ಉಪ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ: ಮುಖ್ಯಮಂತ್ರಿ ಕುಮಾರಸ್ವಾಮಿ ಅಬ್ಬರ
ಮೈಸೂರು

ಉಪ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ: ಮುಖ್ಯಮಂತ್ರಿ ಕುಮಾರಸ್ವಾಮಿ ಅಬ್ಬರ

October 16, 2018

ಬೆಂಗಳೂರು:  ಮೈತ್ರಿ ಸರ್ಕಾರ ಪತನದ ಕನಸು ಕಾಣುತ್ತಿರುವ ಬಿಜೆಪಿಗೆ ರಾಜ್ಯದಲ್ಲಿ ಈಗ ನಡೆಯುತ್ತಿರುವ ಉಪಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಮುಖ್ಯ ಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಇದು ಸೆಮಿಫೈನಲ್ ಆಗಿದ್ದು ಮುಂದಿನ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇದು ಕೈಗನ್ನಡಿ. ತಮ್ಮ ಸರ್ಕಾರವನ್ನು ಅಪವಿತ್ರ ಮೈತ್ರಿ ಅಂತ ಟೀಕಿಸುತ್ತಿ ರುವವರಿಗೆ ಫಲಿತಾಂಶ ಪ್ರಜಾಪ್ರಭುತ್ವದಲ್ಲಿ ಜನ ಕೊಡುವ ನಿರ್ಧಾರವಾಗಿರುತ್ತದೆ. ಜೆಡಿಎಸ್ ಪಕ್ಷದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದ ದಿನದಿಂದಲೂ ಸರ್ಕಾರ ಉರುಳಿಸಲು ಟಾರ್ಗೆಟ್ ಹಾಕಿಕೊಂಡು ಬರುತ್ತಿದ್ದಾರೆ, ಇದೀಗ ನವೆಂಬರ್ ತಿಂಗಳನ್ನು ನಿಗದಿ ಮಾಡಿಕೊಂಡಿದ್ದಾರೆ. ಅಷ್ಟರಲ್ಲಿ ಉಪಚುನಾವಣೆ ಫಲಿತಾಂಶ ಹೊರಬಿದ್ದು ಜನರ ತೀರ್ಪು ಏನೆಂದು ಸಾಬೀತಾಗುತ್ತದೆ. ಸರ್ಕಾರ ರಚನೆ ನಂತರ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಬಿಜೆಪಿ ನಾಯಕರು ಅತ್ಯಂತ ಕಠೋರ ಪದಗಳಿಂದ ಮೈತ್ರಿಯನ್ನು ಟೀಕಿಸಿದ್ದಾರೆ. ರಾಜ್ಯದಲ್ಲಿ ಯಾರೂ ಲೋಕಸಭಾ ಉಪಚುನಾವಣೆ ಬಯಸಿರಲಿಲ್ಲ, ಈಗ ಎದುರಾಗಿದೆ. ನಮ್ಮ ಆಡಳಿತದ ಬಗ್ಗೆ ಜನ ತೀರ್ಮಾನ ಕೊಡುತ್ತಾರೆ. ಕಾಂಗ್ರೆಸ್ ಹಾಗೂ ನಮ್ಮ ಪಕ್ಷದ ನಾಯಕರು ಒಟ್ಟಾಗಿ ಕುಳಿತು ಚರ್ಚಿಸಿದ ನಂತರವಷ್ಟೇ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುತ್ತಿ ದ್ದೇವೆ.

ರಾಮನಗರ, ಮಂಡ್ಯ ಹಾಗೂ ಶಿವಮೊಗ್ಗ ಕ್ಷೇತ್ರಗಳು ನಮಗೂ, ಬಳ್ಳಾರಿ ಹಾಗೂ ಜಮಖಂಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. ನಾವು ಒಟ್ಟಾಗಿ ಹೋರಾಟ ನಡೆಸಿ ನಮ್ಮ ಮೈತ್ರಿ ಶಕ್ತಿಯನ್ನು ರಾಷ್ಟ್ರಮಟ್ಟಕ್ಕೆ ತೋರಿಸುತ್ತೇವೆ ಎಂದರು. ಶಿವಮೊಗ್ಗ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವುದಕ್ಕೆ ನಾನು ಕಾಂಗ್ರೆಸ್‍ಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಿಧಾನಸಭಾ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಹಿನ್ನಡೆಯಾಗುತ್ತದೆ ಎಂದು ಕನಸು-ಮನಸಿನಲ್ಲೂ ಅಂದುಕೊಂಡಿರಲಿಲ್ಲ.

ಉಪಚುನಾವಣೆ ಎದುರಾಗಿರುವುದು ಅವರು ಗೆಲ್ಲಬೇಕೆಂದು ದೇವರ ಇಚ್ಛೆಯಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋತವರು ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಿದರ್ಶನಗಳು ನಮ್ಮ ಎದುರಿಗಿವೆ. ಶಿವಮೊಗ್ಗ ಲೋಕಸಭಾ ಉಪ ಚುನಾವಣೆಗೆ ಮಧು ಬಂಗಾರಪ್ಪ ಅಭ್ಯರ್ಥಿಯಾಗಿರುವುದು ದೇವರ ನಿರ್ಣಯ ಎಂದು ಕುಮಾರಸ್ವಾಮಿ ಬಣ್ಣಿಸಿದರು.

ಮಧು ಬಂಗಾರಪ್ಪ ನನ್ನ ಒಡಹುಟ್ಟಿದ ಸೋದರನಿದ್ದಂತೆ. ನಾನು ಆತನಿಗೆ ಅಣ್ಣ. ತಮ್ಮನ ಹಿನ್ನಡೆಗೆ ಈಗ ಪರಿಹಾರ ಸಿಗುತ್ತಿದೆ. ಎಲ್ಲರ ಸಹಕಾರ ಸಿಕ್ಕಿರುವುದು ದೇವರ ಇಚ್ಛೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದು ತಾಯಿಯ ಮಕ್ಕಳಂತೆ ಹೋರಾಡಲಿದ್ದೇವೆ ಎಂದರು.

ರಾಮನಗರದಲ್ಲಿ ಅನಿತಾ ಸ್ಪರ್ಧಿಸುತ್ತಿರುವುದು ನನ್ನ ನಿರ್ಧಾರವಲ್ಲ, ಅದು ಕಾರ್ಯಕರ್ತರ ಇಚ್ಛೆಯಾಗಿತ್ತು. ರಾಮನಗರದಲ್ಲಿ ನೀವು ರಾಜೀನಾಮೆ ನೀಡಿದರೆ ಕುಟುಂಬದವರೇ ನಿಲ್ಲಬೇಕು ಎಂದು ಅಲ್ಲಿನ ಕಾರ್ಯಕರ್ತರು ಹೇಳಿದ್ದರು.

Translate »