ಬೆಂಗಳೂರು: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪ್ರತಿ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಇನ್ಫೋಸಿಸ್ ಫೌಂಡೇಶನ್ ಘೋಷಿಸಿದೆ. ತಮ್ಮ ಸಂಸ್ಥೆಯ ವತಿಯಿಂದ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡು ವುದಾಗಿ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದ್ದಾರೆ.
“ನಮಗಾಗಿ, ದೇಶಕ್ಕಾಗಿ ಯೋಧರು ಪ್ರಾಣತ್ಯಾಗ ಮಾಡಿದ್ದಾರೆ. ಈ ಕುರಿತು ಪತ್ರಿಕೆಯಲ್ಲಿ ಓದಿದ ಕೂಡಲೇ ಹಣ ನೀಡಬೇಕೆಂದುಕೊಂಡೆ. ಆದರೆ ಹಣಕ್ಕಿಂತ ಯೋಧರ ಜೀವ ಮುಖ್ಯ. ಅದಕ್ಕಾಗಿ ನೋವಿದೆ. ಯೋಧರ ಕುಟುಂಬಕ್ಕೆ ನಮ್ಮ ಸಂಸ್ಥೆಯಿಂದ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದೇನೆ” ಎಂದು ಸುಧಾಮೂರ್ತಿ ಹೇಳಿದ್ದಾರೆ.
ಪುಲ್ವಾಮಾದಲ್ಲಿ ಗುರುವಾರ ನಡೆದಿದ್ದ ಉಗ್ರ ದಾಳಿಯಲ್ಲಿ 40 ಸಿಆರ್‍ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಆ ಬಳಿಕ ಭಾರತ ಪಾಕ್ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದೆ. ಪಾಕಿಸ್ತಾನಕ್ಕೆ ನೀಡಿದ್ದ ವಿಶೇಷ ಆಪ್ತ ರಾಷ್ಟ್ರ ಸ್ಥಾನಮಾನ ಹಿಂಪಡೆದಿದ್ದಲ್ಲದೆ ಪಾಕ್ ವಸ್ತುಗಳ ಮೇಲಿನ ಆಮದು ಸುಂಕ ಶೇ.200ಕ್ಕೆ ಏರಿಕೆ ಮಾಡಿದೆ. ರಾಷ್ಟ್ರಕ್ಕೆ ಬಲಿದಾನ ಮಾಡಿದವರ ಜತೆ ನಾನಿದ್ದೇನೆ. ಮಂಡ್ಯ ಯೋಧ ಗುರು ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದೇನೆ. ನನಗೆ ಪ್ರಚಾರ ಬೇಕಾಗಿಲ್ಲ. ಆದರೆ ನನ್ನ ಸಂಸ್ಥೆಯ ಕೆಲಸ ದಿಂದ ಪ್ರೇರಣೆಯಾಗಿ ಬೇರೆಯವರೂ ಸಹಾಯ ಮಾಡಿ ದರೆ ಅದೇ ಸಾರ್ಥಕ ಎಂದು ಅವರು ಹೇಳಿದ್ದಾರೆ.