‘ಸಿಂಹ’ ಘರ್ಜನೆ ಫಲ: ಮೈಸೂರು ಜಲದರ್ಶಿನಿ ಬಳಿ ಹುಣಸೂರು ರಸ್ತೆ ಭಾಗಶಃ ನೇರಗೊಳಿಸುವ ತ್ವರಿತ ಕಾಮಗಾರಿ ಆರಂಭ
ಮೈಸೂರು

‘ಸಿಂಹ’ ಘರ್ಜನೆ ಫಲ: ಮೈಸೂರು ಜಲದರ್ಶಿನಿ ಬಳಿ ಹುಣಸೂರು ರಸ್ತೆ ಭಾಗಶಃ ನೇರಗೊಳಿಸುವ ತ್ವರಿತ ಕಾಮಗಾರಿ ಆರಂಭ

June 24, 2018

ಮೈಸೂರು: ಮೈಸೂರಿನ ಜಲದರ್ಶಿನಿ ಬಳಿ ಅಪಘಾತ ವಲಯ ಎನಿಸಿದ್ದ ಹುಣಸೂರು ರಸ್ತೆ ತಿರುವನ್ನು ಭಾಗಶಃ ನೇರಗೊಳಿಸುವ ತ್ವರಿತ ಕಾಮಗಾರಿ ಈಗ ಆರಂಭವಾಗಿದೆ. ತಿರುವನ್ನು ನೇರಗೊಳಿಸಿ ಅಪಘಾತಗಳನ್ನು ತಪ್ಪಿಸಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಗಳು 12 ಕೋಟಿ ರೂ. ಕೇಂದ್ರ ರಸ್ತೆ ನಿಧಿಯಡಿ ಯೋಜನೆ ರೂಪಿಸಿದ್ದ ರಾದರೂ, ಕಡೆಗೆ ಕೇವಲ ರಸ್ತೆ ಅಗಲೀಕರಣ ಗೊಳಿಸಿ, ಡಾಂಬ ರೀಕರಣ ಮಾಡಿ ಸುಮ್ಮನಾಗಿದ್ದರು. ರಸ್ತೆ ನೇರಗೊಳಿಸಿಲ್ಲ, ಇಕ್ಕೆಲಗಳಲ್ಲಿ ಪಾದಚಾರಿ ರಸ್ತೆಗೆ ಜಾಗವನ್ನೂ ಬಿಟ್ಟಿಲ್ಲ. ಇದರಿಂದ ಇಲ್ಲಿರುವ ಮಹಾರಾಣಿ ಕಾಮರ್ಸ್ ಕಾಲೇಜು ವಿದ್ಯಾರ್ಥಿ ನಿಯರು, ಸಾರ್ವಜನಿಕರು ಓಡಾಡಲು ತೊಂದರೆಯಾಗಿದೆ. ಕಾಮಗಾರಿಗೆ 12 ಕೋಟಿ ರೂ. ಮಂಜೂರಾದರೂ ರಸ್ತೆ ಅನು ಕೂಲಕ್ಕಿಂತ ತೊಂದರೆಯೇ ಆಗಿದೆ. ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗಿದೆ ಎಂಬ ದೂರುಗಳು ಕೇಳಿ ಬಂದಿದ್ದವು.

ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಗುರು ವಾರ ಜಲದರ್ಶಿನಿ ಅತಿಥಿ ಗೃಹದ ಬಳಿ ಹುಣಸೂರು ರಸ್ತೆ ಕಾಮಗಾರಿ ಪರಿಶೀಲಿಸಿ ರಸ್ತೆ ನೇರಗೊಳಿಸದೇ ಕೇವಲ ಅಗಲೀ ಕರಣಕ್ಕೆ ಸೀಮಿತಗೊಳಿಸಿದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಗಳ ವಿರುದ್ಧ ಕಿಡಿಕಾರಿದ್ದರು.

ತಕ್ಷಣವೇ ಜಲದರ್ಶಿನಿ, ಪಿಡಬ್ಲ್ಯೂಡಿ ಕಾಂಪೌಂಡ್ ತೆರವುಗೊಳಿಸಿ ವಾಲ್ಮೀಕಿ ರಸ್ತೆ ಜಂಕ್ಷನ್‍ವರೆಗೆ ಒಂದು ಕಡೆಯಾದರೂ ನೇರಗೊಳಿಸುವ ಜತೆಗೆ ರಸ್ತೆಯನ್ನು ಅಪಘಾತ ತಿರುವಿನಲ್ಲಿ ಮತ್ತಷ್ಟು ವಿಸ್ತರಿಸಿ, ಎರಡೂ ಬದಿಯಲ್ಲಿ ಪಾದಚಾರಿ ರಸ್ತೆ ನಿರ್ಮಿಸಿ ಇಂಟರ್ ಲಾಕಿಂಗ್ ಟೈಲ್ಸ್ ಅಳವಡಿಸುವಂತೆ ಯೋಜನೆ ಮೇಲ್ವಿಚಾರಣೆ ನೋಡಿ ಕೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಸಿಸ್ಟೆಂಟ್ ಎಕ್ಸಿ ಕ್ಯೂಟಿವ್ ಇಂಜಿನಿಯರ್ ಹೆಚ್.ಪಿ.ಚಂದ್ರಪ್ಪ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಬಿ.ಕೆ.ಯೋಗಾನಂದ ಅವರಿಗೆ ಪ್ರತಾಪ್ ಸಿಂಹ ತಾಕೀತು ಮಾಡಿದ್ದರು. ಸಂಸದರ ನಿರ್ದೇಶನದಂತೆ ಮರು ದಿನ (ಶುಕ್ರವಾರ)ವೇ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು, ಲೋಕೋಪ ಯೋಗಿ ಇಲಾಖೆ ಸೂಪರಿಂಟೆಂಡಿಂಗ್ ಸತ್ಯನಾರಾಯಣ ಅವರ ಅನುಮತಿ ಪಡೆದು, ಜಲದರ್ಶಿನಿ ಮತ್ತು ಪಿಡಬ್ಲ್ಯೂಡಿ ವಸತಿ ಗೃಹದ ಕಾಂಪೌಂಡ್ ಗೋಡೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ. ಇಂದು ಸಹ ಕಾಮಗಾರಿ ಕ್ಷಿಪ್ರಗತಿಯಲ್ಲಿ ಮುಂದುವರೆದಿದ್ದು, ಅಲ್ಲಿ ಇದ್ದ ಮರದ ನಾಲ್ಕು ಬುಡಗಳನ್ನು ಜೆಸಿಬಿಯಿಂದ ಬೇರು ಸಮೇತ ತೆರವುಗೊಳಿಸಿ ಸಮತಟ್ಟು ಮಾಡಲಾಗುತ್ತಿದೆ. ಜಲದರ್ಶಿನಿ ಅತಿಥಿಗೃಹದಿಂದ ವಾಲ್ಮೀಕಿ ರಸ್ತೆ ಜಂಕ್ಷನ್‍ವರೆಗೆ ಹುಣಸೂರು ರಸ್ತೆಯನ್ನು ಭಾಗಶಃ ನೇರಗೊಳಿಸಿ, ತಿರುವಿನಲ್ಲಿ ಸಂಭವಿಸುತ್ತಿದ್ದ ಅಪಘಾತಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ತ್ವರಿತ ಕಾಮಗಾರಿ ಮಾಡುತ್ತಿದ್ದಾರೆ.

ಅದೇ ರೀತಿ ಎರಡೂ ಬದಿಯಲ್ಲಿ ಫುಟ್‍ಪಾತ್ ನಿರ್ಮಿಸಿ ಇಂಟರ್‍ಲಾಕಿಂಗ್ ಟೈಲ್ಸ್ ಅಳವಡಿಸಿ ಪಾದಚಾರಿಗಳು ಸರಾಗವಾಗಿ ನಡೆದುಕೊಂಡು ಹೋಗಲು ಅನುಕೂಲ ಮಾಡಿಕೊಡಲಾಗುತ್ತಿದೆ. ರಸ್ತೆ ವಿಭಜಕ ಸ್ಥಳದಲ್ಲಿ ಪಾರಂಪರಿಕ ರಸ್ತೆ ದೀಪ, ರಸ್ತೆಗೆ ಬಿಳಿ ಹಾಗೂ ಹಳದಿ ಬಣ್ಣದ ಪಟ್ಟಿ ಬಳಿಯುವುದಲ್ಲದೇ ಅಲ್ಲಲ್ಲಿ ಸುರಕ್ಷತೆ ಹಾಗೂ ಸೈನೇಜ್ ಬೋರ್ಡ್‍ಗಳನ್ನು ಅಳವಡಿಸಿ ರಸ್ತೆಯ ಸೌಂದರ್ಯವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದೀಗ ರಸ್ತೆ ನೇರ, ಅಗಲೀಕರಣ ಹಾಗೂ ಫುಟ್‍ಪಾತ್‍ನೊಂದಿಗೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿರುವುದರಿಂದ ಹಣ ದುರ್ಬಳಕೆಯಾಗಿದೆ ಎಂಬ ಅಪವಾದಕ್ಕೆ ತೆರೆ ಬಿದ್ದಿದ್ದು, ಈ ಬೆಳವಣಿಗೆಯು ಸಂಸದ ಪ್ರತಾಪ್ ಸಿಂಹ ಅವರ ಇಚ್ಛಾಸಕ್ತಿಯ ಫಲ ಎನ್ನಬಹುದು.

2005ರಿಂದೀಚೆಗೆ 79 ಅಪಘಾತಗಳಲ್ಲಿ 14 ಮಂದಿ ಸಾವು

ಮೈಸೂರಿನ ಅಪಘಾತ ವಲಯ ಎನಿಸಿರುವ ಜಲದರ್ಶಿನಿ ಬಳಿಯ ಹುಣಸೂರು ರಸ್ತೆ ತಿರುವಿನಲ್ಲಿ 2005 ರಿಂದೀಚೆಗೆ 79 ಅಪಘಾತಗಳು ಸಂಭವಿಸಿ ಒಟ್ಟು 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲ ಗಳು ತಿಳಿಸಿವೆ. 2005 ರಲ್ಲಿ 4, 6ರಲ್ಲಿ 6, 7ರಲ್ಲಿ 4,8ರಲ್ಲಿ 5, 9ರಲ್ಲಿ 8, 10ರಲ್ಲಿ 9, 11ರಲ್ಲಿ 16, 12ರಲ್ಲಿ 4, 13ರಲ್ಲಿ 6, 14ರಲ್ಲಿ 6, 15ರಲ್ಲಿ 6, 16ರಲ್ಲಿ 3 ಹಾಗೂ 2017 ರಲ್ಲಿ 2 ಅಪಘಾತಗಳು ಸಂಭವಿಸಿದ್ದು, ಒಟ್ಟು 14 ಮಂದಿ ಸಾವನ್ನಪ್ಪಿ ದ್ದಾರೆ. ಈ ಮೈಸೂರು-ಬಂಟ್ವಾಳ (ರಾಷ್ಟ್ರೀಯ ಹೆದ್ದಾರಿ 88) ರಸ್ತೆಯನ್ನು ಜಲದರ್ಶಿನಿ ಬಳಿ ವೈಜ್ಞಾನಿಕವಾಗಿ ನೇರ ರಸ್ತೆಯಾಗಿ ಮಾರ್ಪಡಿಸಿ ಅಪಘಾತಗಳನ್ನು ತಪ್ಪಿಸ ಬೇಕೆಂದು 2015ರ ಮೇ 16ರಂದೇ ಅಂದಿನ ಸಂಚಾರ ವಿಭಾಗದ ಎಸಿಪಿ ಕಚೇರಿಯಿಂದ ಮೈಸೂರು ವಿಭಾಗದ ರಾಷ್ಟ್ರೀಯ ಹೆದ್ದಾರಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿ ನಿಯರ್‍ಗೆ ಪತ್ರ ಬರೆಯಲಾಗಿತ್ತು. ಜಲದರ್ಶಿನಿ ಬಳಿ ತೀವ್ರ ತಿರುವಿನಿಂದ ಕೂಡಿದ್ದು, ವಾಲ್ಮೀಕಿ ರಸ್ತೆ ಜಂಕ್ಷನ್ ಕಡೆಗೆ ಇಳಿಜಾರಾದ ರಸ್ತೆಯಾಗಿರುತ್ತದೆ. ಅದರಿಂದಾಗಿ ರಸ್ತೆಯಲ್ಲಿ ವಾಹನಗಳು ಅತೀ ವೇಗವಾಗಿ ಸಂಚರಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಎಸಿಪಿ ಅವರು ಪತ್ರದಲ್ಲಿ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »