವಿಸಿಲ್ಲ. ಯಾದವಗಿರಿ, ತಿಲಕ್‍ನಗರದ ಕಿವುಡ ಮತ್ತು ಮೂಗ ಮಕ್ಕಳ ಶಾಲೆ ಸಮೀಪ, ಮಾತೃಮಂಡಳಿ ವೃತ್ತದ ಸಮೀಪ, ವಾಣ ವಿಲಾಸ ವಾಟರ್‍ವಕ್ರ್ಸ್ ಸೇರಿದಂತೆ ಮತ್ತಿತರೆ ಕಡೆಗಳಲ್ಲಿ ಮರಗಳು ಧರೆಗುರುಳಿವೆ. ವಿಷಯ ತಿಳಿದು ಪಾಲಿಕೆ ಅಭಯ ತಂಡ ಸ್ಥಳಕ್ಕಾಗಮಿಸಿ ಮರವನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆಗೆ ಮಳೆ ಆರಂಭವಾದ್ದರಿಂದ ಅಧಿಕಾರಿಗಳು ಮನೆಗೆ ತಡವಾಗಿ ತಲುಪಿದರೆ, ಸಾರ್ವಜನಿಕರು ಸ್ವಗ್ರಾಮಗಳಿಗೆ ತೆರಳಲು ಗ್ರಾಮಾಂತರ ಹಾಗೂ ನಗರ ಬಸ್ ನಿಲ್ದಾಣಗಳಿಗೆ ಬರಲು ತ್ರಾಸಪಡಬೇಕಾಯಿತು. ಶಾಲಾ ಮಕ್ಕಳು ಮಳೆಯಲ್ಲಿ ನೆನೆದುಕೊಂಡು ಮನೆಯತ್ತ ಹೆಜ್ಜೆಯಿಡುತ್ತಿದ್ದ ದೃಶ್ಯ ಕಂಡು ಬಂತು. ಜಿಟಿಜಿಟಿ ಮಳೆಯಿಂದ ಕೆಲವೆಡೆ ರಸ್ತೆಯಲ್ಲೇ ನೀರು ನಿಂತಿದ್ದರಿಂದ ವಾಹನ ಸವಾರರು, ರಸ್ತೆ ಬದಿ ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಯಿತು.
ವಿದ್ಯುತ್ ವ್ಯತ್ಯಯ: ಶುಕ್ರವಾರ ಸುರಿದ ಮಳೆಗೆ ನಗರದ ಬಹುತೇಕ ಕಡೆಗಳಲ್ಲಿ ವಿದ್ಯುತ್ ಕಡಿತವಾಗಿ ಕಗ್ಗತ್ತಲು ಆವರಿಸಿತ್ತು.
ಮೈಸೂರಲ್ಲಿ 9.7 ಮಿಮೀ ಮಳೆ: ಗುರುವಾರ ರಾತ್ರಿ ಮೈಸೂರಲ್ಲಿ 9.7 ಮಿಮೀ ಮಳೆಯಾಗಿದೆ. ತಿ.ನರಸೀಪುರ 23.3 ಮಿಮೀ, ಕೆ.ಆರ್.ನಗರ 18.65, ಹೆಚ್.ಡಿ.ಕೋಟೆ 35.7, ಪಿರಿಯಾಪಟ್ಟಣ 12.32 ಮಿಮೀ ಮಳೆಯಾಗಿದ್ದು, ನಂಜನಗೂಡು ಮತ್ತು ಹುಣಸೂರಿನಲ್ಲಿ ಮಳೆ ಬಿದ್ದ ಬಗ್ಗೆ ವರದಿಯಾಗಿಲ್ಲ ಎಂದು ಮೈಸೂರು ನಿಯಂತ್ರಣಾ ಕೊಠಡಿ ಅಧಿಕಾರಿಗಳು `ಮೈಸೂರು ಮಿತ್ರ’ ನಿಗೆ ತಿಳಿಸಿದರು.