ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡದಿದ್ದರೆ ಬಜೆಟ್ ಅಧಿವೇಶನ ನಡೆಯಲು ಬಿಡಲ್ಲ
ಮೈಸೂರು

ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡದಿದ್ದರೆ ಬಜೆಟ್ ಅಧಿವೇಶನ ನಡೆಯಲು ಬಿಡಲ್ಲ

January 24, 2019

ಬೆಂಗಳೂರು: ವಿಧಾನಸೌಧದಲ್ಲಿ ಲಂಚ ಪಡೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ರಾಜೀನಾಮೆ ಪಡೆಯದಿದ್ದರೆ, ಬಜೆಟ್ ಅಧಿವೇಶನ ನಡೆಸಲು ಅವಕಾಶ ನೀಡುವುದಿಲ್ಲ ಎಂದು ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಇಂದಿಲ್ಲಿ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ಗುತ್ತಿಗೆದಾರರಿಂದ ಹಣ ಪಡೆದಿರುವುದು ದಾಖಲೆ ಸಹಿತ ಸಿಕ್ಕಿಬಿದ್ದಿದ್ದರೂ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದರು. ಕಾಣದ ಕೈಗಳು ಸಚಿವರ ರಕ್ಷಣೆಗೆ ಮುಂದಾಗಿವೆ. ಇದಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಣಿಯಬಾರದು. ಭ್ರಷ್ಟರನ್ನು ಸಂಪುಟದಲ್ಲಿ ಇಟ್ಟುಕೊಂಡು ಸರ್ಕಾರವನ್ನು ಹೇಗೆ ನಡೆಸುತ್ತೀರಿ?

ಸಚಿವರ ರಾಜೀನಾಮೆ ಕೇಳಿ, ಇಲ್ಲವೇ ಅವರನ್ನು ಸಂಪುಟದಿಂದ ವಜಾ ಮಾಡಿ, ಕ್ರಮ ಕೈಗೊಳ್ಳದಿದ್ದರೆ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದರು. ರೆಸಾರ್ಟ್ ಸೇರಿದ ಕಾಂಗ್ರೆಸ್ ಶಾಸಕರು ಬಿಜೆಪಿ ವಿರುದ್ಧ ಹೋರಾಟ ನಡೆಸಲು ಸಿದ್ಧವಾಗುತ್ತಿದೆ ಎಂದು ನಾವು ಅಂದುಕೊಂಡರೆ, ಅಲ್ಲಿ ಸೇರಿದವರು ತಾವೇ ಪರಸ್ಪರ ಮಾರಾಮಾರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಸಂಸ್ಕೃತಿ ಅನಾವರಣಗೊಳಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಶಾಸಕರಾದ ಆನಂದ್ ಸಿಂಗ್ ಮತ್ತು ಗಣೇಶ್ ಮಾರಾಮಾರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್‍ನಲ್ಲಿ ಈಗಲೂ ಗೂಂಡಾ ಸಂಸ್ಕೃತಿ ಇದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಟೀಕಿಸಿದರು. ಅಧಿಕಾರಕ್ಕೆ ಬಂದು 7 ತಿಂಗಳಾದರೂ ಸರ್ಕಾರ ಟೇಕಾಫ್ ಆಗಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿರುವ ಅವರು, ಶಾಸಕರಿಗೇ ಇಲ್ಲದ ರಕ್ಷಣೆ ಜನ ಸಾಮಾನ್ಯರಿಗೆ ಎಲ್ಲಿಂದ ಸಿಗುತ್ತದೆ ಎಂದರು. ಪ್ರಕರಣ ಮುಚ್ಚಿ ಹಾಕಲು ಕಾಂಗ್ರೆಸ್ ಮುಂದಾಗಿತ್ತು ಎಂಬುದಕ್ಕೆ ಆ ನಾಯಕರು ನೀಡಿದ ಹೇಳಿಕೆಗಳೇ ಇದಕ್ಕೆ ಸಾಕ್ಷಿಯಾಗಿವೆ ಎಂದರು.

Translate »