ನಿವೇಶನ ಖರೀದಿ, ಪರಭಾರೆ ಪ್ರಕರಣ: ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ನಾಲ್ವರ ವಿರುದ್ಧ ಎಫ್‍ಐಆರ್
ಮೈಸೂರು

ನಿವೇಶನ ಖರೀದಿ, ಪರಭಾರೆ ಪ್ರಕರಣ: ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ನಾಲ್ವರ ವಿರುದ್ಧ ಎಫ್‍ಐಆರ್

June 24, 2018

ಮೈಸೂರು: ಮುಡಾ ನಿವೇಶನ ಖರೀದಿ ಹಾಗೂ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಲ್ಕು ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ.

ಮೈಸೂರಿನ 2 ನೇ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಮಾಜಿ ಸಿಎಂ ಸಿದ್ದ ರಾಮಯ್ಯ, ಮುಡಾ ಮಾಜಿ ಅಧ್ಯಕ್ಷರಾದ ಸಿ. ಬಸವೇಗೌಡ, ಡಿ.ಧ್ರುವಕುಮಾರ್, ಆಯುಕ್ತ ಕಾಂತರಾಜು ವಿರುದ್ಧ, ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ (ಸಂಖ್ಯೆ 0049/2018) ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಈ ನಾಲ್ವರ ವಿರುದ್ಧ ನ್ಯಾಯಾಲಯದ ಆದೇಶದಂತೆ ಐಪಿಸಿ ಕಲಂ 120ಬಿ, 198, 166, 168, 169, 200, 418, 409, 420 ಹಾಗೂ 468 ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ಹಿನಕಲ್ ಬಳಿ ಮುಡಾ 1982ರಲ್ಲಿ ಸ್ವಾಧೀನಪಡಿಸಿ ಕೊಂಡ 535 ಎಕರೆ ಭೂಮಿಯಲ್ಲಿ ಹಿನಕಲ್ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರ ಸಂಬಂಧಿಗಳ 30 ಗುಂಟೆ ಜಮೀನನ್ನು 1998ರಲ್ಲಿ ಸಿದ್ದರಾಮಯ್ಯ ಉಪಮುಖ್ಯ ಮಂತ್ರಿಯಾಗಿದ್ದ ವೇಳೆ ಡಿನೋಟಿಫೈ ಮಾಡಲಾಗಿತ್ತು. ಇದರಲ್ಲಿ 10 ಗುಂಟೆ ನಿವೇಶನವನ್ನು ಸಿದ್ದರಾಮಯ್ಯನವರೇ ಖರೀದಿಸಿದ್ದಲ್ಲದೆ, ಪಕ್ಕದ ಜಾಗವನ್ನೂ ಸೇರಿಸಿಕೊಂಡು ಮನೆ ಕಟ್ಟಿದ್ದರು. ಕೆಲ ವರ್ಷಗಳ ಬಳಿಕ ಮನೆಯನ್ನು ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿದ್ದರು. ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ಇದರಲ್ಲಿ ಮುಡಾ ಮಾಜಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ಆರ್‍ಟಿಐ ಕಾರ್ಯಕರ್ತ ಗಂಗರಾಜು ಆರೋಪಿಸಿದ್ದರು. ಅಲ್ಲದೆ ಡಿನೋಟಿಫೈ ಜಾಗಕ್ಕೆ ಮೊದಲೇ ಬದಲಿ ನಿವೇಶನ ನೀಡಲಾಗಿತ್ತು. ಆದರೆ 2017ರಲ್ಲಿ ಮತ್ತೆ ಬದಲಿ ನಿವೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮುಡಾ ಅಧ್ಯಕ್ಷರಾಗಿದ್ದ ಡಿ.ಧ್ರುವಕುಮಾರ್, ಸಾಮಾನ್ಯ ಸಭೆಯಲ್ಲಿ ಮಂಡಿಸಿ, ನಿವೇಶನ ನೀಡಲು ಅನುಮೋದನೆ ನೀಡಿರುವುದು ಕಾನೂನುಬಾಹಿರ ಎಂದು ಗಂಗಾರಾಜ್ ದೂರಿನಲ್ಲಿ ದಾಖಲಿಸಿದ್ದರು.

Translate »