ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಂದ ಹುತಾತ್ಮ ಆರು ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರೂ. ನೆರವು
ಮೈಸೂರು

ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಂದ ಹುತಾತ್ಮ ಆರು ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರೂ. ನೆರವು

October 16, 2018

ಮೈಸೂರು:  ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರ ಕುಟುಂಬಕ್ಕೆ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ತಲಾ 10 ಲಕ್ಷ ರೂ. ನೆರವು ನೀಡಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರು ಹೆಚ್.ಡಿ.ಕೋಟೆ ತಾಲೂಕಿನ ಮಹೇಶ್, ಮೈಸೂರಿನ ರಮೇಶ್, ಹಾಸನದ ನಾಗೇಶ್, ಯೋಗಾನಂದ್, ಸಂದೀಪ್ ಕುಮಾರ್ ಹಾಗೂ ಸಾಗರ್ ಅವರ ಕುಟುಂಬ ಸದಸ್ಯರಿಗೆ ತಲಾ 10 ಲಕ್ಷ ರೂ.ಗಳ ಚೆಕ್ ವಿತರಿಸಿದರು.

ನಂತರ ಡಾ.ಸುಧಾಮೂರ್ತಿ ಅವರು ಮಾತನಾಡಿ, ಹೋದ ಪ್ರಾಣವನ್ನು ನಮ್ಮಿಂದ ತಂದುಕೊಡಲು ಆಗುವುದಿಲ್ಲ. ಆದರೆ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಾಂತ್ವನ ಮಾತ್ರ ಹೇಳಬಹುದು. ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಆರ್ಥಿಕ ನೆರವು ನೀಡಲಾಗಿದೆ. ಈ ಹಣವನ್ನು ಮದುವೆಗೆಂದು ಖರ್ಚು ಮಾಡಿಕೊಳ್ಳದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ಕಳೆದ ಮೂರು ವರ್ಷದಲ್ಲಿ ಹುತಾತ್ಮರಾಗಿರುವ 6 ಮಂದಿ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ. ಕೆಲವರು ನಮ್ಮ ಕುಟುಂಬ ಸದಸ್ಯರೂ 10-15 ವರ್ಷಗಳ ಹಿಂದೆ ದೇಶಕ್ಕಾಗಿ ಬಲಿದಾನ ಮಾಡಿದ್ದು, ನಮಗೂ ಕಷ್ಟವಿದೆ ಎಂದು ಹೇಳಿದರು. ಈ ಕುರಿತು ಸುಧಾಮೂರ್ತಿರವರ ಬಳಿ ಪ್ರಸ್ತಾಪಿಸಿದಾಗ, ಸೈನಿಕರ ಸೇವೆಗಿಂತ ಪುಣ್ಯದ ಕೆಲಸ ಯಾವುದಿದೆ. ಅದೆಷ್ಟು ಮಂದಿ ಇದ್ದರೂ ಪಟ್ಟಿ ಮಾಡುವಂತೆ ತಿಳಿಸಿದ್ದಾರೆ. ಹಾಗಾಗಿ ಯಾರೂ ನಿರಾಸೆಯಾಗುವುದು ಬೇಡ. ಕಾರ್ಗಿಲ್ ಯುದ್ಧದ ನಂತರದಲ್ಲಿ ಹುತಾತ್ಮರಾಗಿರುವ ರಾಜ್ಯದ ಎಲ್ಲಾ ಯೋಧರ ವಿವರಗಳನ್ನು ನೀಡಿದರೆ ಅವರ ಕುಟುಂಬಕ್ಕೂ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಸಚಿವ ಸಾ.ರಾ.ಮಹೇಶ್ ಮಾತನಾಡಿ, ಯಾರೊಬ್ಬರ ಕೋರಿಕೆಯೂ ಇಲ್ಲದೆ ಡಾ.ಸುಧಾಮೂರ್ತಿ ಅವರು ಕೊಡಗಿಗೆ 25 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದು, ನಮ್ಮಂಥ ಅನೇಕರಿಗೆ ಮಾರ್ಗದರ್ಶಕವಾಗಿದ್ದಾರೆ. ಅವರಿಗೆ ಸರ್ಕಾರದ ಪರವಾಗಿ ಧನ್ಯವಾದ ತಿಳಿಸಿದರು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮಾಜಿ ಮೇಯರ್ ಎಂ.ಜೆ.ರವಿ ಕುಮಾರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ ಉಪಸ್ಥಿತರಿದ್ದರು.

Translate »