ಸಂಕ್ರಾಂತಿ ನಂತರ  ಮೈತ್ರಿ ಸರ್ಕಾರ ಪತನ?
ಮೈಸೂರು

ಸಂಕ್ರಾಂತಿ ನಂತರ ಮೈತ್ರಿ ಸರ್ಕಾರ ಪತನ?

January 14, 2019

ಬೆಂಗಳೂರು: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ರಣತಂತ್ರ ರೂಪಿಸಿದ್ದು, `ಆಪರೇಷನ್ ಕಮಲ’ಕ್ಕೆ ಚಾಲನೆ ದೊರೆತಿದೆ. ಈಗಾಗಲೇ 6 ಕಾಂಗ್ರೆಸ್ ಶಾಸಕರು ದೆಹಲಿ ತಲುಪಿದ್ದು, ಇನ್ನೂ ಐವರು ಕಾಂಗ್ರೆಸ್ ಶಾಸಕರು ನಾಳೆ (ಜ.14) ದೆಹಲಿಗೆ ವಿಮಾನ ಹತ್ತಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆಯೊಳಗಾಗಿ ರಾಜ್ಯದ ಮೈತ್ರಿ ಸರ್ಕಾರವನ್ನು ಉರುಳಿಸಲೇ ಬೇಕೆಂದು ಪಣ ತೊಟ್ಟಿರುವ ಬಿಜೆಪಿ ವರಿಷ್ಠರು, ಅದಕ್ಕಾಗಿ ದೆಹಲಿಯಿಂದಲೇ ಕಾರ್ಯಾ ಚರಣೆ ಆರಂಭಿಸಿದ್ದಾರೆ. ದೆಹಲಿ ವರಿಷ್ಠರೇ ನೇರವಾಗಿ ಸರ್ಕಾರ ಉರುಳಿಸುವ ಕಾರ್ಯಾಚರಣೆಗೆ ಕೈಹಾಕಿದ್ದಾರೆ.

ಕಾಂಗ್ರೆಸ್‍ನ ಶಾಸಕರಾದ ನಾಗೇಂದ್ರ (ಬಳ್ಳಾರಿ), ಆನಂದ್ ಸಿಂಗ್ (ವಿಜಯನಗರ), ಶಿವರಾಂ ಹೆಬ್ಬಾರ್ (ಯಲ್ಲಾಪುರ), ಪ್ರತಾಪ್ ಗೌಡ ಪಾಟೀಲ್ (ಮಸ್ಕಿ), ಜಿ.ಎನ್.ಗಣೇಶ್ (ಕಂಪ್ಲಿ), ಸಂಪುಟ ಪುನರ್ ರಚನೆ ವೇಳೆ ಸಚಿವ ಸ್ಥಾನ ಕಳೆದುಕೊಂಡ ಪಕ್ಷೇತರ ಶಾಸಕ ಆರ್.ಶಂಕರ್ ಈಗಾ ಗಲೇ ದೆಹಲಿ ತಲುಪಿ ಬಿಜೆಪಿ ಪಾಳೆಯ ಸೇರಿದ್ದಾರೆ. ನಾಳೆ (ಜ.14) ಇನ್ನೂ ಐವರು ಕಾಂಗ್ರೆಸ್ ಶಾಸಕರು ದೆಹಲಿ ತಲುಪಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಶಾಸಕರೆಲ್ಲರೂ ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಮುಂಬೈನ ರೆಸಾರ್ಟ್‍ಗೆ ತೆರಳ ಲಿದ್ದಾರೆ. ಮುಂಬೈನ ಪಮೇಲಿ ಬಳಿ ಇರುವ ರೆಸಾರ್ಟ್ ವೊಂದರಲ್ಲಿ ಶಾಸಕರ ವಾಸ್ತವ್ಯಕ್ಕೆ ಕೊಠಡಿಗಳನ್ನು ಈಗಾ ಗಲೇ ಕಾಯ್ದಿರಿಸಲಾಗಿದೆ. ಇದರ ಉಸ್ತುವಾರಿಗಾಗಿ ಮಲ್ಲೇ ಶ್ವರಂ ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರನ್ನು ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ವರಿಷ್ಠರ ಕಾರ್ಯತಂತ್ರದಂತೆ ಕಾಂಗ್ರೆಸ್ ಶಾಸಕರನ್ನು ಒಗ್ಗೂಡಿಸಿದ ನಂತರ ಅವರಿಂದ ರಾಜೀನಾಮೆ ಕೊಡಿಸಿ, ರಾಜ್ಯದಲ್ಲಿನ ಮೈತ್ರಿ ಸರ್ಕಾರವನ್ನು ಉರುಳಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಂಕ್ರಾಂತಿಯ ನಂತರ ಕಾಂಗ್ರೆಸ್‍ನ ಸುಮಾರು 17 ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈ ಸಂಬಂಧ ಮೈಸೂರು ಮಿತ್ರ’ನ ಜೊತೆ ಮಾತನಾಡಿದ ಬಿಜೆಪಿ ಮುಖಂಡರೋರ್ವರು, ಮೈತ್ರಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಎಲ್ಲಾ ರೀತಿಯ ಸಿದ್ಧತೆ ಗಳೂ ನಡೆದಿವೆ. ಆರು ಕಾಂಗ್ರೆಸ್ ಶಾಸಕರು ನಮ್ಮ ಜೊತೆ ದೆಹಲಿಯಲ್ಲಿರುವುದು ನಿಜ. ನಾಳೆ ಇನ್ನೂ ಐವರು ಶಾಸಕರು ಬರುವ ನಿರೀಕ್ಷೆಯಿದೆ. ಒಟ್ಟಾರೆ 17ರಿಂದ 20 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಸರ್ಕಾರ ಉರುಳಿಸಿ ಚುನಾವಣೆಗೆ ಹೋಗುವುದೇ? ಅಥವಾ ಬಿಜೆಪಿ ಸರ್ಕಾರ ರಚಿಸಬೇಕೇ? ಎಂಬುದನ್ನು ವರಿಷ್ಠರು ನಿರ್ಧಾರ ಮಾಡಲಿದ್ದಾರೆ’ ಎಂದು ಹೇಳಿದರು.

ಬಿಜೆಪಿ ಶಾಸಕರು ಭದ್ರ: ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕೆಲವು ಕಾಂಗ್ರೆಸ್ ಮುಖಂಡರು ಪದೇ ಪದೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ ಶಾಸಕರನ್ನು ಸೆಳೆಯುವ, ಅದೇ ವೇಳೆ ತಮ್ಮ ಪಕ್ಷದ ಶಾಸಕರನ್ನು ಕಾಂಗ್ರೆಸ್ ಸೆಳೆಯುವುದನ್ನು ತಪ್ಪಿಸುವ ಸಲುವಾಗಿ ಬಿಜೆಪಿ ವರಿಷ್ಠರು ತಮ್ಮ 104 ಶಾಸಕರ ಪೈಕಿ 100 ಶಾಸಕರನ್ನು ದೆಹಲಿಗೆ ಕರೆಸಿಕೊಳ್ಳುವ ಮೂಲಕ ತಮ್ಮ ಶಾಸಕರನ್ನು ಭದ್ರಪಡಿಸಿಕೊಂಡಿದ್ದಾರೆ. ಇಂದು ದೆಹಲಿಯಲ್ಲಿ ಬಿಜೆಪಿಯ ಶಾಸಕರು ಹಾಗೂ ಸಂಸದರ ಜೊತೆ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಮತ್ತು ಕರ್ನಾಟಕ ಉಸ್ತುವಾರಿ ಮುರಳೀಧರ ರಾವ್ ಸಭೆ ನಡೆಸಿದ್ದಾರೆ. ಇಂದಿನ ಸಭೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸದ ಕಾರಣ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ. ಎಲ್ಲಾ ಶಾಸಕರು ದೆಹಲಿಯಲ್ಲೇ ಉಳಿದು ನಾಳಿನ ಸಭೆಗೂ ಹಾಜರಾಗಬೇಕೆಂದು ಬಿಜೆಪಿ ವರಿಷ್ಠರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

Translate »