ಮೈಸೂರು: ಮಹಿಳಾ ಮತ್ತು ಮಕ್ಕಳ ದಸರಾ ಹಮ್ಮಿಕೊಂಡಿದ್ದ ಮೈಸೂರಿನ ಜೆಕೆ ಮೈದಾನದಲ್ಲಿ ಮಳೆ ನೀರು ಭಾರೀ ಪ್ರಮಾಣದಲ್ಲಿ ನಿಂತಿದ್ದು, ಕೆಸರು ಗದ್ದೆಯಾದ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿಗೆ ಭೇಟಿ ನೀಡಿದ ನೂರಾರು ಮಂದಿ ಈ ಕೆಸರಿನಲ್ಲಿ ಹೆಜ್ಜೆ ಇಡಲಾಗದೇ ಪರಿತಪಿಸಬೇಕಾಯಿತು.
ಭಾನುವಾರ ರಾತ್ರಿ ಸುರಿದ ಮಳೆಗೆ ಜೆಕೆ ಮೈದಾನದ ಬಹುಭಾಗದಲ್ಲಿ ನೀರು ನಿಂತಿದ್ದ ಹಿನ್ನೆಲೆಯಲ್ಲಿ ಒಂದಿಷ್ಟು ಸಂಭ್ರಮಿಸಲು ಬಂದಿದ್ದ ಸಾರ್ವಜನಿಕರು, ಪ್ರವಾಸಿಗರು, ಕಾಲೇಜು ವಿದ್ಯಾರ್ಥಿಗಳು ಇಲ್ಲಿನ ಅವ್ಯವಸ್ಥೆ ಕಂಡು, ತೀವ್ರ ಬೇಸರ ವ್ಯಕ್ತಪಡಿಸಿದರು.
ಈ ಮೈದಾನದಲ್ಲಿ ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳ ವಸ್ತು ಪ್ರದರ್ಶನದ ಮಳಿಗೆಗಳಿಗೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮತ್ತೊಂ ದೆಡೆ ರೈತ ದಸರಾ ಅಂಗವಾಗಿ ಏರ್ಪಡಿಸಿದ್ದ ವಸ್ತು ಪ್ರದರ್ಶನ ಭಾನುವಾರವೇ ಮುಕ್ತಾಯಗೊಂಡಿದ್ದರೂ ಮಳಿಗೆಗಳನ್ನು ತೆರವು ಮಾಡದ ಹಿನ್ನೆಲೆಯಲ್ಲಿ ಈ ಮಳಿಗೆ ಗಳಿಗೂ ಮಳೆ ನೀರು ನುಗ್ಗಿ ಅಧ್ವಾನವಾಗಿತ್ತು.
ಎಚ್ಚರಿಕೆಯ ಹೆಜ್ಜೆ ಇಡಬೇಕು: ಇಲ್ಲಿನ ಬಹುತೇಕ ಮಳಿಗೆಗಳ ಎದುರು ನೀರು ಶೇಖರಣೆಗೊಂಡ ಹಿನ್ನೆಲೆಯಲ್ಲಿ ಸರಾಗವಾಗಿ ಸಾಗಲಾಗದ ಪರಿಸ್ಥಿತಿ ನಿರ್ಮಾಣ ವಾಗಿತ್ತು. ವರ್ಷ-ವರ್ಷವೂ ಇದೇ ಗೋಳು ಎದುರಾದರೂ ಪ್ರತಿ ವರ್ಷವೂ ಇಲ್ಲೇ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದು, ಪರ್ಯಾಯ ಸ್ಥಳದ ಬಗ್ಗೆ ಚಿಂತನೆ ಮಾಡುತ್ತಲೇ ಇಲ್ಲ. ಅದೋಟ್ಟಿಗಿರಲಿ, ಶೇಖರಣೆ ಗೊಂಡ ಮಳೆ ನೀರನ್ನು ಹೊರ ಹಾಕುವ ಪ್ರಯತ್ನವೂ ನಡೆಯಲಿಲ್ಲ. ಭೇಟಿ ನೀಡಿದ್ದವರು ಇಂತಹ ಅವ್ಯವಸ್ಥೆಯಲ್ಲೇ ಮೈದಾನದಲ್ಲಿ ವಿಧಿಯಿಲ್ಲದೇ ಅಡ್ಡಾಡಿ ಕೊನೆಗೆ ವ್ಯವಸ್ಥೆಗೆ ಹಿಡಿಶಾಪ ಹಾಕಿ ಮನೆಗೆ ಮರಳಿದರು.
ಜೆಕೆ ಮೈದಾನದಲ್ಲಿದ್ದ ಮತ್ಸ್ಯ ಮೇಳ ಪ್ರದರ್ಶನಕ್ಕೆ ಭಾನುವಾರವೇ ತೆರೆ ಎಳೆಯಲಾಗಿದೆ. ಅ.16ರವರೆಗೆ ಈ ಪ್ರದರ್ಶನ ಇರಲಿದೆ ಎಂದು ಹೇಳಲಾಗಿದ್ದ ಹಿನ್ನೆಲೆಯಲ್ಲಿ ಮತ್ಸ್ಯ ಪ್ರಪಂಚದಲ್ಲಿ ತೇಲುವ ಆಸೆ ಹೊತ್ತು ಬಂದವರಿಗೆ ನಿರಾಸೆಯಾಯಿತು. ಅ.20ರ ಬಳಿಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಮತ್ಸ್ಯ ಮೇಳ ಆಯೋಜನೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಬಂದವರಿಗೆ ಕಾರ್ಮಿಕರು ನೀಡಿ ಕಳುಹಿಸುತ್ತಿದ್ದ ದೃಶ್ಯ ಕಂಡು ಬಂತು.