ಚಿತ್ರ ತಾರೆಯರ ಮಸ್ತ್ ಡ್ಯಾನ್ಸ್‍ಗೆ ಕುಣಿದು ಕುಪ್ಪಳಿಸಿದ ಯುವಜನ
ಮೈಸೂರು, ಮೈಸೂರು ದಸರಾ

ಚಿತ್ರ ತಾರೆಯರ ಮಸ್ತ್ ಡ್ಯಾನ್ಸ್‍ಗೆ ಕುಣಿದು ಕುಪ್ಪಳಿಸಿದ ಯುವಜನ

October 16, 2018

ಮೈಸೂರು: ಚಿತ್ರ ತಾರೆಯರ ಮನಮೋಹಕ ನೃತ್ಯ, ಹಿನ್ನೆಲೆ ಗಾಯಕರ ಸಂಗೀತ ನಿನಾದ, ಹಾಸ್ಯ ಕಲಾವಿದರ ಝಲಕ್‍ನಿಂದ ಇಂದಿನ ಯುವ ದಸರಾ ರಂಗೇರಿತ್ತು.

ಮೈಸೂರಿನ ಮಹಾ ರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಯುವ ದಸರಾದ 4ನೇ ದಿನವಾದ ಸೋಮವಾರ, ಸ್ಯಾಂಡಲ್‍ವುಡ್ ನೈಟ್ಸ್ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಆರಂಭದಲ್ಲಿ ಯಕ್ಷಗಾನದ ಪೋಷಾಕು ಧರಿಸಿದ್ದ ಕಲಾವಿದರು, ವಿಶಿಷ್ಟ ನೃತ್ಯ ಪ್ರದರ್ಶನದೊಂದಿಗೆ ವಿಘ್ನ ವಿನಾಯಕನನ್ನು ಸ್ಮರಿಸಿದರು.

ಬಳಿಕ ವೇದಿಕೆಗೆ ಬಂದ ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ನಟಿ ರಜಿನಿ, `ಆಡು ಆಟ ಆಡು ಆಡಿ ನೋಡು…’,` ಹಲೋ ಮಿಸ್ಟರ್ ಮಿಸ್ಟರ್…’ ಗೀತೆಗಳಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು. ಅತ್ತ ವೇದಿಕೆಯಲ್ಲಿ ರಜಿನಿ ಧೂಳೆಬ್ಬಿಸುತ್ತಿದ್ದರೆ, ಇತ್ತ ಯುವ ಸಮೂಹ ಕುಣಿದು ಕುಪ್ಪಳಿ ಸಿತ್ತು. ಬಳಿಕ `ಗೆಳೆಯ ಎನಲೇ ಇನಯ ಎನಲೇ…’ ಎಂದು ಹೆಜ್ಜೆ ಹಾಕಿದ ನಟಿ ಸೋನುಗೌಡ, `ನಿಂತಲ್ಲಿ ನಿಲ್ಲಲಾರೆ ಆಹ್ಹಾಹ್ಹಾ…’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ರಂಜಿಸಿದರು. ಇದೇ ಸಂದರ್ಭದಲ್ಲಿ `ನಾನು ಮೊದಲ ಬಾರಿಗೆ

ದಸರಾ ಸಂದರ್ಭದಲ್ಲಿ ಮೈಸೂರಿಗೆ ಬಂದಿದ್ದೇನೆ. ತುಂಬಾ ಸಂತೋಷವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸ್ಯಾಂಡಲ್‍ವುಡ್ ಬ್ಯೂಟಿ ಕ್ವೀನ್ ಎನ್ನ ಲಾಗುವ ಹರಿಪ್ರಿಯ, `ಇವ ಯಾವೂರ ಗೆಳೆಯ…’, `ನೀರ್ ದೋಸೆ ನೀರ್ ದೋಸೆ…’ ಗೀತೆಗಳಿಗೆ ಸಹ ಕಲಾವಿದರೊಂದಿಗೆ ಹೆಜ್ಜೆ ಹಾಕಿದರು. ಪ್ರತಿ ವರ್ಷ ನಾನು ದಸರಾಗೆ ಕಾಯುತ್ತಿರುತ್ತೇನೆ. ಮೈಸೂರಿನಲ್ಲಿರುವ ಶಿಕ್ಷಣ, ಸಂಸ್ಕೃತಿ, ಮೈಸೂರು ಮಲ್ಲಿಗೆ, ಮೈಸೂರು ಪಾಕು ಎಲ್ಲವೂ ಅತ್ಯದ್ಭುತ ಎಂದು ಬಣ್ಣಿಸಿದರಲ್ಲದೆ, ನಾನು ಹಲವು ಬಾರಿ ಮೆಟ್ಟಿಲು ಮೂಲಕ ಚಾಮುಂಡಿ ಬೆಟ್ಟವನ್ನೇರಿ, ಪೂಜೆ ಸಲ್ಲಿಸಿದ್ದೇನೆ. ನಾಳೆ(ಅ.16)ಯೂ ಬೆಟ್ಟ ಹತ್ತುತ್ತಿದ್ದೇನೆ. ಆದರೆ ಸಮಯ ಹೇಳುವುದಿಲ್ಲ ಎಂದಾಗ ಯುವ ಸಮೂಹದಿಂದ ಹೋ… ಎಂಬ ಉದ್ಘಾರ ಕೇಳಿಬಂದಿತು. `ಯಾಕಿಂ ಗಾಡ್ತಾರೋ ಈ ಹುಡುಗರು…’ ಎಂಬ ಹಾಡಿಗೆ ಹೆಜ್ಜೆ ಹಾಕಿದ ನಟಿ ಶುಭಾ ಪೂಂಜಾ, `ನಾ ರಾಜಸ್ತಾನಿ ಪುಂಗಿ ಊದಲಾ…’, `ಸೊಂಟ ಕ್ಕಣಕ್ಕಣ್…’ `ಬೀಜ ಮೊದಲಾ ವೃಕ್ಷ ಮೊದಲಾ…’ ಗೀತೆಗಳ ತುಣುಕುಗಳಿಗೆ ಕುಣಿದು, ನೆರೆದಿದ್ದವರನ್ನೂ ಕುಣಿಸಿದರು.

ಸಂಗೀತ ವಿಹಾರ: ಕನ್ನಡದ ಹಿನ್ನೆಲೆ ಗಾಯಕ ರಿಂದ ಯುವ ದಸರಾದಲ್ಲಿ ಸಂಗೀತದ ಅಲೆ ಯೆದ್ದು, ಪ್ರೇಕ್ಷಕರ ಮನ ತಣಿಸಿತು. ಮಧುರ ಧ್ವನಿಯ ಗಾಯಕಿ ಅನುರಾಧ ಭಟ್, ಸಂಗೀತ ಪ್ರಿಯರು ಸದಾ ಗುನುಗುವ ಸುಮಧುರ ಗೀತೆಗಳ ಗುಚ್ಛ ಕಟ್ಟಿದರು. ‘ನಂದ ನಂದನ ನೀನು ಶ್ರೀಕೃಷ್ಣ ನನ್ನ ಬಂಧುವೇ ನೀನು ಶ್ರೀಕೃಷ್ಣ…’ ಎಂದು ಭಕ್ತಿಭಾವ ಹಂಚಿದ ಅವರು, `ಇವ ಯಾವೂರ ಗೆಳೆಯ ಬದಲಾಗಿ ಇವ ಮೈಸೂರ ಗೆಳೆಯ ಎಂದು ಹಾಡಿ…’ ಕುಣಿದು ಸಂಭ್ರಮಿಸುತ್ತಿದ್ದ ಯುವಕರ ಉತ್ಸಾಹ ಹೆಚ್ಚಿಸಿದರು. `ಕುಂತಲ್ಲಿ ಕೂರಂಗಿಲ್ಲ ನಿಂತಲ್ಲಿ ನಿಲ್ಲಂಗಿಲ್ಲ, ಜುಮ್ ಜುಮ್ ಮಾಯಾ.. ಪ್ರಾಯ ಬಂದ್ರೆ ಹೃದಯ ಗಾಯ…’, `ತೇಲೋದೆ ಹೀಗೆ ಬಾನಲ್ಲೇ…’, `ಮರಳಿ ಮರೆಯಾಗಿ… ಮನದ ದಡಕೀಗ ಬಡಿದು ಒಲವು ಸಿಹಿ ಸವಿ ಕವನ…’, `ತೆಳ್ಳಗೆ ಬೆಳ್ಳಗೆ ಇದ್ದಾನೆ ಯುದ್ಧಕೆ ನಿಂತರೆ ಮದ್ದಾನೆ, ಇವ ನಂದ್ರೆ ನನಗೆ ಪ್ರಾಣನೇ…’, `ನಮ್ದು ನಿಮ್ದು ನಿಮ್ದು ತುಂಬಾ ಹಳೇದು, ಹಿಂಗೆ ಇರ್ಲಿ ವಿಶ್ವಾಸ ತುಂಬಾ ಒಳ್ಳೇದು…’ ಹೀಗೆ ಹಲವು ಹಾಡು ಗಳನ್ನು ಪ್ರಸ್ತುತಪಡಿಸಿ, ಮೆಚ್ಚುಗೆ ಪಡೆದರು.

‘ರಸಿಕ ರಸಿಕಾ.. ತುಸು ಮೆಲ್ಲನೆ ತೂರಾಡು…’, `ಕರೆಂಟು ಹೋದ ಟೈಮಲಿ…’ ಹಾಡುಗಳೊಂದಿಗೆ ನೆರೆದಿದ್ದವರ ಕುಣಿ ಸಿದ ಗಾಯಕಿ ಸಿಂಚನ ದೀಕ್ಷಿತ್, ಉತ್ತರ ಕರ್ನಾಟಕ ಶೈಲಿಯಲ್ಲಿರುವ `ಇನ್ನು ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾವಾ…’, `ಯಾಕ ಹುಡುಗಾ ಮೈಯಾಗ ಹೆಂಗೈತಿ ನಾಲ್ಕು ಜನುಮ ಧಿಮಾಕು ನಿಂಗೈತಿ…’ ಗೀತೆಗಳನ್ನು ಹಾಡಿ ರಂಜಿಸಿದರು. ಬಳಿಕ ಹಾಡಿದ `ಕೋಡಗಾನ ಕೋಳಿ ನುಂಗಿತ್ತಾ ನೋಡವ್ವ ತಂಗಿ…’ ಗೀತೆಗಂತೂ ಯುವ ಸಮೂಹ ಕೇಕೆ, ಚಪ್ಪಾಳೆಯೊಂದಿಗೆ ಕುಣಿದು ಕುಪ್ಪಳಿಸಿತು.
ಗಾಯಕ ಚಿನ್ಮಯ್, ಕರಾಟೆ ಕಿಂಗ್ ಶಂಕರ್ ನಾಗ್ ಅಭಿನಯಿಸಿರುವ `ಸಂತೋಷಕ್ಕೆ ಹಾಡು ಸಂತೋಷಕ್ಕೆ, ಕುಣಿದು ತಾಳಕ್ಕೆ ಕುಣಿದು…’ ಹಾಗೂ ಸಂಗೀತ ಮಾಂತ್ರಿಕ ಹಂಸಲೇಖ ಮೈಸೂರನ್ನು ವರ್ಣಿಸಿ, ಸಂಯೋಜಿಸಿರುವ `ಕೂರಕ್ ಕುಕ್ಕರಳ್ಳಿ ಕೆರೆ, ತೇಲೋಕ್ ಕಾರಂಜಿ ಕೆರೆ…’ ಗೀತೆಗಳನ್ನು ಹಾಡಿದಾಗ ಪ್ರೇಕ್ಷಕರ ಉತ್ಸಾಹದೊಂದಿಗೆ ಅವರ ಹೆಜ್ಜೆಯ ವೇಗವೂ ಹೆಚ್ಚಿತ್ತು. ಸರಿಗಮಪ ಖ್ಯಾತಿಯ ಉದಯೋ ನ್ಮುಖ ಗಾಯಕ ಸಚ್ಚಿತ್ ಹೆಗ್ಡೆ, `ಹೋ ನಂದಿನಿ ಹೋ ನಂದಿನಿ… ನೀ ನನ್ನ ಪ್ರಾಣ ಕಣೆ…’ `ತರಾ ತರಾ ಹಿಡಿಸಿದೆ ಮನಸಿಗೆ ನೀನು, ಹಗಲಲೇ ಮುಳುಗಿದೆ ಕನಸಲಿ ನಾನು…’, ಗೀತೆಗಳನ್ನು ತಮ್ಮ ರಾಕ್ ಶೈಲಿಯಲ್ಲೇ ಹಾಡಿ ರಂಜಿಸಿ ದರು. ಗಾಯಕ ಸಂತೋಷ್ ವೆಂಕಿ, `ಐರಾ ವತಾ…’, `ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್… ಡ್ಯಾನ್ಸ್ ಅಪ್ಪು ಡ್ಯಾನ್ಸ್…’ ಹಾಡುಗಳನ್ನು ಪ್ರಸ್ತುತ ಪಡಿಸಿ, ಚಪ್ಪಾಳೆ ಗಿಟ್ಟಿಸಿದರು.

ಕಾಮಿಡಿ ಝಲಕ್: ಕಾರ್ಯಕ್ರಮದ ನಡುವೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಹಾಗೂ ನಯನ ಜೋಡಿ ಕಾಮಿಡಿ ಕಮಾಲ್ ಮಾಡಿತ್ತು. `ಸ್ಟೈಲಿಗೆ ಬೆಂಗಳೂರು ಹುಡುಗ್ರು, ಸ್ಮೈಲ್‍ಗೆ ಮಂಗಳೂರು ಹುಡುಗ್ರು, ಲವ್ವಿಗೆ ಮೈಸೂರು ಹುಡುಗ್ರು…’ ಎಂದು ಡೈಲಾಗ್ ಹೊಡೆದು ಯುವಕರ ಶಿಳ್ಳೆ ಗಿಟ್ಟಿಸಿದ ಶಿವರಾಜ್‍ಗೆ, ಉತ್ತರ ಕರ್ನಾಟಕ, ಮೈಸೂರು ಸೇರಿದಂತೆ ವಿವಿಧ ಪ್ರಾದೇಶಿಕ ಬೈಗುಳದ ಬಹುಮಾನ ನೀಡಿದ ನಯನಾ ಅವರಿಗೆ ಯುವತಿಯರು ಕೇಕೆ ಹಾಕಿ, ಪ್ರೋತ್ಸಾಹಿಸಿದರು. ಪಾಪ ಪಾಂಡು ಶಾಲಿನಿ ತಮ್ಮ ಹಾಸ್ಯ ಶೈಲಿ ಯಲ್ಲೇ ಉತ್ತಮವಾಗಿ ಸ್ಯಾಂಡಲ್‍ವುಡ್ ನೈಟ್ಸ್ ಕಾರ್ಯಕ್ರಮ ನಿರೂಪಿಸಿದರು.

ಎ ಕ್ಯಾಪೆಲ್ಲಾ ಮೋಡಿ: ವಾದ್ಯಗಳ ಸಹ ಕಾರವಿಲ್ಲದೆ ಬಾಯಲ್ಲೇ ವಿವಿಧ ವಾದ್ಯಗಳ ನಿನಾದ ಮೊಳಗಿಸುವ ` ಕ್ಯಾಪೆಲ್ಲಾ ಕಾರ್ಯ ಕ್ರಮ ವಿಶೇಷವಾಗಿತ್ತು. ಶಿವರಾಜ್ ನಟರಾಜ್ ತನ್ನ ಧ್ವನಿ ಪೆಟ್ಟಿಗೆಯಲ್ಲಿ ಚಪ್ಪಾಳೆ ಸದ್ದು, ವಿವಿಧ ವಾದ್ಯಗಳ ಶಬ್ದಗಳನ್ನು ಹೊರ ಹೊಮ್ಮಿಸಿದರು. ಜೊತೆಗೆ ಸಹ ಕಲಾವಿದರು `ಜೊತೆಯಲಿ ಜೊತೆ ಜೊತೆಯಲಿ…’, `ಜೀವ ವೀಣೆ ಮೀಟಿ…’, `ಜೀವ ಹೂವಾಗಿದೆ ಭಾವ ಜೇನಾಗಿದೆ…’ ಗೀತೆಗಳನ್ನು ವಿಶಿಷ್ಟವಾಗಿ ಪ್ರಸ್ತುತಪಡಿಸಿದರು. ಮೈಸೂರಿನ ಟಿ.ಕೆ. ಲೇಔಟ್ ಜ್ಞಾನದೀಪ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ ಸಾರುವ ನೃತ್ಯ ಪ್ರದರ್ಶಿಸಿದರು. ನೃತ್ಯ ವಿಹಾರ್ ಫ್ಯಾಷನ್ ತಂಡದ ರೂಪದರ್ಶಿ ಯರು ರ್ಯಾಂಪ್‍ವಾಕ್ ಮಾಡಿ ರಂಜಿಸಿದರು. ಆದರೆ `ನಂದಿನಿ ನಂದಿನಿ…’ ದೇವರ ಸ್ತೋತ್ರಕ್ಕೆ ಪಾಶ್ಚಾತ್ಯ ಸಂಗೀತ ಬೆರೆಸಿ, ಹಿನ್ನೆಲೆಯಾಗಿ ಬಳಸಿಕೊಂಡಿದ್ದಕ್ಕೆ ಕೆಲವರು ಕುಳಿತಲ್ಲೇ ಆಕ್ಷೇಪ ವ್ಯಕ್ತಪಡಿಸಿದರು.

Translate »