ರಾಜ್ಯ ಮಟ್ಟದಲ್ಲಿ ದೋಸ್ತಿಗಳಾದರೂ ಸ್ಥಳೀಯ ಮಟ್ಟದಲ್ಲಿ ದುಷ್ಮನ್‍ಗಳಂತೆ ಕಾಂಗ್ರೆಸ್-ಜೆಡಿಎಸ್ ಕಚ್ಚಾಟ ಮೈಸೂರು ಜಿಪಂ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಗೆ ಅಡ್ಡಿ
ಮೈಸೂರು

ರಾಜ್ಯ ಮಟ್ಟದಲ್ಲಿ ದೋಸ್ತಿಗಳಾದರೂ ಸ್ಥಳೀಯ ಮಟ್ಟದಲ್ಲಿ ದುಷ್ಮನ್‍ಗಳಂತೆ ಕಾಂಗ್ರೆಸ್-ಜೆಡಿಎಸ್ ಕಚ್ಚಾಟ ಮೈಸೂರು ಜಿಪಂ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಗೆ ಅಡ್ಡಿ

June 24, 2018

ಮೈಸೂರು: ಮೈಸೂರು ಜಿಲ್ಲಾ ಪಂಚಾಯಿತಿಯ ಎರಡನೇ ಅವಧಿಯ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಸಂಬಂಧ ಶನಿವಾರ ನಿಗದಿಯಾಗಿದ್ದ ಚುನಾವಣೆ, ಕೋರಂ ಅಭಾವ ಸೇರಿದಂತೆ ಹಲವು ನಾಟಕೀಯ ಬೆಳೆವಣಿಗಳಿಗೆ ಸಾಕ್ಷಿಯಾಗಿ 10 ದಿನಗಳೊಳಗೆ ಚುನಾವಣೆ ನಡೆಸಲಾಗುವುದೆಂಬ ಅಧ್ಯಕ್ಷರ ಪ್ರಕಟಣೆಯೊಂದಿಗೆ ಅಂತ್ಯಗೊಂಡಿತು.

ಯೋಜನೆ, ಹಣಕಾಸು ಮತ್ತು ಲೆಕ್ಕಪರಿಶೋಧನೆ ಸ್ಥಾಯಿ ಸಮಿತಿ ಹಾಗೂ ಸಾಮಾನ್ಯ ಸ್ಥಾಯಿ ಸಮಿತಿಯ ತಲಾ 6 ಸದಸ್ಯರ ಆಯ್ಕೆಗೆ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ತಲಾ 7 ಸದಸ್ಯರ ಆಯ್ಕೆಗೆ ಇಂದು ಮೈಸೂರು ಜಿಪಂ ಸಭಾಂಗಣದಲ್ಲಿ ಚುನಾವಣಾ ಸಭೆ ನಿಗದಿಯಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಅಧ್ಯಕ್ಷರೂ ಸೇರಿದಂತೆ 24 ಸದಸ್ಯರು ಹಾಜರಿದ್ದು ಕೋರಂ ಕೊರತೆ ಇದೆ ಎಂದು ಜಿಪಂನ ಉಪಕಾರ್ಯದರ್ಶಿ ಕೆ.ಶಿವರಾಮೇಗೌಡ ಜಿಪಂ ಅಧ್ಯಕ್ಷರಿಗೆ ಮಾಹಿತಿ ನೀಡಿದರು.

ಬಳಿಕ ಜಿಪಂ ಅಧ್ಯಕ್ಷೆ ನಹೀಮಾ ಸುಲ್ತಾನಾ ನಜೀರ್ ಅಹಮ್ಮದ್, ಕೋರಂ ಇಲ್ಲದ ಕಾರಣ ಚುನಾವಣಾ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಪ್ರಕಟಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯ ಬೀರಿಹುಂಡಿ ಬಸವಣ್ಣ, ಕಳೆದ ಏಪ್ರಿಲ್ 29ರಂದು ಸಹ ಚುನಾವಣಾ ಸಭೆ ನಿಗದಿಯಾಗಿ ಮುಂದೂಡಲ್ಪಟ್ಟಿದೆ. ಈಗಾಗಲೇ ಸ್ಥಾಯಿ ಸಮಿತಿ ಸದಸ್ಯರ ಅವಧಿ ಪೂರ್ಣಗೊಂಡು ಮೂರು ತಿಂಗಳು ಕಳೆದಿದೆ. ಮುಂದಿನ ದಿನಾಂಕ ಪ್ರಕಟಿಸಿ ಮುಂದೂಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ನಹೀಮಾ ಸುಲ್ತಾನಾ, ವರಿಷ್ಠರೊಂದಿಗೆ ಮಾತನಾಡಿ ಮುಂದಿನ ದಿನಾಂಕ ಪ್ರಕಟಿಸಲಾಗುವುದು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯೆ ಮಂಗಳಾ ಸೋಮಶೇಖರ್, ಜಿಪಂ ಅಧ್ಯಕ್ಷರೇ ನಮ್ಮ ವರಿಷ್ಠರು ಎಂಬುದು ಸದಸ್ಯರ ಭಾವನೆಯಾಗಿದೆ. ಆದರೆ ನೀವು ವರಿಷ್ಠರನ್ನು ಕೇಳಬೇಕು ಎನ್ನುತ್ತಿದ್ದೀರಿ. ಹೀಗೆ ಸಮಯ ವ್ಯರ್ಥ ಮಾಡುವುದು ಸೂಕ್ತ ಕ್ರಮವಲ್ಲ ಎಂದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ವಿಧಾನಸಭೆ ಹಾಗೂ ಪರಿಷತ್ ಚುನಾವಣೆಗಳ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ತಡವಾಗಿದೆ. ಈ ತಿಂಗಳ ಅಂತ್ಯದೊಳಗೆ ಚುನಾವಣೆ ನಡೆಸಲಾಗುವುದು ಎಂದರು. ಇದೇ ವೇಳೆ ಮಾತನಾಡಿದ ಜಿಪಂ ವಿಪಕ್ಷ ನಾಯಕ ಡಿ.ರವಿಶಂಕರ್, ಸಭೆಯನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ಚರ್ಚೆಗಳು ಅನಗತ್ಯ ಎನ್ನುತ್ತಿದ್ದಂತೆ ಬೀರಿಹುಂಡಿ ಬಸವಣ್ಣ, ಹೀಗೆ ಏಕಾಏಕಿ ಸಭೆ ಮುಂದೂಡಲು ಅವಕಾಶವಿಲ್ಲ. ಮೊದಲು ಅರ್ಧ ಗಂಟೆವರೆಗೆ ಮುಂದೂಡಲು ಅವಕಾಶವಿದೆ ಎಂದು ಸಭೆಯ ಗಮನಕ್ಕೆ ತಂದರು.

ಮಾತಿನ ಚಕಮಕಿ: ಏಕಾಏಕಿ ಸಭೆ ಮುಂದೂಡಲು ಅವಕಾಶವಿಲ್ಲ ಎಂಬ ಹೇಳಿಕೆ ಬಳಿಕ ಸಭೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದು ಸಭೆ ಗೊಂದಲದ ಗೂಡಾಯಿತು. ಕೋರಂ ಕೊರತೆಗೆ ಸಂಬಂಧಿಸಿದಂತೆ ನಾವೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ಎಂದು ಜೆಡಿಎಸ್ ಸದಸ್ಯರ ವಿರುದ್ಧ ಕಾಂಗ್ರೆಸ್ ಸದಸ್ಯರು ಹಾರಿಹಾಯ್ದರು. ಇದೇ ಸನ್ನಿವೇಶಗಳೊಂದಿಗೆ ಇನ್ನೇನು ಸಭೆ ಅಂತ್ಯಗೊಂಡಿತು ಎಂದುಕೊಳ್ಳುವಷ್ಟರಲ್ಲಿ ಅರ್ಧ ಗಂಟೆವರೆಗೆ ಸಭೆ ಮುಂದೂಡಿದ್ದು, 12ಕ್ಕೆ ಸಭೆ ನಡೆಸಲು ಅಧ್ಯಕ್ಷರು ತಿಳಿಸಿದ್ದಾರೆ ಎಂದು ಉಪಕಾರ್ಯದರ್ಶಿ ಶಿವರಾಮೇಗೌಡ ಪ್ರಕಟಿಸಿದರು.

ಇದು ನಿಯಮವೇ?: 12ಕ್ಕೆ ಮತ್ತೆ ಸಭೆ ಮುಂದುವರೆಯುವುದಾಗಿ ಶಿವರಾಮೇಗೌಡ ತಿಳಿಸುವ ವೇಳೆಯಲ್ಲಿ ಅಧ್ಯಕ್ಷರು ಸಭಾಂಗಣದ ಹೊರಗಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ನೀವು ಸಭೆ ಮುಂದುವರೆಯುವ ಬಗ್ಗೆ ಪ್ರಕಟಿಸುವುದು ನಿಯಮಬದ್ಧವಲ್ಲ ಎಂದು ಬೀರಿಹುಂಡಿ ಬಸವಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಅಧ್ಯಕ್ಷರ ಉಪಸ್ಥಿತಿಯಲ್ಲಿ 12 ಗಂಟೆಗೆ ಸಭೆ ಮುಂದುವರೆಯುವುದನ್ನು ಶಿವರಾಮೇಗೌಡ ತಿಳಿಸಿದರು.

ಮತ್ತೆ ಸಭೆ ಆರಂಭಗೊಂಡಾಗ ಮಾತನಾಡಿದ ಉಪಕಾರ್ಯದರ್ಶಿ ಶಿವರಾಮೇಗೌಡ, ಜಿಪಂನ ಚುನಾಯಿತ ಒಟ್ಟು ಸದಸ್ಯರ ಪೈಕಿ ಅರ್ಧದಷ್ಟು ಸಂಖ್ಯೆ ಸದಸ್ಯರು ಹಾಜರಿದ್ದರೆ ಸಭೆ ನಡೆಸಬಹುದು. ಐದು ಸ್ಥಾಯಿ ಸಮಿತಿಗಳಿಗೆ ಒಟ್ಟು 33 ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಅಲ್ಲಿಗೆ ಒಬ್ಬರು ಎರಡು ಸ್ಥಾನಗಳಿಗೆ ಆಯ್ಕೆಯಾಗಲು ಅವಕಾಶವಿದೆ ಎಂದು ಮಾಹಿತಿ ನೀಡಿದರಲ್ಲದೆ, ಸದಸ್ಯರು ತಾವಾಗಿಯೇ ಚುನಾವಣೆ ಹೊರತಾಗಿ ಅನೌಪಚಾರಿಕವಾಗಿ ಆಯ್ಕೆ ಮಾಡಿಕೊಂಡಿದ್ದರೆ, ಅಧ್ಯಕ್ಷರು ಅಂಗೀಕರಿಸುವುದಾಗಿ ತಿಳಿಸಿದ್ದಾರೆ ಎಂದಾಗ, ಸದಸ್ಯರ ಬೇಡಿಕೆಯಂತೆ ಮತ್ತೆ ಅರ್ಧ ಗಂಟೆ ಕಾಲಾವಕಾಶ ನೀಡಲಾಯಿತು.

ಮೂರನೇ ಬಾರಿ ಸಭೆ ಆರಂಭವಾಗುತ್ತಿದ್ದಂತೆ ಎರಡನೇ ಬಾರಿಗೆ ಮುಂದೂಡಿದ ಬಳಿಕ ಸಭೆ ನಡೆದರೆ ಅದಕ್ಕೆ ಕೋರಂ ಅಗತ್ಯವಿಲ್ಲ. ಆದರೂ ಎಲ್ಲಾ ಸದಸ್ಯರೂ ಒಪ್ಪಿಗೆ ನೀಡಿದರೆ, ಸಭೆ ಮುಂದೂಡುವುದಾಗಿ ತಿಳಿಸಿದ್ದು, ಸದಸ್ಯರು ತಮ್ಮ ನಿಲುವು ಪ್ರಕಟಿಸಬೇಕೆಂದು ಕೋರಿದರು. ಈ ವೇಳೆ ಮಾತನಾಡಿದ ಡಿ.ರವಿಶಂಕರ್, ಇದನ್ನು ಈ ಮೊದಲೇ ಹೇಳಬಹುದಿತ್ತು. ಇಲ್ಲವಾದರೆ 2 ಭಾರಿ ಸಭೆ ಮುಂದೂಡಿದಾಗಲಾದರೂ ಇದನ್ನು ಹೇಳಬಹುದಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದಾಗ, ಗರಂ ಆದ ಅಧ್ಯಕ್ಷೆ ನಹೀಮಾ ಸುಲ್ತಾನಾ, ನಾನು 10 ವರ್ಷಗಳಿಂದ ರಾಜಕೀಯದಲ್ಲಿದ್ದು, ನನಗೂ ಎಲ್ಲವೂ ಗೊತ್ತಿದೆ ಎಂದು ಕಿಡಿಕಾರಿದರು. ಕೊನೆಗೆ ಸದಸ್ಯರ ಸಮ್ಮತಿ ಮೇರೆಗೆ 10 ದಿನಗಳ ಒಳಗೆ ಚುನಾವಣೆ ನಡೆಸುವುದಾಗಿ ಅಧ್ಯಕ್ಷರು ತಿಳಿಸಿ ಸಭೆ ಅಂತ್ಯಗೊಳಿಸಿದರು.

2 ಬಾರಿ ಮುಂದೂಡಿ, ಮೂರು ಅವಧಿಯಲ್ಲಿ ಸಭೆ ನಡೆದರೂ ಅಂತಿಮವಾಗಿ ಚುನಾವಣೆಯಂತೂ ನಡೆಯಲಿಲ್ಲ. ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದ ಚುನಾವಣಾ ಸಭೆ 11.05ಕ್ಕೆ ಚಾಲನೆ ಪಡೆದುಕೊಂಡಿತು. ಕೋರಂ ಅಭಾವವೆಂದು 12ಕ್ಕೆ ಮುಂದೂಡಲ್ಪಟ್ಟಿತು. ನಂತರ ಕಾಲುಗಂಟೆ ಕಾಲ ಸಭೆ ನಡೆದು ಮತ್ತೆ 12.45ಕ್ಕೆ ಮುಂದೂಡಿ ಆಗಲೂ ಯಾವುದೇ ಚುನಾವಣಾ ಪ್ರಕ್ರಿಯೆ ನಡೆಯದೇ ಮುಂದೂಡಲ್ಪಟ್ಟಿತು.

ಇಂದು ಬೆಳಿಗ್ಗೆ 11ಕ್ಕೆ ಜಿಪಂ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ನಿಗದಿಯಾಗಿದ್ದರೆ, ಇದಕ್ಕೂ ಮುನ್ನ ಕಾಂಗ್ರೆಸ್ ಜಿಪಂ ಸದಸ್ಯರ ತುರ್ತು ಸಭೆ ನಡೆಸಿದ ಸಂಸದ ಆರ್.ಧ್ರುವನಾರಾಯಣ್, ರಾಜ್ಯ ಸರ್ಕಾರದ ಮೈತ್ರಿ ಮಾದರಿ ಮೈಸೂರು ಜಿಪಂ ಆಡಳಿತದಲ್ಲೂ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಗೆ ನಾಂದಿ ಹಾಡುವ ಬಗ್ಗೆ ಎರಡೂ ಪಕ್ಷದ ವರಿಷ್ಠರು ಚರ್ಚೆ ನಡೆಸಲು ವೇದಿಕೆ ಸಜ್ಜಾಗುತ್ತಿರುವ ಬಗ್ಗೆ, ಜೊತೆಗೆ ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳನ್ನು ತಮ್ಮ ಎರಡು ಪಕ್ಷಗಳಲ್ಲೇ ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ಚುನಾವಣಾ ಸಭೆ ಮುಂದೂಡುತ್ತಿರುವ ಸಂಬಂಧ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಅದೇ ರೀತಿ ಜಿಪಂ ಸಭಾಂಗಣದಲ್ಲಿ ಚುನಾವಣಾ ಸಭೆ ಮುಂದೂಡಲ್ಪಟ್ಟಿತು.

Translate »