ಜೆಡಿಎಸ್ ಉಳಿದರೆ ನಮಗೆ ಉಳಿಗಾಲವಿಲ್ಲ
ಮೈಸೂರು

ಜೆಡಿಎಸ್ ಉಳಿದರೆ ನಮಗೆ ಉಳಿಗಾಲವಿಲ್ಲ

July 10, 2018

ಪಕ್ಷದ ಮುಖಂಡರಿಗೆ ಪರಾಜಿತ ಕಾಂಗ್ರೆಸ್ ಮುಖಂಡರ ಅಳಲು

ಬೆಂಗಳೂರು: 37 ಸ್ಥಾನ ಬಂದವರಿಗೆ ಮುಖ್ಯಮಂತ್ರಿ ಹುದ್ದೆ ಕೊಟ್ಟ ನಾಯಕರು 80 ಸ್ಥಾನ ಪಡೆದರೂ ಹಣಕಾಸು ಖಾತೆ ಪಡೆಯಲೂ ಸಾಧ್ಯವಾಗಲಿಲ್ಲ ಎಂಥಾ ಸ್ಥಿತಿ ಬಂದಿದೆ ನೋಡಿ ಎಂದು ಕಾಂಗ್ರೆಸ್ ಶಾಸಕರು, ಪಕ್ಷದ ಹಿರಿಯ ನಾಯಕರ ಮುಂದೆ ಬೇಸರ ವ್ಯಕ್ತಪಡಿಸಿದರು. ಶಾಸಕರ ಭವನದಲ್ಲಿ ಆಯೋಜಿಸಿದ್ದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳ ಸಭೆಯಲ್ಲಿ ಭಾಗಿಯಾದ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಮುಂದೆ ವಿಷಾದ ವ್ಯಕ್ತಪಡಿಸಿದರು.

ಮೈತ್ರಿ ಪಕ್ಷದ ವಿರುದ್ಧ ಆಕ್ರೋಶ: ಸಭೆಯಲ್ಲಿ ಮಾತನಾಡಿದ ಪರಾಜಿತ ಅಭ್ಯರ್ಥಿಗಳು, ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಯಿಂದಾಗಿ ಕಾಂಗ್ರೆಸ್ ಸೋಲನ್ನು ಅನುಭವಿಸಿತು.

ಚುನಾವಣೆಯಲ್ಲಿ ಬಿಜೆಪಿಯವರು ಮಾಡಿದ ಅಕ್ರಮಗಳಿಗೆ ಅಧಿಕಾರಿಗಳೇ ಕೈ ಜೋಡಿಸಿದ್ದರು. ಬಿಜೆಪಿಯವರ ಗೂಢಚಾರರಂತೆ ಅಧಿಕಾರಿಗಳು ಕೆಲಸ ಮಾಡಿದ್ದರು. ಜೆಡಿಎಸ್‍ನವರ ಮುಖಾಂತರವೂ ಈ ಕೆಲಸ ನಡೆದಿದೆ. ಹೀಗಾಗಿ ನಾವು ಸೋಲಬೇಕಾಯ್ತು. ಸಿದ್ದರಾಮಯ್ಯ ನವರ ಟೈಮ್‍ನಲ್ಲಿ ಒಳ್ಳೊಳ್ಳೆ ಕೆಲಸ ಆಗಿದೆ. ಆದರೆ ಬಿಜೆಪಿಯವರ ಕುತಂತ್ರದಿಂದ ನಾವು ಸೋತಿದ್ದೇವೆ. ನಾವು ಸೋಲುವುದಕ್ಕೆ ಕೆಲ ಕಡೆ ನಮ್ಮವರೇ ಕಾರಣ. ಟಿಕೆಟ್ ಸಿಗದವರು ನಮ್ಮ ವಿರುದ್ಧ ಕೆಲಸ ಮಾಡಿದರು. ಇದು ಕಳೆದ ಹಲವು ಚುನಾವಣೆಗಳಲ್ಲಿ ನಡೆದಿದೆ. ಹಲವು ಬಾರಿ ಅಧ್ಯಕ್ಷರ ಗಮನಕ್ಕೂ ಜಿಲ್ಲಾ ಕಾಂಗ್ರೆಸ್‍ನಿಂದ ವರದಿ ಹೋಗಿದೆ. ಆದರೆ ಇದನ್ನು ಬೆಂಗಳೂರಿನಲ್ಲಿ ಕೂತಿರುವವರು ಗಂಭೀರವಾಗಿ ಪರಿಗಣಿಸಲ್ಲ. ಅಂಥವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ಅವರು ಪ್ರತಿ ಚುನಾವಣೆಯಲ್ಲೂ ಈ ಕೆಲಸ ಮಾಡುತ್ತಲೇ ಬರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅಪಪ್ರಚಾರದಿಂದಾಗಿಯೇ ಕಾಂಗ್ರೆಸ್ ಸೋತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಎ.ಮಂಜು, ರೋಹಿಣಿ ಸಿಂಧೂರಿ ವಿಚಾರ ಪ್ರಸ್ತಾಪಿಸಿದರು. ನೀವು ಸಿಎಂ ಆಗಿದ್ದಾಗ ವರ್ಗಾವಣೆಯಾದ ಅಧಿಕಾರಿಯೇ ಈಗ ಮತ್ತೆ ಹಾಸನ ಡಿಸಿ ಆಗಿದ್ದಾರೆ. ಸಿಂಧೂರಿಯನ್ನು ಮತ್ತೆ ಹಾಸನ ಡಿಸಿಯನ್ನಾಗಿಸಿದ್ದು ಎಷ್ಟು ಸರಿ? ಇದು ಕಾಂಗ್ರೆಸ್ ಮುಗಿಸುವ ತಂತ್ರವಲ್ಲದೇ ಮತ್ತಿನ್ನೇನು ಎಂದು ಪ್ರಶ್ನಿಸಿದರು.

ಕ್ಷೇತ್ರ ಕಡೆಗಣನೆಗೆ ಒತ್ತಾಯ: ಜೆಡಿಎಸ್ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸಿ, ಅವರಿಗೆ ಶಕ್ತಿ ತುಂಬಲು ಬಿಡಬೇಡಿ ಎಂದ ಸೋತ ಕಾಂಗ್ರೆಸ್ ಅಭ್ಯರ್ಥಿಗಳು ಈ ಸಂಬಂಧ ಸಿದ್ದರಾಮಯ್ಯ ಮುಂದೆ ಮನವಿ ಸಲ್ಲಿಸಿದರು. ಅಲ್ಲದೇ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ನಯಾಪೈಸೆ ಕೂಡ ಕೊಡಬೇಡಿ ಎಂದು ಇಕ್ಬಾಲ್ಅ ನ್ಸಾರಿ, ಶಿವರಾಜ್ ತಂಗಡಗಿ, ನರೇಂದ್ರ ಸ್ವಾಮಿ ಸೇರಿ ಕೆಲವರು ಸಿದ್ದರಾಮಯ್ಯ ಮೇಲೆ ಒತ್ತಡ ಹಾಕಿದರು.

ಇವಿಎಂ ಮೇಲೆ ಆರೋಪ: ಚುನಾವಣಾ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ತಿಳಿಸಿದ್ದವು. ಆದರೆ ಫಲಿತಾಂಶವೇ ಬೇರೆಯಾಗಿದೆ. ಇದಕ್ಕೆ ಕಾರಣ ಇವಿಎಂ ಕಾರಣ ಎಂದು ಆರೋಪಿಸಿದರು. ಲೋಕಸಭಾ ಚುನಾವಣೆಯಲ್ಲಿ ಇವಿಎಂ ಆಟ ಮುಂದುವರೆದರೆ ಕಾಂಗ್ರೆಸ್ ಸೋಲು ಖಚಿತ ಎಂದು ಸೋತ ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ, ಡಿಸಿಎಂ ಡಾ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ಅ ಭ್ಯರ್ಥಿಗಳ ಸಮಸ್ಯೆ ಆಲಿಸಿದರು.

Translate »