ನಾಳೆ ಮೈಸೂರಲ್ಲಿ ಬೃಹತ್ ಸಾಮೂಹಿಕ ಯೋಗ ಪ್ರದರ್ಶನ
ಮೈಸೂರು

ನಾಳೆ ಮೈಸೂರಲ್ಲಿ ಬೃಹತ್ ಸಾಮೂಹಿಕ ಯೋಗ ಪ್ರದರ್ಶನ

June 20, 2019

ಮೈಸೂರು: ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21 ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಎಂಆರ್‍ಸಿ ಆವ ರಣದಲ್ಲಿ ಮೆಗಾ ಸಾಮೂಹಿಕ ಯೋಗ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಗಿನ್ನಿಸ್ ದಾಖಲೆಗೆ ನೋಂದಣಿ ಮಾಡಿಲ್ಲ ವಾದರೂ, ಆರೋಗ್ಯಕ್ಕಾಗಿ ಯೋಗ ಪರಿಕ ಲ್ಪನೆಯೊಂದಿಗೆ `ಕೋಮು ಸೌಹಾರ್ದತೆ’ ಘೋಷದಲ್ಲಿ ಸಾಮೂಹಿಕ ಯೋಗ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಸುಮಾರು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ.

ಮೈಸೂರಿನ ಡಿಸಿ ಕಚೇರಿ ಸಭಾಂಗಣ ದಲ್ಲಿ ಯೋಗ ಪ್ರದರ್ಶನದ ಸಿದ್ಧತೆ ಕುರಿತಂತೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಯುಷ್ ಇಲಾಖೆ, ಮೈಸೂರು ಮಹಾ ನಗರ ಪಾಲಿಕೆ, ಮುಡಾ, ಮೈಸೂರು ನಗರ ಪೊಲೀಸ್, ಮೈಸೂರು ಯೋಗ ಒಕ್ಕೂಟ ಹಾಗೂ ಇನ್ನಿತರ ಯೋಗ ತರಬೇತಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ 8 ಗಂಟೆವರೆಗೆ ಬೃಹತ್ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದೆ.

ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನ ಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಮೈಸೂರಿನ ಬಿಷಪ್ ರೆವರೆಂಡ್ ಡಾ.ಕೆ. ಎ.ವಿಲಿಯಂ ಹಾಗೂ ಮೈಸೂರಿನ ಸರ್ಖಾಜಿ ಜನಾಬ್ ಮೊಹಮ್ಮದ್ ಉಸ್ಮಾನ್ ಷರಿಫ್ ಅವರುಗಳು ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ, ಸಂಸದ ಪ್ರತಾಪ್‍ಸಿಂಹ, ಮೇಯರ್ ಪುಷ್ಪಲತಾ ಜಗನ್ನಾಥ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳೂ ಭಾಗವಹಿಸುವರು.

ಈ ಮೆಗಾ ಕಾರ್ಯಕ್ರಮಕ್ಕೆ ಪ್ರವಾಸೋ ದ್ಯಮ ಇಲಾಖೆಯಿಂದ 60 ಲಕ್ಷ, ಆಯುಷ್ ಇಲಾಖೆಯಿಂದ 2 ಲಕ್ಷ ರೂ. ಅನುದಾನ ನೀಡಿದ್ದು, ಗಣಪತಿ ಸಚ್ಚಿದಾನಂದ ಆಶ್ರಮ ದಿಂದ 15 ಲಕ್ಷ ರೂ.ಗಳ ಪ್ರಾಯೋಜಕತ್ವ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು.

ಶಿಕ್ಷಣ ಇಲಾಖೆ, ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳು, ಕಾಲೇಜು ಶಿಕ್ಷಣ ಇಲಾಖೆ ಯಿಂದ 52,000 ವಿದ್ಯಾರ್ಥಿಗಳು, ಮೈಸೂರು ವಿಶ್ವವಿದ್ಯಾನಿಲಯ, ಎನ್‍ಎಸ್‍ಎಸ್, ಎನ್‍ಸಿಸಿಯಿಂದ 10,000 ಮಂದಿ, ಇನ್ ಫೋಸಿಸ್ ಸೇರಿದಂತೆ ವಿವಿಧ ಕಂಪನಿ, ಕೈಗಾರಿಕೆಗಳು, ಸರ್ಕಾರಿ ಇಲಾಖಾ ಸಿಬ್ಬಂದಿಗಳು, ಸಾರ್ವಜನಿಕರು ಸುಮಾರು 80 ರಿಂದ 1 ಲಕ್ಷ ಮಂದಿ ಪಾಲ್ಗೊಂಡು ಯೋಗ ಪ್ರದರ್ಶನ ನೀಡುವರೆಂದು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಬಸ್ ವ್ಯವಸ್ಥೆ : ಶುಕ್ರವಾರ ಎಂಆರ್‍ಸಿಗೆ ಮೈಸೂರಿನ ವಿವಿಧ ಭಾಗಗಳಿಂದ ಕೆಎಸ್ ಆರ್‍ಟಿಸಿಯ ನಗರ ಬಸ್‍ಗಳು ಮುಂಜಾನೆ 5 ಗಂಟೆಯಿಂದ ಸಂಚರಿಸಲಿದ್ದು, ಟಿಕೆಟ್ ಪಡೆದು ಸಾರ್ವಜನಿಕರು ಬರಬೇಕು, ಉಚಿತ ಪ್ರಯಾಣ ಸೇವೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ನೀರು ತನ್ನಿ : ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವವರಿಗೆ ಎಂಆರ್‍ಸಿ ಆವರಣ ದಲ್ಲಿ ಬೆಳಗಿನ ಉಪಹಾರದ ವ್ಯವಸ್ಥೆ ಮಾಡ ಲಾಗಿದೆ. ಆದರೆ ಪ್ಲಾಸ್ಟಿಕ್ ನಿಷೇಧವಿರುವ ಕಾರಣ. ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಜನರು ಕುಡಿಯುವ ನೀರನ್ನು ಮನೆಯಿಂದಲೇ ತರಬೇಕು.

ಜಿಲ್ಲಾಡಳಿತದ ವತಿಯಿಂದಲೂ ಪೇಪರ್ ಗ್ಲಾಸ್‍ಗಳಲ್ಲಿ 25 ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಅಭಿರಾಂ ಜಿ.ಶಂಕರ್ ತಿಳಿಸಿದರು.

ಕೊಡೆ ತನ್ನಿ : ಜೂ 21ರಂದು ತುಂತುರು ಮಳೆ ಬರುವ ಸಾಧ್ಯತೆ ಇರುವು ದರಿಂದ ಸಾರ್ವಜನಿಕರು ಜೊತೆಯಲ್ಲಿ ಕೊಡೆಯನ್ನು ತರುವಂತೆ ಕೋರಲಾಗಿದೆ. ಸ್ಥಳದಲ್ಲಿ 11 ಕಡೆ 154 ಶೌಚಾಲಯಗಳು, ಡಸ್ಟ್‍ಬಿನ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ ಯಲ್ಲದೆ ಆಂಬುಲೆನ್ಸ್‍ಗಳು, ವೈದ್ಯರ ತಂಡಗಳೂ ಕಾರ್ಯನಿರ್ವಹಿಸಲಿದ್ದು, ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ನುಡಿದರು.

ಹಾವು ಹಿಡಿಯುವವರು : ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವುದ ರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಎಂಆರ್‍ಸಿ ಆವರಣದಲ್ಲಿ ಹಾವು ಹಿಡಿ ಯುವವರನ್ನು ನಿಯೋಜಿಸಲಾಗಿದೆ. ಇಂದು ಬೆಳಿಗ್ಗೆಯೂ ಸ್ಥಳದಲ್ಲಿ ಉರಗ ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಜ್ಯೋತಿ, ಮೈಸೂರು ಮಹಾನಗರ ಪಾಲಿಕೆ ಕಮೀಷ್ನರ್ ಶಿಲ್ಪಾ ನಾಗ್, ಡಿಸಿಪಿ ಎಂ.ಮುತ್ತುರಾಜ್, ಎಸಿಪಿ ಗಳಾದ ಹೆಚ್.ಎಸ್.ಗಜೇಂದ್ರ ಪ್ರಸಾದ್, ಜಿ.ಎನ್.ಮೋಹನ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹೆಚ್.ವಿ. ಜನಾರ್ಧನ್, ವಾರ್ತಾ ಮತ್ತು ಪ್ರಚಾರ ಇಲಾಖೆ ಉಪನಿರ್ದೇಶಕ ಆರ್.ರಾಜು, ಜೆಎಸ್‍ಎಸ್ ಯೋಗ ಸಂಸ್ಥೆಯ ಶ್ರೀಹರಿ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವಾಹನ ಸಂಚಾರಕ್ಕೆ ಬದಲಿ ಮಾರ್ಗ, ಪಾರ್ಕಿಂಗ್ ವ್ಯವಸ್ಥೆ
ಮೈಸೂರು: ಜೂನ್ 21ರಂದು ಮೈಸೂರಿನ ಎಂಆರ್‍ಸಿ ಆವ ರಣದಲ್ಲಿ ನಡೆಯಲಿರುವ ಸಾಮೂಹಿಕ ಯೋಗ ಪ್ರದರ್ಶನದ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 5 ರಿಂದ 10 ಗಂಟೆವರೆಗೆ ಕೆಲ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿ ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿದೆ.

ಸಂಚಾರ ನಿರ್ಬಂಧ: ಯೋಗ ಪ್ರದರ್ಶನದಲ್ಲಿ ಭಾಗವಹಿಸುವವರ ವಾಹನ ಹೊರತುಪಡಿಸಿ ನಂಜನಗೂಡು ರಸ್ತೆಯ ಜೆಎಸ್‍ಎಸ್ ಕಾಲೇಜು ಜಂಕ್ಷನ್‍ನಿಂದ ಟ್ರಕ್ ಟರ್ಮಿನಲ್ ಮೂಲಕ ರೇಸ್‍ಕೋರ್ಸ್‍ವರೆಗೆ, ಕುರುಬಾರಹಳ್ಳಿ ವೃತ್ತದಿಂದ ರೇಸ್ ಕೋರ್ಸ್‍ವರೆಗೆ ಹಾಗೂ ಎಂ.ಜಿ. ರಸ್ತೆಯ ನಂಜನಗೂಡು ರಸ್ತೆ ಅಂಡರ್ ಬ್ರಿಡ್ಜ್‍ನಿಂದ ರೇಸ್‍ಕೋರ್ಸ್‍ವರೆಗೆ ಸಾರ್ವಜನಿಕರ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಬದಲಿ ಮಾರ್ಗ: ನಂಜನಗೂಡು ರಸ್ತೆಯ ಜೆಎಸ್‍ಎಸ್ ಕಾಲೇಜು ಜಂಕ್ಷನ್‍ನಿಂದ ಟ್ರಕ್ ಟರ್ಮಿನಲ್ ಕಡೆಗೆ ಹೋಗುವ ವಾಹನಗಳು ನಂಜನಗೂಡು ರಸ್ತೆಯಲ್ಲೇ ಮುಂದೆ ಸಾಗಬೇಕು. ಲಲಿತ ಮಹಲ್ ಕಡೆಯಿಂದ ಬರುವ ವಾಹನಗಳು ಕುರುಬಾರಹಳ್ಳಿ ಸರ್ಕಲ್ ಬಳಿ ಬಲಕ್ಕೆ ತಿರುಗಿ ವಾಯು ವಿಹಾರ ರಸ್ತೆ ಮೂಲಕ ಎಂ.ಜಿ.ರಸ್ತೆ ತಲುಪಿ ಮುಂದೆ ಸಾಗಬೇಕು. ಮಿರ್ಜಾ ರಸ್ತೆಯಿಂದ ಮೃಗಾಲಯ ಕಡೆಗೆ ಹೋಗುವ ವಾಹನಗಳು, ನಜರ್‍ಬಾದ್ ಸರ್ಕಲ್ ಮೂಲಕ ಮುಂದೆ ಸಾಗಬೇಕು. ತಿ.ನರಸೀಪುರ ಕಡೆಗೆ ಹೋಗಬೇಕಾದ ಸಾರಿಗೆ ಬಸ್ಸುಗಳು ಹಾರ್ಡಿಂಜ್ ಸರ್ಕಲ್, ಮಿರ್ಜಾ ರಸ್ತೆ, ವಸಂತ ಮಹಲ್ ಜಂಕ್ಷನ್, ನಜರ್‍ಬಾದ್, ವಾಯು ವಿಹಾರ ರಸ್ತೆ ಮೂಲಕ ಲಲಿತ ಮಹಲ್ ರಸ್ತೆ ತಲುಪಿ ಮುಂದೆ ಸಾಗಬೇಕು.

ವಾಹನ ನಿಲುಗಡೆ ಸ್ಥಳ: ರಾಣಾ ಪ್ರತಾಪ್ ಸಿಂಹ ಸರ್ಕಲ್ ಬಳಿಯ ಹಾಗೂ ಉತ್ತರ ದ್ವಾರದಿಂದ ಪ್ರವೇಶಿಸುವವರು ಲಲಿತ ಮಹಲ್ ರಸ್ತೆಯ ಕಾರಂಜಿ ಕೆರೆ ಆವರಣ, ಎಟಿಐ ಆವರಣ, ಲೋಕರಂಜನ್ ರಸ್ತೆಯಲ್ಲಿರುವ ಸರ್ಕಲ್ ಮೈದಾನ ದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಬೇಕು. ಟ್ರಕ್ ಟರ್ಮಿನಲ್ ಮೂಲೆ ಹಾಗೂ ಗಾಲ್ಫ್ ಕ್ಲಬ್ ದ್ವಾರದಿಂದ ಪ್ರವೇಶಿಸುವವರು ದಸರಾ ವಸ್ತುಪ್ರದರ್ಶನ ಆವರಣ, ಮಾಲ್ ಆಫ್ ಮೈಸೂರ್ ಪಾರ್ಕಿಂಗ್ ಸ್ಥಳ, ದೊಡ್ಡಕೆರೆ ಮೈದಾನದ ಎದುರಿನ ಫುಟ್ಬಾಲ್ ಮೈದಾನದಲ್ಲಿ, ಪಶ್ಚಿಮ ದ್ವಾರದಿಂದ ಪ್ರವೇಶಿಸುವವರು ನಂಜನಗೂಡು ರಸ್ತೆ ಬದಿ, ಜೆಎಸ್‍ಎಸ್ ಕಾಲೇಜು ಆವರಣ ಹಾಗೂ ಚಾಮುಂಡಿಬೆಟ್ಟದ ಪಾದದ ಬಳಿ ಹಾಗೂ ದಕ್ಷಿಣ ದ್ವಾರದಿಂದ ಪ್ರವೇಶಿಸುವವರು ದ್ವಾರದ ಒಳ ಆವರಣದಲ್ಲಿರುವ ಖಾಲಿ ಜಾಗ ಹಾಗೂ ಸಿಎಆರ್‍ಗಳನ್ನು ನಿಲುಗಡೆ ಮಾಡಬೇಕೆಂದು ಸಂಚಾರ ವಿಭಾಗದ ಎಸಿಪಿ ಜಿ.ಎನ್. ಮೋಹನ್ ತಿಳಿಸಿದ್ದಾರೆ.

ಸೂಕ್ತ ಭದ್ರತಾ ವ್ಯವಸ್ಥೆ
ಮೈಸೂರು: ಜೂನ್ 21ರಂದು ಮೈಸೂ ರಿನ ಎಂಆರ್‍ಸಿ ಆವರಣದಲ್ಲಿ ನಡೆಯಲಿರುವ ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮಕ್ಕೆ ಭಾರೀ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಎಂ. ಮುತ್ತುರಾಜ್ ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ನಾಲ್ಕು ಕೆಎಸ್‍ಆರ್‍ಪಿ ತುಕಡಿ, 12 ಸಿಎಆರ್, 30 ಕಮಾಂಡೋ ಪಡೆ ಸಿಬ್ಬಂದಿ, 20 ಅಶ್ವಾರೋಹಿ ದಳದ ಪೊಲೀಸರು ಸೇರಿ ಒಟ್ಟು 685 ಮಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗುವುದು ಎಂದರು.

ಎಂಆರ್‍ಸಿ ಆವರಣದಲ್ಲಿ 5 ಪ್ರವೇಶ ದ್ವಾರಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಆ ಪೈಕಿ ದಕ್ಷಿಣ ದ್ವಾರದಲ್ಲಿ ಗಣ್ಯರು, ಅತೀ ಗಣ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳು ಪ್ರವೇಶಿಸಬಹು ದಾಗಿದೆ. ಪ್ರತಿ ಗೇಟ್‍ನಲ್ಲಿ ಮೆಟಲ್ ಡೋರ್ ಡಿಟೆಕ್ಟರ್‍ಗಳನ್ನು ಅಳವಡಿಸಿ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಲಾಗುವುದು ಎಂದು ತಿಳಿಸಿದರು. ನಾಲ್ಕು ವಿಧ್ವಂಸಕ ಕೃತ್ಯಗಳ ನಿಗ್ರಹ ತಂಡ, ಶ್ವಾನ ದಳದ ಸಿಬ್ಬಂದಿಗಳಿಂದ ಗುರುವಾರ ರಾತ್ರಿ ಮತ್ತು ಶುಕ್ರವಾರ ರಾತ್ರಿ ಮತ್ತು ಶುಕ್ರವಾರ ಬೆಳಿಗ್ಗೆ ಸ್ಥಳದಲ್ಲಿ ಸಂಪೂರ್ಣ ತಪಾಸಣೆ ನಡೆಸಿ ಕಾರ್ಯಕ್ರಮ ಮುಗಿಯುವವರೆಗೂ ಕಾರ್ಯಾಚರಣೆ ನಡೆಸಿ ಎಚ್ಚರ ವಹಿಸಲಾಗುವುದು ಎಂದು ಮುತ್ತುರಾಜ್ ತಿಳಿಸಿದರು.

ಮನೆಗಿಬ್ಬರು ಪಾಲ್ಗೊಳ್ಳಿ: ಶಾಸಕ ರಾಮದಾಸ್ ಮನವಿ
ಮೈಸೂರು: 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಲು ಮೈಸೂರಿನ ಪ್ರತಿಯೊಂದು ಮನೆಯಿಂದ ಕನಿಷ್ಠ ಇಬ್ಬರು ಭಾಗವಹಿಸುವಂತೆ ಶಾಸಕ ಎಸ್.ಎ. ರಾಮದಾಸ್ ಮನವಿ ಮಾಡಿದ್ದಾರೆ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಯುಷ್ ಇಲಾಖೆ ಹಾಗೂ ಮೈಸೂರಿನ ವಿವಿಧ ಯೋಗ ಸಂಸ್ಥೆಗಳ ವತಿಯಿಂದ ಜೂ.21 ರಂದು ರೇಸ್ ಕೋರ್ಸ್ ಆವರಣದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮೈಸೂರಿನ ನಾಗರಿಕರು ಭಾಗವಹಿಸುವ ಮೂಲಕ ‘ಆರೋಗ್ಯ ಮೈಸೂರು’ ಮಾಡಲು ಕೋರಿದ್ದಾರೆ.

Translate »