ಬಜೆಟ್ ಅಸಮತೋಲನ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗೆ ನಾಂದಿ: ಶ್ರೀರಾಮುಲು
ಮೈಸೂರು

ಬಜೆಟ್ ಅಸಮತೋಲನ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗೆ ನಾಂದಿ: ಶ್ರೀರಾಮುಲು

July 10, 2018

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್, ಪ್ರಾದೇಶಿಕ ಅಸಮತೋಲನದಿಂದ ಕೂಡಿದೆ. ಇದನ್ನು ಸರಿಪಡಿಸದಿದ್ದರೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಪುಷ್ಠಿ ನೀಡಿದಂತಾಗುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು ಅಭಿಪ್ರಾಯಪಟ್ಟರು.

ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸೋನಾರ್ ಬೀದಿಯ ಅವಧೂತ ಪೀಠದ ಶ್ರೀ ಅರ್ಜುನ್ ಗುರೂಜಿ ಯವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಹೆಚ್‍ಡಿಕೆ ಮಂಡಿಸಿರುವ ಬಜೆಟ್, ಕೇವಲ ಹಳೇ ಮೈಸೂರು ಪ್ರಾಂತ್ಯಕ್ಕೆ ಮಾತ್ರ ಸಿಮಿತವಾಗಿದೆ ಎಂಬ ಭಾವನೆ ಉತ್ತರ ಕರ್ನಾಟಕದ ಜನರಲ್ಲಿ ಮೂಡಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಈ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ತೋರಿಸದಿರುವುದೇ ಈ ಗೊಂದಲಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಹೆಚ್‍ಡಿಕೆ ಮಂಡಿಸಿರುವ ಬಜೆಟ್‍ನಲ್ಲಿ 34 ಸಾವಿರ ಕೋಟಿ ರೈತರ ಬೆಳೆ ಸಾಲಮನ್ನಾ ಘೋಷಣೆಯಾಗಿದೆ. ಆದರೆ, ಇದಕ್ಕಾಗಿ ಮೀಸಲಿಟ್ಟ ಅನುದಾನ ಬರೀ 6,500 ಕೋಟಿ, ಇದರಲ್ಲಿ ಹಿಂದಿನ ಸರ್ಕಾರ ಘೋಷಣೆ ಮಾಡಿದ್ದ ಸಾಲಮನ್ನಾಕ್ಕೆ 4 ಸಾವಿರ ಕೋಟಿ ಮೀಸಲಾಗಿದೆ. ಇನ್ನುಳಿದ ಹಣದಲ್ಲಿ 34 ಸಾವಿರ ಕೋಟಿ ಸಾಲಮನ್ನಾ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಈ ಸಾಲಮನ್ನಾ ಘೋಷಣೆಯಲ್ಲಿ ಸಾಕಷ್ಟು ಗೊಂದಲಗಳಿದ್ದು, ಅನಗತ್ಯ ಷರತ್ತುಗಳಿಂದ ನಿಜವಾದ ರೈತರಲ್ಲಿ ಗೊಂದಲ ಶುರುವಾಗಿದೆ ಎಂದು ಟೀಕಿಸಿದರು.

ಈ ಬಜೆಟ್ ಮಂಡನೆಯಿಂದಾಗಿ ಸಮ್ಮಿಶ್ರ ಸರ್ಕಾರದ ನಾಯಕರ ನಡುವೆ ಸಾಕಷ್ಟು ಗೊಂದಲಗಳಿವೆ. ಇದನ್ನು ಸರಿಪಡಿಸಲು ಸಾಧ್ಯವಾಗದಷ್ಟು ಕಂದಕವಿರುವಾಗ ಇಂತಹ ಬೃಹತ್ ಮಟ್ಟದ ಸಾಲಮನ್ನಾ ಯೋಜನೆ ಸರಿಯಾಗಿ ಅನುಷ್ಠಾನವಾಗುವುದಿಲ್ಲ ಎಂಬ ಭಾವನೆ ಜನರಲ್ಲಿದೆ. ಈ ಕಾರಣದಿಂದಾಗಿ ಸಮ್ಮಿಶ್ರ ಸರ್ಕಾರ ಆದಷ್ಟು ಬೇಗ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ಮಾತು ತಪ್ಪಿದ ಹೆಚ್‍ಡಿಕೆ: ಚುನಾವಣಾ ಸಂದರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿ ರೈತರ ಸಂಪೂರ್ಣ(ಷರತ್ತು ರಹಿತ)ಸಾಲಮನ್ನಾ, ಜೊತೆಗೆ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ, ನೇಕಾರರು, ಮೀನುಗಾರರ ಸಾಲಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದರು. ಅಲ್ಲದೆ, ವೃದ್ಧರು, ವಿಧವೆಯರು ಸೇರಿದಂತೆ ಇತರೆ ಬಡವರಿಗೆ 6 ಸಾವಿರಕ್ಕೂ ಹೆಚ್ಚು ಮಾಸಾಶನ ನೀಡುವುದಾಗಿ ಘೋಷಿಸಿದ್ದರು. ಅದರ ಬಗ್ಗೆ ಈ ಬಜೆಟ್‍ನಲ್ಲಿ ಉಲ್ಲೇಖವಿಲ್ಲ. ಇವೆಲ್ಲಾ ನೋಡಿದರೆ, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತು ತಪ್ಪಿದ್ದಾರೆ ಅನ್ನಿಸುತ್ತದೆ ಎಂದರು.

ವಿಶ್ವಾಸವಿಲ್ಲದ ಪ್ರಣಾಳಿಕೆ: 2018ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪ್ರಣಾಳಿಕೆಯಲ್ಲಿ ರೈತರು, ಸ್ರೀಶಕ್ತಿ ಸ್ವ ಸಹಾಯ ಸಂಘಗಳು, ನೇಕಾರರು, ಮೀನುಗಾರರು ಸೇರಿದಂತೆ ಇತರೆ ಸಹಕಾರಿ ಸಂಘ-ಸಂಸ್ಥೆಗಳ ಸಾಲಮನ್ನಾ ಮಾಡುವುದಾಗಿ ಪ್ರಕಟಿಸಿದ್ದರು. ಅವರು, ಅಧಿಕಾರಕ್ಕೆ ಬಂದ ಮೇಲೆ ನಡೆದುಕೊಳ್ಳುವ ರೀತಿ ನೋಡಿದರೆ, ಈ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಜಾರಿಗೊಳಿಸುವುದು ಅನುಮಾನವಾಗಿದೆ. ಅಂದರೆ, ಅವರು ಚುನಾವಣೆ ಸಂದರ್ಭದಲ್ಲಿ ಹೊರತಂದಿದ್ದ ಪ್ರಣಾಳಿಕೆ ಅಂಶಗಳು ಸುಳ್ಳಿನಿಂದ ಕೂಡಿದೆ ಎಂಬುದು ಜನರಿಗೆ ಮನವರಿಕೆಯಾಗಿದೆ ಎಂದು ಜರಿದರು.

ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ: 2019ರ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ಆದರೆ, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್‍ಡಿಎ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮೋದಿ ಅಲೆಯಲ್ಲಿ ಎಲ್ಲಾ ಮೈತ್ರಿ ಪಕ್ಷಗಳು ಕೊಚ್ಚಿ ಹೋಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಬಂದೇ ಬರುತ್ತದೆ:2018ರ ವಿಧಾನ ಸಭಾ ಚುನಾವಣೆಯಲ್ಲಿ ಬಿಎಸ್‍ವೈ ನೇತೃತ್ವದಲ್ಲಿ ಬಿಜೆಪಿ ಪಕ್ಷ 104 ಸ್ಥಾನಗಳನ್ನು ಪಡೆದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಈಗಾಗಲೇ ಸಮ್ಮಿಶ್ರ ಸರ್ಕಾರದಲ್ಲಿ ಎರಡು ಪಕ್ಷದ ನಾಯಕರ ಗೊಂದಲದಿಂದಾಗಿ ಕಾರ್ಯಾಂಗ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ ಎಂದರು.

ಗುರೂಜಿ ಭೇಟಿ ಕುತೂಹಲ!

ಮೈಸೂರು:  ಅವಧೂತ ಪೀಠದ ಶ್ರೀ ಅರ್ಜುನ್ ಗುರೂಜಿ ಅವರನ್ನು ಮಾಜಿ ಸಚಿವ, ಶಾಸಕ ಶ್ರೀರಾಮುಲು ಸೋಮವಾರ ಭೇಟಿ ಮಾಡಿ, 30 ನಿಮಿಷಗಳ ಕಾಲ ರಹಸ್ಯ ಮಾತುಕತೆ ನಡೆಸಿದರು.

ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಸೋನಾರ್ ಬೀದಿಯಲ್ಲಿರುವ ಅವಧೂತ ಪೀಠದ ಶ್ರೀ ಅರ್ಜುನ್ ಗುರೂಜಿಯವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು.ಗುರೂಜಿ ಅವರ ಭೇಟಿಗೆ ಯಾವುದೇ ವಿಶೇಷ ಅರ್ಥವಿಲ್ಲ ಎಂದೂ ಶ್ರೀರಾಮುಲು ಮಾಧ್ಯಮಗಳಿಗೆ ತಿಳಿಸಿದರೂ ಅಧಿವೇಶನ ನಡೆಯುವ ಸಂದರ್ಭದಲ್ಲಿ ಇವರ ಭೇಟಿ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಭೂಕಂಪನ ಸೂಚನೆ ನೀಡಿದ್ದ ಗೂರೂಜಿ: ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ್ದ ಲಘು ಭೂಕಂಪನದ ಬಗ್ಗೆ ಅರ್ಜುನ್ ಗುರೂಜಿ ಅವರು, ಕೆಲವು ದಿನಗಳ ಹಿಂದೆಯೇ ಮುನ್ಸೂಚನೆ ನೀಡಿದ್ದು, ಆ ಮಾತು ನಿಜವಾಗಿದೆ ಎಂಬ ಸುದ್ದಿ ಶ್ರೀರಾಮುಲು ಭೇಟಿ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ನಡುವೆ ಕೇಳಿಬಂದವು. ಇದೇ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಡಾ.ಮಂಜುನಾಥ್, ಮುಖಂಡರಾದ ಜೋಗಿ ಮಂಜು, ಗೋಕುಲ್, ಶರತ್, ಚಂದ್ರನಾಯಕ, ಮಹಂತೇಶ್,ರಿಷಿ, ಕಿರಣ್, ಚೇತನ್, ರಾಜು ಸೇರಿದಂತೆ ಇತರರಿದ್ದರು.

ಮೈಸೂರು ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸೋನಾರ್ ಬೀದಿಯ ಅವಧೂತ ಪೀಠದ ಶ್ರೀ ಅರ್ಜುನ್ ಗುರೂಜಿಯವರನ್ನು ಮಾಜಿ ಸಚಿವರೂ ಆದ ಶಾಸಕ ಶ್ರೀರಾಮುಲು ಸೋಮವಾರ ಭೇಟಿ ನೀಡಿ, ಆಶೀರ್ವಾದ ಪಡೆದ ದೃಶ್ಯ.

Translate »