ಮೆಟ್ರೊಪೋಲ್‍ನಿಂದ ಹಿನಕಲ್‍ವರೆಗೂ ರಸ್ತೆ ಡಾಂಬರೀಕರಣವಾಗಿದೆ ರಾಷ್ಟ್ರೀಯ ಹೆದ್ದಾರಿ ಎಇಇ ಹೆಚ್.ಪಿ. ಚಂದ್ರಪ್ಪ ಸ್ಪಷ್ಟನೆ
ಮೈಸೂರು

ಮೆಟ್ರೊಪೋಲ್‍ನಿಂದ ಹಿನಕಲ್‍ವರೆಗೂ ರಸ್ತೆ ಡಾಂಬರೀಕರಣವಾಗಿದೆ ರಾಷ್ಟ್ರೀಯ ಹೆದ್ದಾರಿ ಎಇಇ ಹೆಚ್.ಪಿ. ಚಂದ್ರಪ್ಪ ಸ್ಪಷ್ಟನೆ

June 24, 2018

ಮೈಸೂರು:  ಜಲ ದರ್ಶಿನಿ ಬಳಿ ಹುಣಸೂರು ರಸ್ತೆ ತಿರುವು ನೇರಗೊಳಿಸಲು ಮಂಜೂರಾದ ಕೇಂದ್ರ ರಸ್ತೆ ಅನುದಾನದಲ್ಲೇ ಮೆಟ್ರೊಪೋಲ್ ಸರ್ಕಲ್‍ನಿಂದ ಹಿನಕಲ್‍ವರೆಗೆ 5.45 ಕಿ.ಮೀ. ಡಾಂಬರೀಕರಣಗೊಳಿಸಿ ಅಭಿವೃದ್ಧಿಗೊಳಿ ಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿಗಳ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಚ್.ಪಿ.ಚಂದ್ರಪ್ಪ ತಿಳಿಸಿದ್ದಾರೆ.

ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಜಲದರ್ಶಿನಿ ಅತಿಥಿ ಗೃಹದಿಂದ ಪಡುವಾರಹಳ್ಳಿಯ ಮೂಳೆ ಆಸ್ಪತ್ರೆ ಕ್ರಾಸ್‍ವರೆಗೆ ಹುಣಸೂರು ರಸ್ತೆಯ ಅಪ ಘಾತ ತಿರುವನ್ನು ನೇರಗೊಳಿಸಲೆಂದು ಸೆಂಟ್ರಲ್ ರೋಡ್ ಫಂಡ್ ಅಡಿ 2016ರ ನವೆಂಬರ್ 2ರಂದು 12 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿತ್ತು ಎಂದರು.

4 ಮೀಟರ್‍ವರೆಗೆ ವಿಸ್ತರಿಸಿ 6 ಪಥದ ರಸ್ತೆಯಾಗಿಸಲು ಹಾಗೂ ಜಲದರ್ಶಿನಿ ಅತಿಥಿ ಗೃಹದ ಕಡೆ ಹಾದು ಹೋಗಿರುವ ನೀರು, ವಿದ್ಯುತ್ ಹಾಗೂ ದೂರವಾಣಿ ಸಂಪರ್ಕಗಳನ್ನು ಸ್ಥಳಾಂತರಿಸುವುದೂ ಸೇರಿದಂತೆ 12 ಕೋಟಿ ರೂ.ಗಳ ಈ ಕಾಮ ಗಾರಿಯನ್ನು ಅನುಷ್ಠಾನಗೊಳಿಸಲು ರವಿ ಕುಮಾರ್ ಎಂಬ ಗುತ್ತಿಗೆದಾರರಿಗೆ 2017ರ ನವೆಂಬರ್ 21ರಲ್ಲಿ ಕಾಮಗಾರಿ ವಹಿಸ ಲಾಗಿತ್ತು. ಅದಕ್ಕಾಗಿ ಇಕ್ಕೆಲಗಳಲ್ಲಿರುವ 79 ಮರಗಳನ್ನು ಕಡಿಯಬೇಕಾಗಿತ್ತು. ಮರಗಳಿಗೆ ಗುರುತು ಹಾಕಿದ ತಕ್ಷಣ ಮೈಸೂರು ಗ್ರಾಹ ಕರ ಪರಿಷತ್ (ಎಂಜಿಪಿ), ಗ್ರೀನ್ ಗ್ರೂಪ್ ಸದಸ್ಯರು ಹಾಗೂ ಕೆಲ ಪರಿಸರವಾದಿಗಳು ಮರ ಕಡಿಯಲು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಆ ನಡುವೆಯೂ 2018ರ ಜನವರಿ ಮಾಹೆಯಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹ ದೇವಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕ ವಾಸು ಅವರು ಕಾಮಗಾರಿಗೆ ಗುದ್ದಲಿ ಪೂಜೆಯನ್ನೂ ನೆರವೇರಿಸಿದ್ದರು ಎಂದು ಚಂದ್ರಪ್ಪ ನುಡಿದರು.

ಆದರೆ ಎಂಜಿಪಿಯವರು ಮರ ಕಡಿ ಯುವುದರ ವಿರುದ್ಧ 2018ರ ಜನವರಿ 18 ರಂದು ಮೈಸೂರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಕಾಮಗಾರಿ ಆರಂಭಿಸಲು ಅಡ್ಡಿಯಾಗಿತ್ತು. ತದನಂತರ ಸ್ಥಳ ಪರಿಶೀ ಲನೆ ನಡೆಸಿದ್ದ ರಾಷ್ಟ್ರೀಯ ಹೆದ್ದಾರಿ ಮುಖ್ಯ ಇಂಜಿನಿಯರ್ ಲಕ್ಷ್ಮಣ್‍ರಾವ್ ಪೇಶ್ವೆ ಅವರು, ತಿರುವಿನಲ್ಲಿರುವ 6 ಮರಗಳನ್ನು ಮಾತ್ರ ಕಡಿದು ರಸ್ತೆ ಅಗಲೀಕರಣಗೊಳಿಸಿ, ಅದೇ ಅನುದಾನದಲ್ಲಿ ಮೆಟ್ರೊಪೋಲ್‍ನಿಂದ ಹಿನಕಲ್‍ವರೆಗೆ 5.45 ಕಿ.ಮೀ. ರಸ್ತೆಗೆ ಇಕ್ಕೆಲ ಗಳಲ್ಲಿ ಆಸ್ಪಾಲ್ಟಿಂಗ್ ಮಾಡಿ, ವಾಲ್ಮೀಕಿ ರಸ್ತೆ ಜಂಕ್ಷನ್‍ನಿಂದ ಮೆಟ್ರೊ ಪೋಲ್‍ವರೆಗೆ ಎರಡೂ ಕಡೆ ಫುಟ್‍ಪಾತ್ ನಿರ್ಮಿಸಿ ಇಂಟರ್ ಲಾಕಿಂಗ್ ಟೈಲ್ಸ್ ಅಳವಡಿಸಿ ಎಂದು ನಿರ್ದೇ ಶನ ನೀಡಿದ್ದರು ಎಂದು ಅವರು ಮಾಹಿತಿ ನೀಡಿದರು.

ಅವರ ಸೂಚನೆಯಂತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಈಗಾಗಲೇ 7.5 ಕೋಟಿ ರೂ. ಖರ್ಚಾಗಿದೆ. ಇದೀಗ ಸಂಸದರು ಜಲದರ್ಶಿನಿ ತಿರುವು ಬಳಿ ರಸ್ತೆ ನೇರಗೊಳಿಸಲು ಸೂಚನೆ ನೀಡಿರು ವುದರಿಂದ ಶುಕ್ರವಾರದಿಂದಲೇ ಕಾಂಪೌಂಡ್ ಒಡೆಯುವ ಕೆಲಸ ಆರಂಭಿ ಸಿದ್ದು, ಪಾದಚಾರಿ ರಸ್ತೆ ನಿರ್ಮಿಸಿ ಇಂಟರ್ ಲಾಕಿಂಗ್ ಟೈಲ್ಸ್ ಅಳವಡಿಸುವ ಕೆಲಸ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಇನ್ನೊಂದು ತಿಂಗಳೊಳಗಾಗಿ ಈ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದರು.

12 ಕೋಟಿ ರೂ. ಅನುದಾನದಲ್ಲೇ ಈ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದು, ಇನ್ನೂ ಸ್ವಲ್ಪ ಹಣ ಉಳಿಯುತ್ತದೆ. ಎಲ್ಲೂ ಅನುದಾನ ದುರುಪಯೋಗವಾಗಿಲ್ಲ, ದುಂದು ವೆಚ್ಚಕ್ಕೂ ಅವಕಾಶ ನೀಡುವು ದಿಲ್ಲ ಎಂದು ಚಂದ್ರಪ್ಪ ನುಡಿದರು.

Translate »