ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿರುದ್ಧ ಕಾನೂನು ಸಮರ: ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಿರ್ಧಾರ
ಮೈಸೂರು

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿರುದ್ಧ ಕಾನೂನು ಸಮರ: ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಿರ್ಧಾರ

June 24, 2018

ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸುವ ಮೂಲಕ ರಾಜ್ಯದ ಹಿತಕ್ಕೆ ಧಕ್ಕೆ ಆಗಿದ್ದು, ನಮ್ಮ ಹಕ್ಕನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಇಂದಿಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡಳಿಯ ರಚನಾ ಮಾರ್ಗ ಸೂಚಿಯಲ್ಲೇ ಲೋಪ-ದೋಷ ಇವೆ. ಇದನ್ನು ಸರಿಪಡಿಸುವಂತೆ ನಾನೇ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ, ನೀರಾವರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿರುವುದಲ್ಲದೆ, ಪತ್ರವನ್ನೂ ನೀಡಲಾಗಿದೆ.

ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿ ಸಲು ನೀರಾವರಿ ತಜ್ಞರು ಮತ್ತು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಮಾಲೋಚಿಸಿ, ತೀರ್ಪಿನಲ್ಲಿ ಇರುವ ಲೋಪವನ್ನು ಮುಂದಿಟ್ಟು ಕಾನೂನು ಹೋರಾಟ ಮಾಡುತ್ತೇವೆ.

ಅಂತರ ರಾಜ್ಯ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಒಕ್ಕೂಟ ವ್ಯವಸ್ಥೆಗೆ ಅನುಗುಣವಾಗಿ ಮಾರ್ಗಸೂಚಿ ರಚನೆ ಆಗಬೇಕು. ನಮ್ಮ ವಾದಕ್ಕೆ ಕೇಂದ್ರ ಸ್ಪಂದಿಸಿಲ್ಲ. ಮಂಡಳಿ ರಚನೆಗೆ ನಮ್ಮ ವಿರೋಧ ವಿಲ್ಲ. ಆದರೆ, ಅದರಲ್ಲಿನ ಲೋಪ-ದೋಷ ಸರಿಪಡಿಸಿ ಎಂಬುದು ನಮ್ಮ ವಾದವಾಗಿದೆ ಎಂದು ಸ್ಪಷ್ಟಪಡಿಸಿದರು. ಮಂಡಳಿ ರಚನೆಯ ಅಧಿಸೂಚನೆ ಹೊರ ಬಿದ್ದ ತಕ್ಷಣವೇ ಕೇಂದ್ರ ನೀರಾವರಿ ಸಚಿವರನ್ನು ಸಂಪರ್ಕಿಸಿ, ನಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಭೇಟಿಗೂ ಸಮಯಾವಕಾಶ ಕೋರಿದ್ದೇನೆ. ಅವರು ಇನ್ನೆರಡು ವಾರದಲ್ಲಿ ಸಮಯಾವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ. ನ್ಯಾಯಾ ಲಯದ ತೀರ್ಪಿಗೆ ನಾವು ತಲೆ ಬಾಗುತ್ತೇವೆ.

ಮಂಡಳಿ ರಚನೆಯಲ್ಲಿನ ಲೋಪ ಮರು ಪರಿಶೀಲಿಸುವಂತೆ ಮನವಿ ಮಾಡಲಾಗು ವುದು, ನಾವು ಕಾನೂನಿಗೆ ಗೌರವ ಕೊಡು ವುದನ್ನು ನಮ್ಮ ದೌರ್ಬಲ್ಯ ಎಂದು ತಿಳಿಯ ಬೇಡಿ. ಮಂಡಳಿ ರಚನೆಗೂ ಮುನ್ನ ಸಂಸತ್‍ನ ಉಭಯ ಸದನಗಳಲ್ಲೂ ಚರ್ಚೆ ನಡೆಯ ಬೇಕಿತ್ತು, ಆದರೆ ಅದಕ್ಕೆ ಅವಕಾಶ ನೀಡದೆ, ತರಾತುರಿಯಲ್ಲಿ ಕೇಂದ್ರ ಸರ್ಕಾರ ನಿರ್ವಹಣಾ ಮಂಡಳಿ ರಚನೆ ಮಾಡುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದರು.

Translate »