ಮೈಸೂರು ಜಿಪಂನಲ್ಲೂ ದೋಸ್ತಿ ಪ್ರಸ್ತಾಪ
ಮೈಸೂರು

ಮೈಸೂರು ಜಿಪಂನಲ್ಲೂ ದೋಸ್ತಿ ಪ್ರಸ್ತಾಪ

June 24, 2018

ಮೈಸೂರು: ರಾಜ್ಯ ಮೈತ್ರಿ ಸರ್ಕಾರದ ಮಾದರಿಯಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿ ಆಡಳಿತದಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಉಭಯ ಪಕ್ಷಗಳ ವರಿಷ್ಠರು ಮಾತುಕತೆ ನಡೆಸಲಿದ್ದಾರೆ ಎಂದು ಸಂಸದರೂ ಆದ ಕಾಂಗ್ರೆಸ್ ಮುಖಂಡ ಆರ್.ಧ್ರುವನಾರಾಯಣ್ ತಿಳಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮೈಸೂರು ಜಿಪಂ ಕಾಂಗ್ರೆಸ್ ಸದಸ್ಯರ ತುರ್ತು ಸಭೆಯಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ದೂರವಾಣಿ ಮೂಲಕ ಪ್ರವಾಸೋದ್ಯಮ ಸಚಿವರೂ ಆದ ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಅವರೊಂದಿಗೆ ಮಾತನಾಡಿದ್ದು, ಇಂದು ನಿಗದಿಯಾಗಿರುವ ಜಿಪಂ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಯ ಚುನಾವಣೆಯನ್ನು ಮುಂದೂಡಿ, ಜಿಪಂನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸಂಬಂಧ ಚರ್ಚೆ ನಡೆಸುವ ಬಗ್ಗೆ ತಿಳಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‍ನಲ್ಲಿ 23 ಜಿಪಂ ಸದಸ್ಯರು ಇದ್ದಾರೆ. ಜಿಪಂ ಸ್ಥಾಯಿ ಸಮಿತಿ ಸದಸ್ಯತ್ವವನ್ನು ಎರಡು ಪಕ್ಷಗಳಲ್ಲೇ ಉಳಿಸಿಕೊಳ್ಳುವ ಇಂಗಿತವನ್ನು ಸಾ.ರಾ.ಮಹೇಶ್ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ಹಾಗೂ ಜೆಡಿಎಸ್ ಮುಖಂಡರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಅವರ ಉಪಸ್ಥಿತಿಯಲ್ಲಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ರಾಜ್ಯ ಸರ್ಕಾರದ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಿರುವ ಸಂಬಂಧ ಪ್ರತಿಕ್ರಿಯೆ ನೀಡಿದ ಧ್ರುವನಾರಾಯಣ್, ಈ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು. ಶಾಸಕ ಅನಿಲ್‍ಚಿಕ್ಕಮಾದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಜಿಪಂ ಸದಸ್ಯರಾದ ಡಿ.ರವಿಶಂಕರ್, ಎಸ್.ಶ್ರೀಕೃಷ್ಣ, ಎಂ.ಸುಧೀರ್, ಎಸ್.ಅರುಣ್‍ಕುಮಾರ್, ಅಚ್ಚುತಾನಂದ, ಡಾ.ಪುಷ್ಪಾ ಅಮರನಾಥ್, ಎಂ.ಲತಾಸಿದ್ಧಶೆಟ್ಟಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »