ಸ್ವಾಮಿ ವಿವೇಕಾನಂದರ ಆದರ್ಶ ಯುವಕರಿಗೆ ದಾರಿದೀಪ
ಮೈಸೂರು

ಸ್ವಾಮಿ ವಿವೇಕಾನಂದರ ಆದರ್ಶ ಯುವಕರಿಗೆ ದಾರಿದೀಪ

June 24, 2018

ದಲಿತ ಚಿಂತಕ ಪ್ರೊ.ಬಿ.ಕೃಷ್ಣಪ್ಪ ಜನ್ಮ ದಿನದ ಕಾರ್ಯಕ್ರಮದಲ್ಲಿ ಮೈಸೂರು ರಾಮಕೃಷ್ಣಾಶ್ರಮದ ಸ್ವಾಮಿ ಮೋಕ್ಷಾನಂದ ಜೀ ಅಭಿಮತ

ಮೈಸೂರು:  ಯುವಕರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ತಮ್ಮ ಮುಂದಿನ ಜೀವನ ರೂಪಿಸಿಕೊಳ್ಳಬೇಕು ಎಂದು ಮೈಸೂರು ರಾಮಕೃಷ್ಣಾಶ್ರಮದ ಸ್ವಾಮಿ ಮೋಕ್ಷಾನಂದ ಮಹಾರಾಜ್ ಅಭಿಪ್ರಾಯಪಟ್ಟರು.
ಹೆಬ್ಬಾಳದ ಡಾ.ಬಿ.ಆರ್.ಅಂಬೇಡ್ಕರ್ ಜನ ಸಮುದಾಯದ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ದಲಿತ ಚಿಂತಕ ಪ್ರೊ.ಬಿ.ಕೃಷ್ಣಪ್ಪ ಅವರ 80 ನೇ ಜನುಮ ದಿನದ ಅಂಗವಾಗಿ ಸಾಮಾಜಿಕ ಸಮತಾ ದಿನಾಚರಣೆ, ಪೌರಕಾರ್ಮಿಕರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.

ಸ್ವಾಮಿ ವಿವೇಕಾನಂದರು ಎಲ್ಲರನ್ನು ಒಂದೇ ಎನ್ನುವ ಭಾವನೆಯಿಂದ ನೋಡುತ್ತಿದ್ದರು. ಇಂದಿಗೂ ರಾಮಕೃಷ್ಣಾಶ್ರಮದಲ್ಲಿ ಜಾತೀಯತೆ, ಅಸ್ಪøಶ್ಯತೆ ಸೇರಿದಂತೆ ಯಾವುದೇ ಸಾಮಾಜಿಕ ಅನಿಷ್ಟ ಪದ್ಧತಿಗಳಿಗೆ ಜಾಗವಿಲ್ಲ. ಬದಲಾಗಿ, ಆಧುನಿಕತೆ, ದೇಶದ ಪ್ರಗತಿಗೆ ಬೇಕಾದ ಎಲ್ಲಾ ತತ್ವಗಳನ್ನು ರಾಮಕೃಷ್ಣಾಶ್ರಮದಲ್ಲಿ ಅಳವಡಿಸಿಕೊಂಡು ಯುವ ಜನರಿಗೂ ಇದೇ ನಿಟ್ಟಿನಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಕರ್ನಾಟಕ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ನಿಂಗರಾಜ್ ಮಲ್ಲಾಡಿ ಮಾತನಾಡಿ, ರಾಜ್ಯದಲ್ಲಿ 4 ದಶಕಗಳ ಹಿಂದೆ ದಲಿತರು, ಶೋಷಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ತಡೆಗಟ್ಟಲು ಪ್ರೊ.ಬಿ.ಕೃಷ್ಣಪ್ಪ ಸೇರಿದಂತೆ ಇತರೆ ದಲಿತ ಚಿಂತಕರು ಸೇರಿ ದಲಿತ ಸಂಘರ್ಷ ಸಮಿತಿಯನ್ನು ಹುಟ್ಟು ಹಾಕಿ, ಇದರ ಮೂಲಕ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಬೃಹತ್ ಹೋರಾಟ ಹಮ್ಮಿಕೊಂಡಿದ್ದರು. ಅಂದು ಪ್ರೊ.ಬಿ.ಕೃಷ್ಣಪ್ಪ ಅವರು ತಂದೆಯ ಸ್ಥಾನದಲ್ಲಿ ನಿಂತು ದಲಿತರಿಗೆ ರಾಜ್ಯದ ಯಾವುದೇ ಭಾಗದಲ್ಲಿ ಅನ್ಯಾಯವಾದರೂ ನ್ಯಾಯ ಒದಗಿಸಿದರು.

ದಸಂಸ 1996 ರವರೆಗೂ ರಾಜ್ಯದಲ್ಲಿ ಏಕೈಕ ಸಂಘಟನೆಯಾಗಿ ಶೋಷಿತರ ದನಿಯಾಯಿತು. ನಂತರ ರಾಜಕೀಯ ಮೇಲಾಟದಿಂದಾಗಿ ದಲಿತ ಸಂಘಟನೆ ಛಿದ್ರಗೊಂಡು, ನೂರಾರು ದಲಿತರ ಹೆಸರಿನಲ್ಲಿ ಸಂಘಟನೆಗಳು ಹುಟ್ಟಿಕೊಂಡವು. ಇಂದಿಗೂ ಕೃಷ್ಣಪ್ಪ ಅವರ ಬದುಕು ಮತ್ತು ಹೋರಾಟ ಇಂದಿನ ದಲಿತ ಯುವಕರಿಗೆ ಮಾದರಿ ಮತ್ತು ಸ್ಫೂರ್ತಿದಾಯಕವಾಗಿದೆ. ಇಂತಹ ಮಹಾಚೇತನದ ಜನ್ಮ ದಿನಾಚರಣೆ ಆಚರಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಾದ ಜ್ಯೋತಿ, ಕೆ.ಭಾಗ್ಯ, ಕೆ.ಗೋಪಿನಂದ ಅವರನ್ನು ಶಾಲು ಹೊಂದಿಸಿ ಗೌರವಿಸಲಾಯಿತು. ನಂತರ ಪೌರಕಾರ್ಮಿಕರ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ವೇದಿಕೆಯಕ್ಕು ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ನಗರ ಸಂಚಾಲಕ ಕೆ.ನಂಜಪ್ಪ ಬಸವನಗುಡಿ, ಮುಖಂಡರಾದ ಆರ್.ಗುರುಮೂರ್ತಿ, ಸಿ.ಎಂ.ರಾಮಯ್ಯ, ವಕೀಲ ಕೆ.ಗೋವಿಂದರಾಜು, ಕಾರ್ಯ ಬಸವಣ್ಣ, ಕೆ.ಸೋಮಶೇಖರ್, ಜಿ.ಎಂ.ಕೃಷ್ಣ, ದೊಡ್ಡ ಸಿದ್ದು, ಆರ್.ಆರ್.ರಮೇಶ್, ನಗರ ಪಾಲಿಕೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಂಚಯ್ಯ, ಜಿ.ಕುಪ್ಪ, ಆರ್ಮುಗಂ ಉಪಸ್ಥಿತರಿದ್ದರು.

Translate »