ಸ್ಮಾರ್ಟ್ ಎಲ್‍ಇಡಿ ಡಿಸ್ಪ್ಲೇ ಬೋರ್ಡ್ ಅಳವಡಿಕೆ
ಮೈಸೂರು

ಸ್ಮಾರ್ಟ್ ಎಲ್‍ಇಡಿ ಡಿಸ್ಪ್ಲೇ ಬೋರ್ಡ್ ಅಳವಡಿಕೆ

January 24, 2019

ಮೈಸೂರು: ಪ್ರಥಮ ಸ್ವಚ್ಛನಗರಿ ಎಂಬ ಬಿರುದನ್ನು ಮತ್ತೆ ಪಡೆಯಲು ಹವಣಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆಯು, ನಾಗರಿಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಇದೀಗ ಎಲ್‍ಇಡಿ ಡಿಸ್ಪ್ಲೇ ಬೋರ್ಡ್‍ಗಳಿಗೆ ಮೊರೆ ಹೋಗಿದೆ.

ಎಲೆಕ್ಟ್ರಾನಿಕ್ ಎಲ್‍ಇಡಿ ವೀಡಿಯೋ ವಾಲ್ (ಎಲ್‍ಇಡಿ ಡಿಸ್ಪ್ಲೇ ಬೋರ್ಡ್) ಗಳ ಮೂಲಕ ಸ್ವಚ್ಛತೆ ಕಾಪಾಡುವ ಬಗ್ಗೆ ದೃಶ್ಯಗಳನ್ನು ಪ್ರದರ್ಶಿಸಿ ಜನರಿಗೆ ಮನವರಿಕೆ ಮಾಡಲು ನಗರ ಪಾಲಿ ಕೆಯು ಪ್ರಯತ್ನಿಸುತ್ತಿದೆ. ಕೆಆರ್‍ಎಸ್ ರಸ್ತೆಯ ಒಂಟಿ ಕೊಪ್ಪಲು ಸರ್ಕಲ್, ರೈಲು ನಿಲ್ದಾಣ ಬಳಿ ಜಗಜೀವನ ರಾಮ್ ಸರ್ಕಲ್, ರಾಮಸ್ವಾಮಿ ಸರ್ಕಲ್, ಇಟ್ಟಿಗೆಗೂಡಿನ ಮೃಗಾಲಯದ ಎದುರು ಹಾಗೂ ಜಯಚಾಮರಾಜ ಒಡೆಯರ್ ಸರ್ಕಲ್ (ಹಾರ್ಡಿಂಗ್ ಸರ್ಕಲ್)ಗಳಲ್ಲಿ ಈ ಡಿಸ್ಪ್ಲೇ ಬೋರ್ಡ್‍ಗಳನ್ನು ಅಳವಡಿಸಲಾಗಿದೆ.

ಸ್ವಚ್ಛತೆ ಕಾಪಾಡಲು ಅನುಸರಿಸಬೇಕಾದ ಕ್ರಮ, ಪಾಲಿಕೆಯಿಂದ ಕೈಗೊಂಡಿರುವ ಕ್ರಮ, ಪ್ಲಾಸ್ಟಿಕ್ ಬಳಕೆ ನಿಷೇಧ, ಒಣ ಹಾಗೂ ಹಸಿ ಕಸ ವಿಂಗಡಣೆ ವಿಧಾನ, ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಯಂತಹ ಅಂಶಗಳ ಬಗ್ಗೆ ಎಲ್‍ಇಡಿ ಡಿಸ್ಪ್ಲೇ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಗುತ್ತಿದೆ.

16.8×11.8 ಅಡಿ ಅಳತೆಯುಳ್ಳ ಈ ಎಲ್‍ಇಡಿ ಬೋರ್ಡ್ ಗಳಿಗೆ 5 ಕಿ.ವ್ಯಾ. ಸಾಮಥ್ರ್ಯದ ವಿದ್ಯುತ್ ಬಳಸಿ ಹೈಬ್ರೈಟ್ ವರ್ಣರಂಜಿತ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಪ್ರತೀ ದಿನ ಬೆಳಿಗ್ಗೆ 8ರಿಂದ ಮಧ್ಯಾಹ್ನ 1 ಗಂಟೆವರೆಗೆ ಹಾಗೂ ಸಂಜೆ 5.30ರಿಂದ ರಾತ್ರಿ 10 ಗಂಟೆವರೆಗೆ ಎಲ್‍ಇಡಿ ಡಿಸ್ಪ್ಲೇ ಬೋರ್ಡ್‍ಗಳಲ್ಲಿ ಸ್ವಚ್ಛತೆ ಕುರಿತ ಸಂದೇಶಗಳನ್ನೊತ್ತ ದೃಶ್ಯಾವಳಿಗಳು ಬಿತ್ತರಗೊಳ್ಳಲಿವೆ.

14ನೇ ಹಣಕಾಸು ಯೋಜನೆ ಅನುದಾನದಲ್ಲಿ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಡಿ ಪಾಲಿಕೆಯು ಪ್ರತಿ ಎಲ್‍ಇಡಿ ಬೋರ್ಡ್ ಅಳವಡಿಕೆಗೆ 18.8ಲಕ್ಷ ರೂ.ಗಳನ್ನು ಖರ್ಚು ಮಾಡಿದೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದಿಂದ ಸಾಫ್ಟ್‍ವೇರ್ ಚಿಪ್‍ಗಳನ್ನು ಬಳಸಿ ರಿಮೋಟ್ ಆಪರೇಟ್ ಮಾಡಲಾಗುತ್ತೆ. ಅಲ್ಲದೆ, ಮೈಸೂರು ಮಹಾನಗರ ಪಾಲಿಕೆ ಕಂಟ್ರೋಲ್ ರೂಂನಲ್ಲೂ ಸಿಬ್ಬಂದಿ ಈ 5 ಎಲ್‍ಇಡಿ ಡಿಸ್ಪ್ಲೇ ಬೋರ್ಡ್‍ಗಳನ್ನು ನಿರ್ವಹಿಸುವರು. ಪಾಲಿಕೆಯ ಹಿಂದಿನ ಕಮೀಷ್ನರ್ ಜಿ.ಜಗದೀಶ್ ಹಾಗೂ ಹಾಲಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಜಿ.ಆರ್.ಸುರೇಶ್ ಅವರು ಸ್ವಚ್ಛತಾ ಜಾಗೃತಿಗಾಗಿ ಎಲ್‍ಇಡಿ ಡಿಸ್ಪ್ಲೇ ಬೋರ್ಡ್‍ಗಳನ್ನು ಬಳಸಲು ಆಸಕ್ತಿ ತೋರಿದ್ದರು. ಟೆಂಡರ್ ಮೂಲಕ ಸೈಯದ್ ಶಮಿ ಎಂಬುವರಿಗೆ ಎಲ್‍ಇಡಿ ಡಿಸ್ಪ್ಲೇ ಬೋರ್ಡ್‍ಗಳನ್ನು ಅಳವಡಿಸಲು ಗುತ್ತಿಗೆ ನೀಡಲಾಗಿತ್ತು. ಅದರಂತೆ ಇದೀಗ ಜನಸಂದಣೆ ಹಾಗೂ ವಾಹನ ಸಂಚಾರ ಹೆಚ್ಚಾಗಿರುವ ಮೈಸೂರಿನ 5 ಪ್ರಮುಖ ಜಂಕ್ಷನ್‍ಗಳಲ್ಲಿ ಬೋರ್ಡ್‍ಗಳನ್ನು ಅಳವಡಿಸಿದ್ದು, ಅವು ಈಗಾಗಲೇ ಕಾರ್ಯಪ್ರವೃತ್ತವಾಗಿರುವುದನ್ನು ಕಾಣಬಹುದು.

ಈಗ ಸ್ವಚ್ಛತೆಗೆ ಸಂಬಂಧಪಟ್ಟ ಅರಿವು ಮೂಡಿಸಲು ಹಾಗೂ ಮಾಹಿತಿ ಒದಗಿಸಲು ಬಳಕೆ ಮಾಡಲಾಗುವುದು. ನಂತರ ಹಂತ ಹಂತವಾಗಿ ಮೈಸೂರಿನ ಪ್ರವಾಸಿತಾಣಗಳು, ಪಾಲಿಕೆ ಹಾಗೂ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು, ಸಂಚಾರ ನಿಯಮ ಕಾಪಾಡುವ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಲು ಈ ಬೋರ್ಡ್‍ಗಳನ್ನು ಬಳಸಿಕೊಳ್ಳಲಾಗುವುದು ಎಂದು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಈ ಬೋರ್ಡ್‍ಗಳು ಮಳೆ, ಬಿಸಿಲು, ಗಾಳಿಗೆ ಹಾಳಾಗದಂತೆ ಸುರಕ್ಷಿತ ಕ್ರಮವಹಿಸಲಾಗಿದೆ. ಸೇಫ್ಟಿ ಪ್ಯಾನೆಲ್ ಅಳವಡಿಸಿರುವುದರಿಂದ ಬಹುಕಾಲದವರೆಗೆ ಇವು ಬಾಳಿಕೆ ಬರಲಿವೆ ಎಂದು ಇಂಜಿನಿಯರ್‍ಗಳು ತಿಳಿಸಿದ್ದಾರೆ. 15 ಅಡಿ ಎತ್ತರದಲ್ಲಿ ಅಳವಡಿಸಿರುವ ಬೋರ್ಡ್‍ಗಳನ್ನು ಕಬ್ಬಿಣದ ಪೋಲ್‍ಗಳ ಮೇಲೆ ಫಿಟ್ ಮಾಡಿರುವುದರಿಂದ ಅಲುಗಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಂಕ್ಷನ್‍ನಲ್ಲಿ ಓಡಾಡುವವರು ಹಾಗೂ ವಾಹನ ಸವಾರರಿಗೆ ರಾತ್ರಿ ಹಾಗೂ ಹಗಲಿನಲ್ಲಿ ವರ್ಣರಂಜಿತವಾಗಿ ಬಿತ್ತರವಾಗುವ ದೃಶ್ಯಾವಳಿಗಳು ಅತ್ಯಾಕರ್ಷಕವಾಗಿ ಕಾಣುತ್ತವೆ. ಸಂದೇಶದ ನಡುವೆ ಆಗಿಂದಾಗ್ಗೆ ಮೈಸೂರು ಮಹಾನಗರ ಪಾಲಿಕೆ ಲಾಂಛನ ಹಾಗೂ ಕಟ್ಟಡಗಳು ಸಹ ಬಿತ್ತರಗೊಳ್ಳುತ್ತವೆ.

Translate »