ಪ್ರವಾಸಿ ತಾಣವಾಗಿ ಹೆಬ್ಬಾಳ ಕೆರೆ: ಸಚಿವ ಜಿಟಿಡಿ ಭರವಸೆ
ಮೈಸೂರು

ಪ್ರವಾಸಿ ತಾಣವಾಗಿ ಹೆಬ್ಬಾಳ ಕೆರೆ: ಸಚಿವ ಜಿಟಿಡಿ ಭರವಸೆ

October 16, 2018

ಮೈಸೂರು:  ಮೈಸೂರು ಹೆಬ್ಬಾಳ ಕೆರೆ ಸದ್ಯದಲ್ಲೇ ಮೈಸೂರಿನ ಮತ್ತೊಂದು ಪ್ರಮುಖ ಪ್ರವಾಸಿ ತಾಣವಾಗಲಿದೆ. 40 ಎಕರೆ ವಿಸ್ತಾರವಾದ, ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹಗೊಳ್ಳುವ ಹಸಿರು ವಲಯ. ನಗರದ ಪ್ರವಾಸೋದ್ಯಮ ಸ್ಥಳಗಳ ಪಟ್ಟಿಗೆ ಸೇರ್ಪಡೆ ಯಾಗುವ ಕಾಲ ದೂರವಿಲ್ಲ.

ರಾಜ್ಯ ಸರ್ಕಾರ ಮತ್ತು ಇನ್ಫೋಸಿಸ್ ಫೌಂಡೇಷನ್ ಜಂಟಿಯಾಗಿ ಹೆಬ್ಬಾಳ ಕೆರೆಯನ್ನು ಅಭಿವೃದ್ಧಿಪಡಿಸಲಿವೆ. ಈಗಾಗಲೇ ಫೌಂಡೇಷನ್ ಕೋಟ್ಯಾಂತರ ರೂ. ಖರ್ಚು ಮಾಡಿ ಹೆಬ್ಬಾಳ ಕೆರೆಯನ್ನು ನವೀಕರಿಸಿದೆ. ಆದರೆ ಕೆರೆಗೆ ಕೈಗಾರಿಕೆಗಳಿಂದ ಹರಿದು ಬರುತ್ತಿರುವ ಕೊಳಚೆ ನೀರನ್ನು ತಡೆದು, ಪ್ರವಾಸಿ ತಾಣವಾಗಿ ಮಾಡಲು ಸರ್ಕಾರ ಮುಂದಾಗಬೇಕಿದೆ.

ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಬಳಿ ಇರುವ ಹೆಬ್ಬಾಳ ಕೆರೆಯ ನೀರು ಹಲವು ವರ್ಷಗಳಿಂದ ಕಲುಷಿತಗೊಂಡಿದೆ. ಸುತ್ತ ಇರುವ ವಸತಿ ಬಡಾವಣೆ ಮತ್ತು ಕೈಗಾರಿಕೆಗಳಿಂದ ಹರಿದು ಬರುವ ಕೊಳಚೆ ನೀರಿನಿಂದ ಕೆರೆ ಮಾಲಿನ್ಯಗೊಳ್ಳುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ, ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ, ಜಿಲ್ಲಾಧಿಕಾರಿ ಅಭಿ ರಾಂ ಜಿ.ಶಂಕರ್, ಮೈಸೂರು ಮಹಾ ನಗರಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಇನ್ನಿತರ ಅಧಿಕಾರಿಗಳು ಸೋಮವಾರ ಹೆಬ್ಬಾಳ ಕೆರೆಯನ್ನು ಪರಿಶೀಲಿಸಿದರು.

ಎರಡು ವರ್ಷಗಳ ಹಿಂದೆ, ಮೈಸೂರು ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ, ಇನ್ಫೋಸಿಸ್ ಫೌಂಡೇಷನ್‍ನೊಂದಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿವೆ. ಕೆರೆಯ ಅಭಿವೃದ್ಧಿಗೆ ಇನ್ಫೋಸಿಸ್ 30 ಕೋಟಿ ರೂ. ಒದಗಿಸುವ ಭರವಸೆ ನೀಡಿದೆ. ಐದು ವರ್ಷಗಳವರೆಗೆ ಕೆರೆಯನ್ನು ಸಂರಕ್ಷಿಸಿ ನಂತರ ಪಾಲಿಕೆಗೆ ಹಸ್ತಾಂತರಿಸುವುದಕ್ಕೂ ಒಪ್ಪಿದೆ.

ಅಲ್ಲದೇ, ಕೆರೆಯ ಬಳಿಯಲ್ಲಿ 3 ಎಕರೆ ಪ್ರದೇಶದಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪಿಸಲು ಅಗತ್ಯ ಹಣ ನೀಡಲು, 15 ತಿಂಗಳಲ್ಲಿ ಹೂಳು ತೆಗೆಯುವುದು, ವಾಕಿಂಗ್ ಪಾಥ್ ನಿರ್ಮಾಣ, ಸಸಿಗಳನ್ನು ನೆಡುವುದು, ಅಲ್ಲದೆ ಸುತ್ತಲಿನ ಪ್ರದೇಶ ವನ್ನು ಅಲಂಕರಿಸುವುದಕ್ಕೆ ಯೋಜಿಸಲಾಗಿತ್ತು. ಇದರೊಟ್ಟಿಗೇ ಜರ್ಮನಿಯಿಂದ 8 ಎಂಎಲ್‍ಡಿ (ದಿನಕ್ಕೆ ಮಿಲಿಯನ್ ಲೀಟರ್) ಸಾಮಥ್ರ್ಯದ ವಿಶೇಷ ತಂತ್ರಜ್ಞಾನ ಅಳವಡಿಸಿ ಮರು ಬಳಕೆಯ ನೀರನ್ನು ಕೆರೆಗೆ ಹರಿಸಲು ನಿರ್ಧರಿಸಿದ್ದ ಇನ್ಫೋಸಿಸ್ ಫೌಂಡೇಷನ್ ಒಪ್ಪಂದದ ಪ್ರಕಾರ ಸದ್ಯದಲ್ಲೇ ಕೆರೆಯನ್ನು ಸುಂದರಗೊಳಿಸುವ ಮುಂದುವರೆದ ಕಾರ್ಯ ಕೈಗೊಳ್ಳಲಿದೆ.

ಫೌಂಡೇಷನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ಯವರು ಸೋಮವಾರದ ಭೇಟಿ ಸಂದರ್ಭದಲ್ಲೇ ಕೈಗಾರಿಕೆಗಳು, ವಸತಿ ಬಡಾವಣೆಗಳು, ಡಾಬಾಗಳಿಂದ ಹೊರ ಬಿಡಲಾಗುವ ಕೊಳಚೆ ನೀರಿನಿಂದ ಕೆರೆ ಮಲಿನಗೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಡಳಿತವು ಒಪ್ಪಂದದ ಪ್ರಕಾರ, ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಮಳೆಗಾಲದಲ್ಲಿ ಒಳಹರಿವು ಇರುವಂತೆ ನೋಡಿಕೊಳ್ಳಬೇಕು. ಹಾಗಾದರೆ ಮಾತ್ರ ಹೆಬ್ಬಾಳ ಕೆರೆ ಉಳಿವು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ಕಾರದ ವತಿಯಿಂದ ಹೆಬ್ಬಾಳ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿಪಡಿಸುವುದಾಗಿ ಸಚಿವ ಜಿ.ಟಿ. ದೇವೇಗೌಡ ಅವರು ಡಾ.ಸುಧಾ ಮೂರ್ತಿ ಅವರಿಗೆ ಭರವಸೆ ನೀಡಿದರು.

ಪ್ರವಾಸಿ ತಾಣ: ನಂತರ ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ದಸರಾ ದರ್ಶನ ಪ್ರವಾಸ ಕಾರ್ಯಕ್ರಮದ ಉದ್ಘಾಟನೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡರು, ಹೆಬ್ಬಾಳ ಕೆರೆ ಅಭಿವೃದ್ಧಿ ಬಗ್ಗೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಕೈಗಾರಿಕೆ ಮತ್ತು ಡಾಬಾಗಳಿಂದ ಕೆರೆಗೆ ಹರಿಯುತ್ತಿರುವ ಕೊಳಚೆ ನೀರಿಗೆ ತಡೆ ಒಡ್ಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಸರ್ಕಾರದ ವತಿಯಿಂದ ಹೆಬ್ಬಾಳ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸುವೆ ಎಂದು ಹೇಳಿದರು.

Translate »