ಶೀಘ್ರ ಬೆಂಗಳೂರು-ಮೈಸೂರು ನಡುವೆ ಹೆಲಿಟ್ಯಾಕ್ಸಿ ಸೇವೆ
ಮೈಸೂರು

ಶೀಘ್ರ ಬೆಂಗಳೂರು-ಮೈಸೂರು ನಡುವೆ ಹೆಲಿಟ್ಯಾಕ್ಸಿ ಸೇವೆ

June 24, 2018

ಮೈಸೂರು:  ಮುಂಬೈ ಮತ್ತು ತಿರುವನಂತಪುರಂ ಮೂಲದ ತುಂಬಿ ಎವಿಯೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ತನ್ನ ಜನಪ್ರಿಯ ಹೆಲಿಟ್ಯಾಕ್ಸಿ ಸೇವೆಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ದಿಂದ ಮೈಸೂರು, ಮಡಿಕೇರಿ ಮತ್ತು ಚಿಕ್ಕಮಗಳೂರಿಗೆ ವಿಸ್ತರಿಸಲು ಉದ್ದೇಶಿಸಿದೆ.

ಸಂಸ್ಥೆಯು ಈಗಾಗಲೇ ತನ್ನ ಹೆಲಿಟ್ಯಾಕ್ಸಿ ಸೇವೆಯನ್ನು ಮಾಹಿತಿ ತಂತ್ರಜ್ಞಾನ ಕಂಪನಿಗಳನ್ನು ಗಮನದಲ್ಲಿಟ್ಟುಕೊಂಡು ಕೆಐಎಎಲ್‍ನಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಆರಂಭಿಸಿದೆ. ಈ ಸೇವೆಯನ್ನು ವಿವಿಧ ಕಂಪನಿಗಳು ತನ್ನ ಸಿಇಓಗಳು ಮತ್ತು ವಿದೇಶಿ ಸಂದರ್ಶಕರು ಗಂಟೆಗಟ್ಟಲೆ ರಸ್ತೆಗಳಲ್ಲಿ ಸಂಚಾರ ದಟ್ಟಣೆಯಿಂದ ಸಮಯ ವ್ಯಯ ಮಾಡುವುದನ್ನು ತಪ್ಪಿಸುವ ಸಲುವಾಗಿ ಈ ಸೇವೆ ಪಡೆಯುತ್ತಿವೆ.

ಏಳು ಸೀಟುಗಳುಳ್ಳ (ಓರ್ವ ಪೈಲಟ್ ಹಾಗೂ ಆರು ಮಂದಿ ಪ್ರಯಾಣಿಕರು) ಹೆಲಿಟ್ಯಾಕ್ಸಿಯಲ್ಲಿ ಪ್ರತಿ ಪ್ರಯಾಣಿಕನಿಗೆ ಸುಮಾರು ರೂ. 3500 ಮತ್ತು ಹೆಚ್ಚುವರಿ ತೆರಿಗೆಗಳು ತಗಲುತ್ತವೆ. ತುಂಬಿ ಏವಿಯೇಷನ್‍ನ ಬ್ಯುಸಿನೆಸ್ ಡೆವಲಪ್‍ಮೆಂಟ್ ಡೈರೆಕ್ಟರ್ ಗೋವಿಂದ ನಾಯರ್ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಶೀಘ್ರದಲ್ಲೇ ಮೈಸೂರು, ಮಡಿಕೇರಿ ಮತ್ತು ಚಿಕ್ಕಮಗಳೂರು ನಗರಗಳಿಗೂ ತಮ್ಮ ಸೇವೆಯನ್ನು ವಿಸ್ತರಿಸಲಾಗುವುದು. ಇವುಗಳು ದೈನಂದಿನ ಸೇವೆಗಳಾಗಿರುವುದಿಲ್ಲ. ಬೇಡಿಕೆ ಮೇರೆಗೆ ಹೆಲಿಟ್ಯಾಕ್ಸಿ ಸೇವೆ ಒದಗಿಸಲಾಗುವುದು. ಕೆಐಎಎಲ್‍ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಸೇವೆ ಒದಗಿಸುವುದರಲ್ಲಿ ಸಂಸ್ಥೆ ಯಶಸ್ವಿಯಾಗಿದ್ದು, ಮುಂದಿನ ಹಂತದಲ್ಲಿ ಮೈಸೂರು, ಮಡಿಕೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೂ ಸೇವೆ ಸೂಕ್ತವಾದುದು ಎಂದು ಅವರು ಹೇಳಿದರು.

ಸೇವೆಗೆ ಚಾಲನೆ ನೀಡುವ ದಿನಾಂಕಕ್ಕೆ ಸಂಬಂಧಿಸಿದಂತೆ ನಾಯರ್ ಅವರನ್ನು ಕೇಳಿದಾಗ, ಹೆಲಿಟ್ಯಾಕ್ಸಿ ಸೇವೆ ಆರಂಭಕ್ಕೆ ಸಂಬಂಧಪಟ್ಟ ವಿಧಿವಿಧಾನಗಳ ಪರಿಶೀಲನೆಯನ್ನು ಸಂಸ್ಥೆಯ ತಂಡ ನಡೆಸುತ್ತಿದೆ. ಪ್ರಯಾಣಿಕರ ಪ್ರಮಾಣದ ಆಧಾರದ ಮೇಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಲಿಟ್ಯಾಕ್ಸಿ ಸೇವೆಯನ್ನು ಅದರಲ್ಲೂ ಸಣ್ಣ ನಗರವಾದ ಮೈಸೂರಿಗೆ ಒದಗಿಸಲು ಪರಿಗಣಿಸಲಾಗುವುದು. ಬಹುತೇಕ ಪ್ರಯಾಣಿಕರು ಕೆಎಸ್‍ಆರ್‍ಟಿಸಿ ಬಸ್ ಮತ್ತು ಬಾಡಿಗೆ ಟ್ಯಾಕ್ಸಿಗಳನ್ನು ಅವಲಂಬಿಸಿದ್ದಾರೆ. ವೇಗದ ಪ್ರಯಾಣಕ್ಕೆ ಈ ಸೇವೆಯನ್ನು ಒದಗಿಸಲಾಗುವುದು ಎಂದು ಹೇಳಿದರು.

ತುಂಬಿ ಏವಿಯೇಷನ್‍ನ ತ್ರಿವಂಡ್ರಮ್ ದರ್ಶನ್ ಮತ್ತು ಹೆಲಿ-ಟೂರ್ ಪ್ಯಾಕೇಜ್ ಇನ್ನಿತರ ಸೇವೆಗಳನ್ನು ಈ ತಿಂಗಳ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಹೆಚ್‍ಎಎಲ್ ವಿಮಾನ ನಿಲ್ದಾಣದಿಂದ ಆರಂಭಿಸಲಾಗುವುದು. ನಮ್ಮ ತಂಡ ಶೀಘ್ರವೇ ಮೈಸೂರು, ಮಡಿಕೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾರ್ಯಾಚರಣೆ ಅಂತಿಮಗೊಳಿಸಲಿದೆ ಎಂದು ಅವರು ಹೇಳಿದರು.

ಪ್ರಸ್ತುತ, ಜನರು ಕೆಐಎಎಲ್‍ನಿಂದ ಕೆಎಸ್‍ಆರ್‍ಟಿಸಿ ಮೂಲಕ ಕಾರ್ಯಾಚರಿಸುತ್ತಿರುವ ಫ್ಲೈಬಸ್ ಅಥವಾ ಬಾಡಿಗೆ ಟ್ಯಾಕ್ಸಿ ಮೂಲಕ ಮೈಸೂರಿಗೆ ಪ್ರಯಾಣಿಸುತ್ತಿದ್ದಾರೆ. ಬಸ್ ಪ್ರಯಾಣ ಸುಖಕರವಾಗಿದ್ದರೂ, ಮೈಸೂರಿಗೆ ಫ್ಲೈಬಸ್ ತಲುಪಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೆಲಿಟ್ಯಾಕ್ಸಿ ಸೇವೆ ಆರಂಭಿಸಿದರೆ, ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಟ್ಯಾಕ್ಸಿಗಳಿಗೆ ತೀವ್ರ ಪೈಪೋಟಿ ಏರ್ಪಡುತ್ತದೆ. ಪ್ರಯಾಣಿಕರು ಯಾವ ಮಾರ್ಗದಲ್ಲಿ ಅತೀ ವೇಗವಾಗಿ ತಲುಪಬಹುದು ಎಂಬುದನ್ನು ಆಯ್ಕೆ ಮಾಡುತ್ತಾರೆ ಎಂದರು.

Translate »