ಎನ್.ಆರ್.ಕ್ಷೇತ್ರದಲ್ಲಿ 100 ಹಾಸಿಗೆ ಆಸ್ಪತ್ರೆ, ಸಂಪರ್ಕ ರಸ್ತೆ ನಿರ್ಮಾಣಕ್ಕೆ ಕ್ರಮ
ಮೈಸೂರು

ಎನ್.ಆರ್.ಕ್ಷೇತ್ರದಲ್ಲಿ 100 ಹಾಸಿಗೆ ಆಸ್ಪತ್ರೆ, ಸಂಪರ್ಕ ರಸ್ತೆ ನಿರ್ಮಾಣಕ್ಕೆ ಕ್ರಮ

June 24, 2018
  • ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಶಾಸಕ ತನ್ವೀರ್ ಸೇಠ್ ಪ್ರಕಟ
  • ನರ್ಮ್ ಮನೆ ನಿರ್ಮಾಣದ ಅವ್ಯವಹಾರ ಸಂಬಂಧ ತನಿಖೆಗೆ ಆಗ್ರಹ
  • ಕಸ ನಿರ್ವಹಣೆಯಲ್ಲಿ ಕಾಣದ ಕೈಗಳ ಕೈವಾಡ ಶಂಕೆ

ಮೈಸೂರು: ಮೈಸೂರಿನ ಎನ್.ಆರ್.ಕ್ಷೇತ್ರದ ಜನರ ಅನುಕೂಲಕ್ಕಾಗಿ 100 ಹಾಸಿಗೆಯ ಆಸ್ಪತ್ರೆ, ವಿವಿಧ ಬಡಾವಣೆಗಳಿಗೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.

ಮೈಸೂರಿನ ನಜರ್‍ಬಾದ್‍ನಲ್ಲಿರುವ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದಲ್ಲಿ ಶನಿವಾರ ಎನ್.ಆರ್.ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಎನ್.ಆರ್.ಕ್ಷೇತ್ರ ಸಮಗ್ರ ಅಭಿವೃದ್ಧಿಗಾಗಿ 2015ರ ಏಪ್ರಿಲ್ 7ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, 148 ಕೋಟಿ ರೂ. ಗಳ ವಿವಿಧ ಅಭಿವೃದ್ಧಿಗೆ ಕಾಮಗಾರಿಗೆ ಚಾಲನೆ ನೀಡಿದ್ದರು. 2016ರಲ್ಲಿ ಸಚಿವ ಸ್ಥಾನ ಲಭಿಸಿದ ನಂತರ ಇನ್ನಷ್ಟು ಅನುದಾನ ತಂದು ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿತ್ತು. ಕ್ಷೇತ್ರದಲ್ಲಿದ್ದ ಕುಡಿಯುವ ನೀರು, ಒಳಚರಂಡಿ, ಮಳೆ ನೀರು ಚರಂಡಿ, ರಸ್ತೆ, ಬೀದಿದೀಪ ನಿರ್ವಹಣೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ಅನುಸಾರ ಕ್ರಮ ಕೈಗೊಳ್ಳಲಾಗಿತ್ತು.

ಕ್ಷೇತ್ರದಲ್ಲಿ ಏಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಅವುಗಳಿಗೆ ಸೌಲಭ್ಯಗಳನ್ನು ಕಲ್ಪಿಸಿ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಕ್ಯಾತಮಾರನಹಳ್ಳಿ ಹಾಗೂ ಗಾಂಧಿನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿವಿಧ ಸವಲತ್ತು ನೀಡಿದ್ದರಿಂದ ಇದೀಗ ಈ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ಮೂರು ವರ್ಷದಿಂದ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಕ್ಷೇತ್ರದಲ್ಲಿರುವ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ತಲಾ 25 ಲಕ್ಷ ರೂ ಅನುದಾನ ನೀಡಲಾಗಿತ್ತು. ಆದರೆ ಆ ಹಣ ಸದ್ಬಳಕೆಯಾಗದೆ ಇರುವುದು ನನ್ನ ಗಮನಕ್ಕೆ ಬಂದಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಅನುದಾನ ಬಳಕೆಯಾಗದೆ ಇರುವುದಕ್ಕೆ ವರದಿ ಕೇಳಿದ್ದೇನೆ ಎಂದು ತಿಳಿಸಿದರು.

100 ಹಾಸಿಗೆಯ ಆಸ್ಪತ್ರೆ: ಎನ್.ಆರ್.ಕ್ಷೇತ್ರದಲ್ಲಿ 100 ಹಾಸಿಗೆ ಸಾಮಾಥ್ರ್ಯದ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ. ಆಸ್ಪತ್ರೆ ನಿರ್ಮಾಣಕ್ಕೆ 3ರಿಂದ 5 ಎಕರೆ ಜಾಗವನ್ನು ಕಾಯ್ದಿರಿಸಲಾಗಿದೆ. ಅಲ್ಲದೆ, 10 ಸ್ಕ್ಯಾನಿಂಗ್ ಯಂತ್ರವನ್ನು ಆರೋಗ್ಯ ಕೇಂದ್ರಗಳಿಗೆ ನೀಡಲು ಉದ್ದೇಶಿಸಲಾಗಿದೆ ಎಂದರು.

ಡಿಪಿಆರ್ ಸಿದ್ದ ಮಾಡಿ: ಮಳೆ ಬಂದರೆ ಕೆಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ಸಮಸ್ಯೆ ಉದ್ಭವಿಸುತ್ತಿದೆ. ಕೆಲವೆಡೆ ಪದೇ ಪದೆ ಮಳೆ ನೀರಿನ ಸಮಸ್ಯೆ ಉಂಟಾಗುತ್ತಿದೆ. ಇಂತಹ ಸ್ಥಳವನ್ನು ಗುರುತಿಸಿ ಸಮಸ್ಯೆಗಳು ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳಬೇಕು. ಒಳಚರಂಡಿ ಹಾಗೂ ಕುಡಿಯುವ ನೀರಿನ ಮಾರ್ಗದ ಬಗ್ಗೆ ಡಿಪಿಆರ್ ಸಿದ್ದಪಡಿಸುವಂತೆ ಸೂಚನೆ ನೀಡಿದರು.
ಕಾಣದ ಕೈಗಳ ಕೈವಾಡ: ಎನ್.ಆರ್.ಕ್ಷೇತ್ರ ಸೇರಿದಂತೆ ಮೈಸೂರಿನ ಹಲವೆಡೆ ಕಸ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಸ್ವಚ್ಛ ನಗರಿ ಎಂದರೆ ಕೇವಲ ಮುಖ್ಯ ರಸ್ತೆಯನ್ನು ಮಾತ್ರ ಶುಚಿಯಾಗಿಟ್ಟರೆ ಸಾಲದು. ವಸತಿ ಬಡಾವಣೆಗಳೂ ಸ್ವಚ್ಛವಾಗಿರಬೇಕು. ಆದರೆ ಕಳೆದ 18 ವರ್ಷದಿಂದಲೂ ಕಸ ಸಂಗ್ರಹ ಹಾಗೂ ನಿರ್ವಹಣೆಗೆ ಒಬ್ಬನೇ ವ್ಯಕ್ತಿಗೆ ಗುತ್ತಿಗೆ ನೀಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದರಿಂದಾಗಿ ಕಸ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಮನೆ ಮನೆಯಿಂದ ಸಂಗ್ರಹಿಸಿದ ಕಸವನ್ನು ಕೆಲವೆಡೆ ಸುರಿದು ಅಲ್ಲಿನ ನಿವಾಸಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಎರಡೆರಡು ದಿನವಾದರೂ ಕಸ ನಿರ್ವಹಣೆ ಮಾಡದೆ ಇರುವುದಕ್ಕೆ ಸಂಬಂಧಿಸಿದಂತೆ ದೂರುಗಳು ಬರುತ್ತಿವೆ. ಇದನ್ನು ಗಮನಿಸಿದರೆ ಕಸ ನಿರ್ವಹಣೆಯಲ್ಲಿ ಕಾಣದ ಕೈಗಳ ಕೈವಾಡವಿರುವುದು ಕಂಡುಬರುತ್ತದೆ ಎಂದು ತನ್ವೀರ್ ಆರೋಪಿಸಿದರು.

ಚರಂಡಿ ನೀರು ಶುದ್ಧಿಗೆ ಕ್ರಮ: ಮೈಸೂರಿನ ಒಳಚರಂಡಿ ನೀರನ್ನು ಶುದ್ಧಗೊಳಿಸುವ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ನದಿಮೂಲಕ್ಕೆ ಒಳಚರಂಡಿ ನೀರು ಸೇರುತ್ತಿದೆ. ಇದನ್ನು ಮನಗಂಡು ಒಳಚರಂಡಿ ನೀರನ್ನು ಶುದ್ಧಿಕರಿಸುವ ಘಟಕವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಮನೆ ನಿರ್ಮಾಣ: ಎನ್.ಆರ್.ಕ್ಷೇತ್ರದಲ್ಲಿ ವಸತಿ ಹೀನರಿಗೆ 3654 ಮನೆಗಳನ್ನು ನಿರ್ಮಿಸಲಾಗಿದೆ. ಇದಲ್ಲದೆ ಗೌಸಿಯಾನಗರ ಹಾಗೂ ಕೆ.ಎನ್.ಪುರದಲ್ಲಿ 720 ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಯರಗನಹಳ್ಳಿಯಲ್ಲಿ 825 ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. 2003-04ರಲ್ಲಿ ನರ್ಮ್ ಯೋಜನೆಯಡಿ ನಿರ್ಮಿಸಲಾದ 1160 ಮನೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಈ ಹಿಂದೆ ನಿವೇಶನ ಕೋರಿ ಎನ್.ಆರ್.ಕ್ಷೇತ್ರದ 2400 ಮಂದಿ 10,100 ರೂ ಪಾವತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಣ ಪಾವತಿಸಿರುವವರಿಗೆ ನಿವೇಶನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದೇನೆ. ಅಲ್ಲದೆ 5 ಸಾವಿರ ಮನೆಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದೇನೆ ಎಂದು ತಿಳಿಸಿದರು.

ಸಂಪರ್ಕ ರಸ್ತೆ ನಿರ್ಮಾಣ: ಬಡಾವಣೆಯಿಂದ ಬಡಾವಣೆಗೆ ಸಂಪರ್ಕ ಕಲ್ಪಿಸುವುದಕ್ಕಾಗಿ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ರಾಜೀವ್‍ನಗರದಿಂದ ನಾಯ್ಡುನಗರ, ನಾಯ್ಡುನಗರದಿಂದ ಬೆಂಗಳೂರು-ಮೈಸೂರು ರಸ್ತೆ, ಬೆಂಗಳೂರು-ಮೈಸೂರು ರಸ್ತೆಯಿಂದ ಕುಂಬಾರಕೊಪ್ಪಲಿನಲ್ಲಿರುವ ಜಯದೇವ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವುದಕ್ಕೆ ಉದ್ದೇಶಿಸಲಾಗಿದೆ. ಜಯದೇವ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವುದಕ್ಕೆ ರೈಲ್ವೆ ಹಳಿ ಅಡ್ಡ ಬರುವುದರಿಂದ ಪ್ಲೈಓವರ್ ನಿರ್ಮಾಣ ಮಾಡಬೇಕೆಂದು ನಿರ್ಧರಿಸಲಾಗಿದೆ. ಇದಕ್ಕಾಗಿ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ ಎಂದರು.

Translate »