ಮೈಸೂರು ಪಾಲಿಕೆ ವಾರ್ಡ್ ಮೀಸಲಾತಿ  ಪುನರ್ ಪರಿಶೀಲನೆಗೆ ಮಾಜಿ ಮೇಯರ್ ಆಗ್ರಹ
ಮೈಸೂರು

ಮೈಸೂರು ಪಾಲಿಕೆ ವಾರ್ಡ್ ಮೀಸಲಾತಿ  ಪುನರ್ ಪರಿಶೀಲನೆಗೆ ಮಾಜಿ ಮೇಯರ್ ಆಗ್ರಹ

June 24, 2018

ಮೈಸೂರು: ಮೈಸೂರು ನಗರ ಪಾಲಿಕೆಯ ವಾರ್ಡ್‍ಗಳಿಗೆ ರಾಜ್ಯ ಸರ್ಕಾರ ಹೊರಡಿಸಿರುವ ಮೀಸಲಾತಿಯ ಅಧಿಸೂಚನೆ ಅವೈಜ್ಞಾನಿಕವಾಗಿದ್ದು, ಕೂಡಲೇ ಮೀಸಲಾತಿ ಪಟ್ಟಿಯನ್ನು ಪುನರ್ ಪರಿಶೀಲಿಸಿ ವಾಸ್ತವತೆಗೆ ಅನುಗುಣವಾದ ಅಧಿಸೂಚನೆ ಹೊರಡಿಸುವಂತೆ ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯ ಸರ್ಕಾರ ಮೈಸೂರು ನಗರ ಪಾಲಿಕೆಯ ಎಲ್ಲಾ ವಾರ್ಡ್‍ಗಳನ್ನು ಪುನರ್ ವಿಂಗಡಣೆ ಮಾಡಿದೆ. ಅಲ್ಲದೆ ಎಲ್ಲಾ ವಾರ್ಡ್‍ಗಳಿಗೂ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ. ಇದು ಅವೈಜ್ಞಾನಿಕ ಮೀಸಲಾತಿಯಾಗಿದ್ದು, ಹಲವು ವಾರ್ಡ್‍ಗಳಲ್ಲಿ ಸಾಮಾಜಿಕ ನ್ಯಾಯವನ್ನು ಮೀಸಲಾತಿಯಲ್ಲಿ ಗಾಳಿಗೆ ತೂರಲಾಗಿದೆ. ಈ ನಡುವೆ ಪಾಲಿಕೆ ಹಾಗೂ ಮುಡಾ ವ್ಯಾಪ್ತಿಗೆ ಸೇರಿದ ಹಲವಾರು ಬಡಾವಣೆಗಳನ್ನು ಕೈಬಿಟ್ಟು, ಅಧಿಸೂಚನೆಯಲ್ಲಿ ವಾರ್ಡ್ ವಿಸ್ತೀರ್ಣಕ್ಕೆ ಗಡಿ ನಿಗದಿಪಡಿಸಿರುವುದು ಖಂಡನೀಯ. ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ನಿವಾಸಿಗಳು ವಾಸಿಸುವ ಪ್ರದೇಶಕ್ಕೆ ಸ್ಥಳೀಯ ಜನಪ್ರತಿನಿಧಿ ಇರುವುದು ಕಡ್ಡಾಯ. ಆದರೆ, ಅನೇಕ ಬಡಾವಣೆಗಳಿಗೆ ಸ್ಥಳೀಯ ಜನಪ್ರತಿನಿಧಿಗಳಿಲ್ಲದಂತೆ ಅಧಿಸೂಚನೆ ರೂಪಿಸಲಾಗಿದೆ ಎಂದು ಅವರು ಆರೋಪಿಸಿದರು.

ಕೈಬಿಟ್ಟ ಬಡಾವಣೆಗಳ ಜನರು ಮತದಾನ ಹಾಗೂ ಮೂಲಸೌಕರ್ಯಗಳಿಂದ ವಂಚಿತರಾಗುತ್ತಾರೆ. ಈಗಾಗಲೇ ಅತಂತ್ರ ಸ್ಥಿತಿಯಲ್ಲಿರುವ ಖಾಸಗಿ ಬಡಾವಣೆಗಳನ್ನು ವಾರ್ಡ್ ವ್ಯಾಪ್ತಿಗೆ ಸೇರಿಸದೆ ಇದ್ದರೆ, ಅಲ್ಲಿರುವ ಸಮಸ್ಯೆಗಳ ನಿರ್ವಹಣೆ ಹೇಗೆ ಸಾಧ್ಯ? ಅಂತಹ ಬಡಾವಣೆಗಳನ್ನು ಯಾವ ಪ್ರತಿನಿಧಿಗಳು ಪ್ರತಿನಿಧಿಸುತ್ತಾರೆ ಎಂದು ಪ್ರಶ್ನಿಸಿದರಲ್ಲದೆ, 64 ಮತ್ತು 65ನೇ ವಾರ್ಡ್ ವ್ಯಾಪ್ತಿಗೆ ಬರುವ ಟೆಂಪಲ್ ಬೆಲ್ಸ್, ಪ್ರೀತಿ ಬಡಾವಣೆ, ಕಬಿನಿ ಬಡಾವಣೆ, ಸಾಯಿ ಬಡಾವಣೆ, ಹಂಸ ಬಡಾವಣೆ, ಡಿಜಿಎಂ ಲೇಔಟ್ ಹಾಗೂ ಇನ್ನೂ ಅನೇಕ ಬಡಾವಣೆಗಳು ಯಾವುದೇ ವಾರ್ಡಿನ ವ್ಯಾಪ್ತಿಗೆ ಒಳಪಡಿಸದೆ ಇರುವುದನ್ನು ಗಮನಿಸಿದರೆ ಸ್ಪಷ್ಟವಾಗಿ ಅಧಿಸೂಚನೆಯಲ್ಲಿ ಲೋಪವಾಗಿದೆ ಎಂದು ತಿಳಿದು ಬರುತ್ತದೆ. ಅಲ್ಲದೇ ಮೀಸಲಾತಿಯಲ್ಲಿ ಮಾಡಿರುವ ಅನೇಕ ಗೊಂದಲಗಳನ್ನು ಸರಿಪಡಿಸಬೇಕು ಹಾಗೂ ಬಿಟ್ಟು ಹೋಗಿರುವ ಹಲವಾರು ಬಡಾವಣೆಗಳನ್ನು ಸೇರಿಸಬೇಕು ಎಂದು ಚುನಾವಣಾಧಿಕಾರಿ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಭಾರತ ಆಹಾರ ನಿಗಮ ಸದಸ್ಯ ಜೆ.ಜಯಂತ್ ಇದ್ದರು.

Translate »