ಹಾಸನ: ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಉರುಳಿಸಲು ನಾನು ಬಿಡುವುದಿಲ್ಲ. ಈ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಜಾಗ್ರತೆ ವಹಿಸುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದರು.
ಹಾಸನದ ಚನ್ನಪಟ್ಟಣದಲ್ಲಿರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಸಂಬಂಧ ನಾನು ಈಗಾಗಲೇ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿದ್ದೇನೆ. ಮೈತ್ರಿ ಸರ್ಕಾರಕ್ಕೆ ಯಾವುದೇ ಅಪಾಯ ಬಾರದಂತೆ ನೋಡಿಕೊಳ್ಳುತ್ತೇವೆ ಎಂದರು.
ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಆಗಬೇಕೆಂದು ಕಾಂಗ್ರೆಸ್‍ನವರೇ ಒತ್ತಡ ತಂದಿದ್ದರು. ಹೀಗಿರುವಾಗ ಕಾಂಗ್ರೆಸ್ ನಾಯಕರು ಕೂಡ ಮೈತ್ರಿ ಸರ್ಕಾರದ ರಕ್ಷಣೆಗೆ ನಿಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಹಿಂದೆ ಕುಮಾರಸ್ವಾಮಿ ಬಿಜೆಪಿ ಜೊತೆ ಹೋಗುವಂತಹ ಸಂದರ್ಭವನ್ನು ಕಾಂಗ್ರೆಸ್ ನವರು ಸೃಷ್ಟಿಸಿದರಾ ಅಥವಾ ಬೇರೆಯವರು ಸೃಷ್ಟಿಸಿದರಾ ಎಂಬುದನ್ನು ಸಮಯ ಬಂದಾಗ ಸಂಪೂರ್ಣವಾಗಿ ಹೇಳುತ್ತೇನೆ ಎಂದು ಅವರು ಹೇಳಿದರು.
ಕುಮಾರಸ್ವಾಮಿ 38 ಶಾಸಕರನ್ನು ಕಟ್ಟಿಕೊಂಡು ಮುಖ್ಯಮಂತ್ರಿ ಆಗಿದ್ದಾರೆ. ಅವರ ನೋವೇನು ಎಂದು ನನಗೆ ಗೊತ್ತಿದೆ. ಅವರು ಕಾಂಗ್ರೆಸ್‍ನ 78 ಶಾಸಕರನ್ನು ಜೊತೆ ಗೂಡಿಸಿಕೊಂಡು ಸರ್ಕಾರ ನಡೆಸಬೇಕು. ಮೈತ್ರಿ ಸರ್ಕಾರದಲ್ಲಿ ನಮ್ಮ ಪಕ್ಷವು ಉಳಿಯ ಬೇಕು. ಅದಕ್ಕಾಗಿ ಶಕ್ತಿ ಮೀರಿ ಶ್ರಮಿಸಲಾಗುತ್ತದೆ. ಮೈತ್ರಿ ಸರ್ಕಾರ ನಡೆಸುವಾಗ ಭಿನ್ನಾಭಿ ಪ್ರಾಯಗಳು ಇದ್ದೇ ಇರುತ್ತವೆ. ಹಾಗೆಂದ ಮಾತ್ರಕ್ಕೆ ಸರ್ಕಾರವೇನು ಉರುಳುವುದಿಲ್ಲ ಎಂದು ಅವರು ಹೇಳಿದರು. ಜೆಡಿಎಸ್‍ಅನ್ನು ಅಪ್ಪ-ಮಕ್ಕಳ ಪಕ್ಷ ಎಂದು ಹೇಳುತ್ತಾರೆ. ಆದರೆ, ಈ ಹಿಂದೆ ಸಿದ್ದರಾಮಯ್ಯ ಅವರಿಗೆ ಪಕ್ಷದಲ್ಲಿ
ಸ್ಥಾನಮಾನ ನೀಡಲಿಲ್ಲವೇ? ಎಂದು ಪ್ರಶ್ನಿಸಿದ ಅವರು, ಚುನಾವಣಾ ಸಂದರ್ಭದಲ್ಲಿ ಬಿಜೆಪಿಯವರು ನಮ್ಮ ಪಕ್ಷವನ್ನು ಬಿ ಟೀಂ ಎಂದು ಅಪಪ್ರಚಾರ ಮಾಡಿದರು. ಆದರೆ ಈಗೇನಾಗಿದೆ ಎಂದು ಪ್ರಶ್ನಿಸಿದ ದೇವೇಗೌಡರು, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಯ ಬೇಕು. ಅದನ್ನು ಉಳಿಸುವುದು ಜನತೆಗೆ ಬಿಟ್ಟ ವಿಚಾರ ಎಂದರು. ನನಗೆ ಯಾರ ಬಗ್ಗೆಯೂ ಭಯವಿಲ್ಲ. ಸಿದ್ದರಾಮಯ್ಯನವರು ‘ನಾನು ಮುಖ್ಯಮಂತ್ರಿ ಆಗಿದ್ದಾಗ ಮಾಡಿದ ಯಾವುದೇ ಕಾರ್ಯಕ್ರಮಕ್ಕೂ ಅಡ್ಡಿ ಮಾಡಬಾರದು ಎಂದಿ ದ್ದಾರೆ. ಹೀಗಿರುವಾಗ ಸಾಲ ಮನ್ನಾ ಮಾಡುವುದು ಸವಾಲಿನ ಕೆಲಸ. ಅದನ್ನು ಕುಮಾರಸ್ವಾಮಿ ಅವರು ಮಾಡುತ್ತಿದ್ದಾರೆ ಎಂದರು. ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದನ್ನು ಮುಂದೆ ನಡೆಯುವ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಬಹಿರಂಗಪಡಿಸುತ್ತೇನೆ ಎಂದು ಹೇಳಿದ ಅವರು, ನನ್ನನ್ನು 56 ವರ್ಷ ಕಾಲ ಹಾಸನ ಜಿಲ್ಲೆಯ ಜನರು ರಾಜಕೀಯ ಬೆಳೆಸಿದ್ದೀರಿ, ನನಗೆ ಯಾರೂ ಶತ್ರು ಗಳಿಲ್ಲ, ನಾನು ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ, ಯಾರ ಮನಸ್ಸನ್ನೂ ನೋಯಿಸಿಲ್ಲ. ಪಕ್ಷ ನನ್ನ ಮನೆ ಆಸ್ತಿ ಆಲ್ಲ, ಇದು ಎಲ್ಲರಿಗೂ ಸೇರಿದ ಪಕ್ಷ. ಬೆಂಗಳೂರಿನಲ್ಲಿ ಜ.17ಕ್ಕೆ ಜೆಡಿಎಸ್ ಅಲ್ಪ ಸಂಖ್ಯಾತರ ಬೃಹತ್ ಸಮಾವೇಶ ನಡೆಯಲಿದೆ. ಜ.29ಕ್ಕೆ ಪಕ್ಷದ ಕಾರ್ಯಕಾರಿಣಿ ಹಾಗೂ ಜ. 30ಕ್ಕೆ ಕಾರ್ಯಕರ್ತರ ಸಮಾವೇಶ ನಡೆಸಲು ಚಿಂತನೆ ಮಾಡಿದ್ದೇನೆ ಎಂದು ಹೇಳಿದರು.