- 15ಕ್ಕೂ ಅಧಿಕ ಕಾಂಗ್ರೆಸ್ ಶಾಸಕರಿಂದ ಬಂಡಾಯ ಕಹಳೆ
- ದಿನವಿಡೀ ಪ್ರತ್ಯೇಕ ಸಭೆ: ನಾಲ್ಕು ಪಂಗಡಗಳಾಗಿರುವ ಅತೃಪ್ತರು
- ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಮೈಸೂರು: ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಕೂಟ ಸರ್ಕಾರ ಟೇಕಾಫ್ ಆಗುವ ಮುನ್ನವೇ ಕಾಂಗ್ರೆಸ್‍ನಲ್ಲಿ ಭಾರೀ ಬಂಡಾಯವೆದ್ದಿದ್ದು, ಸರ್ಕಾರದ ಅಸ್ತಿತ್ವಕ್ಕೆ ಸವಾಲಾಗಿ ಪರಿಣಮಿಸಿದೆ. ಬುಧವಾರ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆಯೇ ಸಚಿವ ಸ್ಥಾನ ವಂಚಿತ ಕಾಂಗ್ರೆಸ್ ಪ್ರಭಾವಿ ಶಾಸಕರು ತೀವ್ರ ಆಕ್ರೋಶಗೊಂಡಿದ್ದಾರೆ. ಪ್ರತ್ಯೇಕ ಸಭೆ ಸೇರುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಶಾಸಕರಂತೂ ಕೆರಳಿ ಕೆಂಡವಾಗಿದ್ದಾರೆ. ಇವರಲ್ಲಿ ಬಹುಪಾಲು ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು ಎಂಬುದು ವಿಶೇಷ.
ಬೆಂಗಳೂರು ಮತ್ತು ಉತ್ತರ ಕರ್ನಾಟಕದಲ್ಲಿ ಅತೃಪ್ತ ಶಾಸಕರು ಸಭೆ ಮೇಲೆ ಸಭೆ ನಡೆಸುತ್ತಿ ದ್ದರೂ, ಅವರನ್ನು ಸಮಾಧಾನಪಡಿಸುವ ಗೋಜಿಗೇ ಹೋಗದ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ತಾವು ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರಕ್ಕೆ ತೆರಳಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದರಲ್ಲಿ ನಿರತರಾಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್‍ನಲ್ಲಿ ಅತೃಪ್ತರನ್ನು ಸಮಾಧಾನಪಡಿ ಸುವವರೇ ಇಲ್ಲದಂತಾಗಿದೆ. ಕೆಲವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಕೆಪಿಸಿಸಿ ಅಧ್ಯಕ್ಷರೂ ಆದ
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನೂ ಕೆಲವರು ಹೈಕಮಾಂಡ್ ವಿರುದ್ಧವೂ ದನಿಎತ್ತಿದ್ದಾರೆ. ಇಂದು ಬೆಳಿಗ್ಗೆ ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿದ ಸಚಿವ ಸ್ಥಾನ ವಂಚಿತ ಮಾಜಿ ಸಚಿವ ಎಂ.ಬಿ.ಪಾಟೀಲ್ ಗಳಗಳನೆ ಅತ್ತಿದ್ದಾರೆ. ನಾವು ನಿಮ್ಮನ್ನೇ ನಂಬಿದ್ದೆವು. ಮೂರೂವರೆ ದಶಕದಿಂದ ಪಕ್ಷವನ್ನು ಕಟ್ಟಿದ್ದೇವೆ. ನಿಮ್ಮ ಸಂಪುಟದಲ್ಲಿ ನೀರಾವರಿ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಈ ಬಾರಿ ಉತ್ತರ ಕರ್ನಾಟಕದಿಂದ ತಮಗೆ ಉಪಮುಖ್ಯಮಂತ್ರಿ ಸ್ಥಾನ ದೊರೆಯಬೇಕಿತ್ತು. ಆದರೆ, ತಮಗೆ ಅನ್ಯಾಯವಾಗಿದೆ. ಇನ್ನು ಕೊಟ್ಟರೂ ಬೇಡ; ನಮ್ಮ ನಡೆ ನಮ್ಮದು ಎಂದು ಹೇಳಿ ಮನೆಯಿಂದ ಹೊರನಡೆದಿದ್ದಾರೆ. ಸಿದ್ದರಾಮಯ್ಯ ಎಷ್ಟೇ ಸಮಾಧಾನ ಮಾಡಿದರೂ ಕಿವಿಗೊಡದ ಎಂ.ಬಿ.ಪಾಟೀಲ್, ನಂತರವೂ ತಮ್ಮ ನಿವಾಸದಲ್ಲಿ ಅತೃಪ್ತರ ಸಭೆ ನಡೆಸಿ, ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್ ಸಹ ಸಚಿವ ಸ್ಥಾನ ವಂಚಿತರಾಗಿದ್ದು, ತಮಗೆ ಸಚಿವ ಸ್ಥಾನ ಕೈತಪ್ಪಲು ಸಿದ್ದರಾಮಯ್ಯ ಕಾರಣ. ಜೊತೆಗೆ ಇದಕ್ಕೆ ಹೆಚ್.ಎಂ.ರೇವಣ್ಣನೂ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಈಗಾಗಲೇ ತಮ್ಮ ಕ್ಷೇತ್ರದ ಎಲ್ಲಾ ಜನಪ್ರತಿನಿಧಿಗಳ ಸಭೆ ನಡೆಸಿದ್ದು, ಹೈಕಮಾಂಡ್ ನಿಲುವು ನೋಡಿಕೊಂಡು ಮುಂದೆ ಅವರ ನಿರ್ಧಾರದಂತೆ ನಡೆಯುತ್ತೇನೆ ಎಂದು ಘೋಷಿಸಿದ್ದಾರೆ.
ಗದಗದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಸಹ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಗೆ ಬಂದ ಈಶ್ವರ ಖಂಡ್ರೆ, ಎಸ್.ಆರ್.ಪಾಟೀಲ್ ಅವರೊಂದಿಗೆ ಚರ್ಚಿಸಿದ ನಂತರ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್.ಕೆ.ಪಾಟೀಲ್, ಬೆವರು ಮಾತ್ರವಲ್ಲ; ರಕ್ತ ಸುರಿಸಿ ಪಕ್ಷ ಕಟ್ಟಿದ್ದೇವೆ. ಆದರೆ, ಸಚಿವ ಸ್ಥಾನ ನೀಡುವಲ್ಲಿ ತೆಗೆದುಕೊಂಡಿರುವಂತಹ ನಿರ್ಣಯ ಬೇಸರ ತಂದಿದೆ. ಪಕ್ಷದ ಹೈಕಮಾಂಡ್ ಕೈಗೊಂಡಿರುವ ನಿರ್ಧಾರವನ್ನು ಪ್ರಶ್ನಿಸಲಾಗುವುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಸತೀಶ್ ಜಾರಕಿಹೊಳಿ, ರೋಷನ್ ಬೇಗ್, ಡಾ.ಸುಧಾಕರ್, ಶಿವಳ್ಳಿ, ರೂಪಾ ಶಶಿಧರ್, ಬಿ.ಎಸ್.ಪಾಟೀಲ್ ಇತರರು ಸಹ ಸಚಿವ ಸ್ಥಾನ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ತಮ್ಮ ಕ್ಷೇತ್ರಗಳ ಮತದಾರರ ಅಭಿಪ್ರಾಯ ಪಡೆದು, ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಪ್ರಕಟಿಸಿದ್ದಾರೆ.
ಕಾರ್ಯಕರ್ತರ ಆಕ್ರೋಶ: ಮತ್ತೊಂದೆಡೆ ತಮ್ಮ ನಾಯಕರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಕಾರ್ಯಕರ್ತರು ಕೂಡ ಸಿಡಿದೆದ್ದಿದ್ದಾರೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ದಾವಣಗೆರೆಯಲ್ಲಿ ತೀವ್ರ ಪ್ರತಿಭಟನೆ ನಡೆದಿದೆ. ಮಾತ್ರವಲ್ಲದೆ ಕೆಪಿಸಿಸಿ ಕಚೇರಿ ಮುಂಭಾಗದಲ್ಲೂ ಪ್ರತಿಭಟನೆ ವ್ಯಕ್ತವಾಗಿದೆ. ಎಂ.ಬಿ.ಪಾಟೀಲ್ ಪ್ರತಿನಿಧಿಸಿರುವ ಬಬಲೇಶ್ವರದಲ್ಲಿ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಬೆಂಗಳೂರಿನಲ್ಲಿ ರಾಮಲಿಂಗಾರೆಡ್ಡಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜು ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಧರಣ ನಡೆಸಿದ್ದಾರೆ. ಗದಗದಲ್ಲೂ ತಮ್ಮ ನಾಯಕ ಹೆಚ್.ಕೆ.ಪಾಟೀಲ್‍ಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.ರೋಷನ್ ಬೇಗ್ ಬೆಂಬಲಿಗರು ಬೆಂಗಳೂರಲ್ಲಿ ಭಾರೀ ಪ್ರತಿಭಟನೆ ನಡೆಸಿದರು.
ಎಂ.ಬಿ.ಪಾಟೀಲ್ ಆಕ್ರೋಶ: ಇಂದು ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾ ಡಿದ ಎಂ.ಬಿ.ಪಾಟೀಲ್, ನಾನು ಎರಡನೇ ದರ್ಜೆ ನಾಯಕನಲ್ಲ. ನನಗೂ ಸ್ವಾಭಿಮಾನ ವಿದೆ. ಇನ್ನು ಮುಂದೆ ಯಾವುದೇ ಸ್ಥಾನಮಾನವನ್ನು ಕೇಳಲ್ಲ ಎಂದು ಅಬ್ಬರಿಸಿದ್ದಾರೆ. ಸತೀಶ್ ಜಾರಕಿಹೊಳಿ ಸಹ ಹೈಕಮಾಂಡ್ ಕೂಡಲೇ ಮಧ್ಯೆ ಪ್ರವೇಶಿಸಿ, ಪರಿಸ್ಥಿತಿ ಯನ್ನು ಅರಿತು ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಕೆಲವರು ತಮಗೆ ಸಚಿವ ಸ್ಥಾನ ಕೈತಪ್ಪಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ತಾವು ಸಿದ್ದರಾಮಯ್ಯ ಅವರೊಂದಿಗೆ ಗುರುತಿಸಿಕೊಂಡಿದ್ದೇ ತಮಗೆ ಮುಳುವಾಯಿತು ಎಂದು ದೂರಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗರು ತಮ್ಮನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣ ಸಲಾಗಿದೆ ಎಂದು ಡಾ.ಪರಮೇಶ್ವರತ್ತ ಬೊಟ್ಟು ಮಾಡಿದರೆ, ಇನ್ನು ಕೆಲವರು ಸಿದ್ದರಾಮಯ್ಯ ಅವರೇ ತಮಗೆ ಬೆಂಬಲ ನೀಡಲಿಲ್ಲ. ನಮ್ಮನ್ನು ಕೈಬಿಟ್ಟರು ಎಂದು ಅವಲತ್ತುಕೊಂಡಿದ್ದಾರೆ.
ಎಲ್ಲರೂ ನನ್ನ ಆಪ್ತರೇ: ಈ ಮಧ್ಯೆ ಬಾದಾಮಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಾಗಿರುವವರು ಹಾಗೂ ಸಚಿವ ಸ್ಥಾನ ಕೈತಪ್ಪಿದವರು ಎಲ್ಲರೂ ನನ್ನ ಆಪ್ತರೇ ಎಂದು ಹೇಳುವ ಮೂಲಕ ದ್ವಂದ್ವತೆ ಮೆರೆದಿದ್ದಾರೆ.
ಎಲ್ಲರೂ ನಮ್ಮ ಪಕ್ಷದವರೇ: ಸಚಿವ ಸಂಪುಟ ವಿಸ್ತರಣೆಯ ವೇಳೆ ಸಚಿವ ಸ್ಥಾನ ವಂಚಿತ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅವರೂ ನಮ್ಮ ಪಕ್ಷದವರೇ. ಅವರನ್ನು ಸಮಾಧಾನಪಡಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.