ತಲಚೇರಿ-ಮೈಸೂರು ರೈಲು ಮಾರ್ಗ ಯೋಜನೆ: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸ್ಥಾನದಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತೆಗೆದು ಹಾಕುವಂತೆ
ಕೊಡಗು, ಮೈಸೂರು

ತಲಚೇರಿ-ಮೈಸೂರು ರೈಲು ಮಾರ್ಗ ಯೋಜನೆ: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸ್ಥಾನದಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತೆಗೆದು ಹಾಕುವಂತೆ

June 24, 2018

ಕೊಡಗು ಮೂಲಕ ವಿನಾಶಕಾರಿ ತಲಚೇರಿ-ಮೈಸೂರು ರೈಲ್ವೆ ಮಾರ್ಗ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಮೇಲೆ ವೇಣುಗೋಪಾಲ್ ಒತ್ತಡ: ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿಗೆ ಪತ್ರ ಬರೆದ ಕರ್ನಲ್ (ನಿವೃತ್ತ) ಸಿ.ಪಿ.ಮುತ್ತಣ್ಣ

ಮಡಿಕೇರಿ/ಮೈಸೂರು: ಕೊಡಗು ಮೂಲಕ ವಿವಾದಿತ ತಲಚೇರಿ-ಮೈಸೂರು ರೈಲ್ವೆ ಮಾರ್ಗ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಆ ಸ್ಥಾನದಿಂದ ತೆಗೆದು ಹಾಕ ಬೇಕೆಂದು ಕೊಡಗು ವನ್ಯಜೀವಿ ಸಂರಕ್ಷಣಾ ಸಂಘದ ಅಧ್ಯಕ್ಷರು, ಸೇವ್ ಕೊಡಗು ಮತ್ತು ಕಾವೇರಿ ಹೋರಾಟ ಸಮಿತಿ ಸಮನ್ವಯಕಾರರೂ ಆದ ಕರ್ನಲ್ (ನಿವೃತ್ತ) ಸಿ.ಪಿ.ಮುತ್ತಣ್ಣ ಆಗ್ರಹಪಡಿಸಿದ್ದಾರೆ.

ಈ ಸಂಬಂಧ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದಾರೆ. ವೇಣು ಗೋಪಾಲ್ ಅವರು ತಮ್ಮ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ಕೊಡಗಿನ ಪರಿಸರ ಸೂಕ್ಷ್ಮ ವಲಯದ ಮೂಲಕ ಈ ರೈಲ್ವೆ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಈ ಯೋಜನೆಯನ್ನು ಅನುಷ್ಠಾನಗೊಳಿ ಸಿದರೆ ದಟ್ಟವಾದ ಅರಣ್ಯ ಪ್ರದೇಶ ನಾಶ ವಾಗುವುದಲ್ಲದೆ ಇಡೀ ಕೊಡಗು ಜಿಲ್ಲೆಯೇ ನಾಶವಾಗುತ್ತದೆ ಎಂದು ವಿವರಿಸಿದ್ದಾರೆ.

ಮೈಸೂರಿನಿಂದ ಕೊಡಗು ಮಾರ್ಗವಾಗಿ ಕೇರಳದ ಕೋಜಿಕೋಡ್‍ಗೆ 400 ಕೆ.ವಿ. ಹೈ ಟೆನ್ಷನ್ ವಿದ್ಯುತ್ ಮಾರ್ಗ ಹಾದು ಹೋಗುವಲ್ಲಿ ವೇಣುಗೋಪಾಲ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ದೀರ್ಘ ಕಾಲದಿಂದಲೂ ಕೊಡಗಿನ ಹಲವಾರು ಸ್ಥಳೀಯ ಸಂಸ್ಥೆಗಳ ವಿರೋಧದ ನಡು ವೆಯೂ ಈ ಯೋಜನೆ ಅನುಷ್ಠಾನಕ್ಕೆ ಬಂದಿದ್ದು ವಿಷಾದನೀಯ. ಈ ಯೋಜ ನೆಯ ಪರಿಣಾಮವಾಗಿ ಕೊಡಗು ಹಾಗೂ ಕಾವೇರಿ ಜಲಾನಯನದ ಪ್ರಮುಖ ಸ್ಥಳಗಳಲ್ಲಿ ಸುಮಾರು 60,000ಕ್ಕೂ ಹೆಚ್ಚು ಮರಗಳ ಹನನವಾಗಿದೆ.

ಈಗ ಮತ್ತೆ ಅವರು ತಮ್ಮ ಅಧಿಕಾರವನ್ನು ಬಳಸಿಕೊಂಡು ಕೊಡಗು ಮೂಲಕ ಹಾದು ಹೋಗುವ ಮೈಸೂರು-ತಲಚೇರಿ ರೈಲ್ವೆ ಮಾರ್ಗ ಅನುಷ್ಠಾನಕ್ಕೂ ಪ್ರಯತ್ನಿ ಸುತ್ತಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ. ಈ ರೈಲ್ವೆ ಮಾರ್ಗ ನಿಷ್ಪ್ರಯೋಜಕ ಯೋಜನೆಯಾಗಿದ್ದು, ಈ ಯೋಜನೆ ಅನುಷ್ಠಾನಕ್ಕೆ ಸಾವಿರಾರು ಮರಗಳಿಗೆ ಕೊಡಲಿ ಹಾಕುವುದರಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಉದ್ದೇಶವಷ್ಟೇ ಈಡೇರಿದಂತಾಗುತ್ತದೆ. ಪ್ರಸ್ತುತ ವಿದ್ಯಮಾನದಲ್ಲಿ ಕಾವೇರಿ ನೀರು ಹಂಚಿಕೆಗೆ ಸಂಬಂಧಪಟ್ಟಂತೆ ಕರ್ನಾಟಕ ಮತ್ತು ಕಾವೇರಿ ರಾಜ್ಯಗಳ ನಡುವೆ ತೀವ್ರ ಹೋರಾಟಗಳು ನಡೆಯುತ್ತಿವೆ. ಅಲ್ಲದೆ ರಾಜ್ಯದಲ್ಲಿ ಸಾಲಬಾಧೆ ಮತ್ತು ಬರಗಾಲದಿಂದಾಗಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿ ರುವಾಗ ಕೊಡಗು ಮೂಲಕ ಹಾದು ಹೋಗುವ ಇಂತಹ ವಿನಾಶಕಾರಿ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಮುತ್ತಣ್ಣ ಪತ್ರದಲ್ಲಿ ತಿಳಿಸಿದ್ದಾರೆ.

`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಮುತ್ತಣ್ಣ ಅವರು ವೇಣುಗೋಪಾಲ್ ಸಾಂವಿಧಾನಿಕ ಹೊರತಾದ ಪ್ರಾಧಿಕಾರದಂತೆ ವರ್ತಿಸುತ್ತಿದ್ದಾರೆ. ಅಲ್ಲದೆ ತಮಗಿರುವ ರಾಜಕೀಯ ಅಧಿಕಾರ ಮತ್ತು ಪ್ರಭಾವದ ಮೂಲಕ ತಮ್ಮ ರಾಜ್ಯ ಕೇರಳದ ಅಭಿವೃದ್ಧಿಗೆ ಕೊಡಗು ಮತ್ತು ಕರ್ನಾಟಕ ಬೆಲೆ ತರುವಂತಾಗಿದೆ ಎಂದು ದೂರಿದರು.

ವೇಣುಗೋಪಾಲ್ ಅವರ ಆಜ್ಞೆಯಂತೆ ಕೊಡಗಿನ ಖಾಸಗಿ ಜಮೀನು ಮಾಲೀಕರ ಅನುಮತಿಯೂ ಇಲ್ಲದೆ ದಕ್ಷಿಣ ಕೊಡಗಿನ ಅರಣ್ಯ ಭೂಮಿ ಸರ್ವೆ ಕಾರ್ಯವನ್ನು ಕೊಂಕಣ್ ರೈಲ್ವೆ ಕಾರ್ಪೋರೇಷನ್ ಕೈಗೆತ್ತಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದು ತಮ್ಮ ಸ್ವಂತ ರಾಜಕೀಯ ಹಿತಾಸಕ್ತಿಗಾಗಿ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶವಾಗದಂತೆ ಅವರನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಿಂದ ತೆಗೆದು ಹಾಕುವಂತೆ ಕೋರಿರುವುದಾಗಿ ಮುತ್ತಣ್ಣ ತಿಳಿಸಿದ್ದಾರೆ.

Translate »