ಹೇಳಿದ್ದನ್ನಷ್ಟೇ ಮಾಡುವ ಅಧಿಕಾರಿಗಳು ನಮಗೆ ಬೇಕಿಲ್ಲ!
ಮೈಸೂರು

ಹೇಳಿದ್ದನ್ನಷ್ಟೇ ಮಾಡುವ ಅಧಿಕಾರಿಗಳು ನಮಗೆ ಬೇಕಿಲ್ಲ!

June 24, 2018
  • ಶಾಸಕ ತನ್ವೀರ್ ಸೇಠ್ ಖಡಕ್ ನುಡಿ
  • ಸಮಸ್ಯೆ ಪತ್ತೆ ಮಾಡಿ ಪರಿಹರಿಸುವವರು ನಮಗೆ ಬೇಕಿದೆ

ಮೈಸೂರು: ಜನರ ಸಮಸ್ಯೆಗಳ ಪತ್ತೆ ಮಾಡಿ ಅದಕ್ಕೆ ಪರಿಹಾರ ಕಂಡು ಹಿಡಿಯುವ ಮನೋಭಾವದ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡುತ್ತೇನೆ. ಕೇವಲ ಹೇಳಿದ್ದನ್ನು ಮಾತ್ರ ಮಾಡುವ ಅಧಿಕಾರಿಗಳನ್ನು ಸಹಿಸುವುದಿಲ್ಲ. ಕಾಮಗಾರಿ ನಡೆಯದೆ ಇದ್ದರೂ ಬಿಲ್ ಪಾವತಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಶಾಸಕ ತನ್ವೀರ್ ಸೇಠ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ನಜರ್‍ಬಾದ್‍ನಲ್ಲಿರುವ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಶನಿವಾರ ಎನ್.ಆರ್.ಕ್ಷೇತ್ರದ ಅಭಿವೃದ್ಧಿ ಕುರಿತಂತೆ ನಗರ ಪಾಲಿಕೆ, ಮುಡಾ, ವಾಣಿವಿಲಾಸ ನೀರು ಸರಬರಾಜು ಮಂಡಳಿ, ಒಳಚರಂಡಿ ವಿಭಾಗ, ಚೆಸ್ಕಾಂ, ಕೊಳಗೇರಿ ಅಭಿವೃದ್ಧಿ ಮಂಡಳಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಿದ ಶಾಸಕ ತನ್ವೀರ್ ಸೇಠ್ ಅಧಿಕಾರಿಗಳಿಗೆ ಕೆಲಸದಲ್ಲಿ ಮೈಮರೆತರೆ, ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಹಿಂದೇಟು ಹಾಕಿದರೆ ಸಹಿಸುವುದಿಲ್ಲ ಎಂದು ಅವರು ಛಾಟಿ ಬೀಸಿದರು.

ಕೇವಲ ಹೇಳಿದ್ದನ್ನು ಮಾತ್ರ ಮಾಡುವ ಎಂಜಿನಿಯರ್‍ಗಳ ಅಗತ್ಯತೆ ನಮಗಿಲ್ಲ. ಎಲ್ಲಿ ಸಮಸ್ಯೆ ಇರುತ್ತದೋ ಅದನ್ನು ಗುರುತಿಸಿ, ಅವುಗಳಿಗೆ ಪರಿಹಾರ ಕಂಡುಹಿಡಿಯುವ ಮನಸ್ಥಿತಿಯುಳ್ಳ ಎಂಜಿನಿಯರ್‍ಗಳು ನಮಗೆ ಬೇಕಾಗಿದ್ದಾರೆ. ಹೇಳಿದಷ್ಟು ಕೆಲಸ ಮಾಡುವ ಮನೋಭಾವವಿದ್ದರೆ ಬೇರೆ ಸ್ಥಳಕ್ಕೆ ಹೋಗಬಹುದು ಎಂದು ಖಡಕ್ ಆಗಿ ನುಡಿದ ಅವರು, ಯಾವುದೇ ಕಾಮಗಾರಿ ನಡೆಯದೆ ಬಿಲ್ ಮಂಜೂರು ಮಾಡಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ವಿಷಯದಲ್ಲಿ ಜನರು ನಮ್ಮ ಮೇಲೆ ತಪ್ಪು ತಿಳಿಯುತ್ತಾರೆ. ಹಾಗಾಗಿ ತಪ್ಪು ಮಾಡಿದ ಅಧಿಕಾರಿಗಳನ್ನು ಸಹಿಸುವುದಿಲ್ಲ ಎಂದರು.

ವಿವಿಧ ಇಲಾಖೆಗಳ ನಡುವೆ ಹೊಂದಾಣಿಕೆಯೇ ಇಲ್ಲದಂತಾಗಿದೆ. ರಸ್ತೆ ಅಭಿವೃದ್ಧಿ ಮಾಡುವುದಕ್ಕೆ ಚೆಸ್ಕಾಂ ಅಧಿಕಾರಿಗಳು ಕಂಬ ತೆರವು ಮಾಡುವುದಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ರಸ್ತೆ ಅಭಿವೃದ್ಧಿಯಾದ ನಂತರ ವಿವಿಧ ಕಾರಣಕ್ಕೆ ಚೆನ್ನಾಗಿರುವ ರಸ್ತೆಯನ್ನು ಅಗೆಯಲಾಗುತ್ತದೆ. ಇಲಾಖೆಗಳ ನಡುವೆ ಹೊಂದಾಣಿಕೆ ಇದ್ದರೆ ಯಾವುದೇ ಸಮಸ್ಯೆ ಉದ್ಭಿಸುವುದಿಲ್ಲ. ಸಮಸ್ಯೆ ಬಂದರೂ ಸಂಘಟಿತವಾಗಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಹೊಂದಾಣ ಕೆಗೆ ಒಬ್ಬರು ನೋಡಲ್ ಅಧಿಕಾರಿ ನೇಮಕ ಮಾಡುತ್ತೇನೆ ಎಂದು ಹೇಳಿದರು.

ಮೈಸೂರು-ಬೆಂಗಳೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಭಿವೃದ್ಧಿಪಡಿಸುತ್ತಿದೆ. ರಿಂಗ್‍ರಸ್ತೆಯ ಜಂಕ್ಷನ್‍ನಿಂದ ಫೌಂಟೇನ್ ವೃತ್ತ, ಫೈವ್‍ಲೈಟ್ ವೃತ್ತದ ಮೂಲಕ ಗ್ರಾಮಾಂತರ ಬಸ್ ಬಸ್ ನಿಲ್ದಾಣದವರೆಗೆ ರಸ್ತೆ ಅಗಲೀಕರಣವಾಗುತ್ತಿದೆ. ಈ ಹಿಂದೆ ಟಿಪ್ಪು ಸರ್ಕಲ್‍ನಿಂದ ರಿಂಗ್‍ರಸ್ತೆಯ ಜಂಕ್ಷನ್‍ವರೆಗೂ ಏಕಮುಖ ಸಂಚಾರದ ವ್ಯವಸ್ಥೆಯಿತ್ತು. ರಸ್ತೆ ಅಗಲೀಕರಣವಾದ ಬಳಿಕ ದ್ವಿಮುಖ ಸಂಚಾರ ಇರುತ್ತದೆ. ಈ ಹಿನ್ನೆಲೆಯಲ್ಲಿ ಮಿಲೇನಿಯಂ ವೃತ್ತ, ಟಿಪ್ಪು ವೃತ್ತ, ಫೌಂಟೇನ್ ವೃತ್ತದಲ್ಲಿ ಸಿಗ್ನಲ್ ಅಳವಡಿಸುವುದರೊಂದಿಗೆ ವೃತ್ತ ನಿರ್ಮಾಣಕ್ಕೆ ನಕ್ಷೆ ಸಿದ್ಧಪಡಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಮುಡಾ ಆಯುಕ್ತ ಕಾಂತರಾಜು, ಕಾರ್ಯದರ್ಶಿ ಸವಿತಾ, ಸೂಪರಿಟೆಂಡೆಂಟ್ ಇಂಜಿನಿಯರ್ ಸುರೇಶ್‍ಬಾಬು, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿ ಕಪನಿಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »