ಫೆ.17ರಿಂದ ಟಿ.ನರಸೀಪುರದ ತಿರುಮಕೂಡಲು  ತ್ರಿವೇಣಿ ಸಂಗಮದಲ್ಲಿ ಕುಂಭಮೇಳ
ಮೈಸೂರು

ಫೆ.17ರಿಂದ ಟಿ.ನರಸೀಪುರದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಕುಂಭಮೇಳ

January 24, 2019

ಮೈಸೂರು: ಟಿ.ನರಸೀಪುರದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 17 ರಿಂದ ಮೂರು ದಿನ ನಡೆಯುವ ಕುಂಭಮೇಳ ಕಾರ್ಯಕ್ರಮವನ್ನು ಉತ್ತರಪ್ರದೇಶ ಪ್ರಯಾಗ್ ರಾಜ್‍ನಲ್ಲಿ ನಡೆಯುವ ಕುಂಭಮೇಳ ಮಾದರಿ ಅದ್ಧೂರಿಯಾಗಿ ಆಚರಿಸಿ, ಕರ್ನಾಟಕದ ಘನತೆ ಹೆಚ್ಚಿಸುವಂತೆ ನಡೆಯಬೇಕೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.

ಕುಂಭಮೇಳ ಕುರಿತು ಬುಧವಾರ ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಧಾರ್ಮಿಕ ಮುಖಂಡರು, ರಾಜಕೀಯ ಗಣ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.

ಕಾವೇರಿ, ಕಪಿಲಾ, ಸ್ಫಟಿಕ ಸರೋ ವರಗಳ ತ್ರಿವೇಣಿ ಸಂಗಮದಲ್ಲಿ ನಡೆಯುವ ಕುಂಭಮೇಳ ಅತ್ಯಂತ ದೊಡ್ಡ ಮಟ್ಟದಲ್ಲಿ ನಡೆಯಬೇಕು. ನಮ್ಮ ಧಾರ್ಮಿಕ, ಸಂಸ್ಕøತಿ ಹಾಗೂ ಸಂಪ್ರದಾಯಗಳ ಪ್ರತೀಕವಾಗಿ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು. ಮಳೆಗಾಲಕ್ಕೂ ಮುನ್ನಾ ದೇವರ ಆಶೀರ್ವಾದಬೇಕು. ಈ ವರ್ಷ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬರಗಾಲವಿದೆ. ಮುಂದಿನ ವರ್ಷ ಉತ್ತಮ ಮಳೆಯಾಗಿ ಜನ ನೆಮ್ಮದಿಯಿಂದ ಬದುಕಬೇಕು ಎಂದರು.

ಕುಂಭಮೇಳ ಆಯೋಜನೆಗೆ ಹಣದ ಕೊರತೆ ಇಲ್ಲ. ಸೋಪಾನಕಟ್ಟಿ, ರಸ್ತೆ ದುರಸ್ತಿ, ಶೌಚಾಲಯ, ಸ್ನಾನ ಗೃಹದ ವ್ಯವಸ್ಥೆ, ಕುಡಿಯುವ ನೀರು ಮುಂತಾದ ವ್ಯವಸ್ಥೆ ಗಳು ಅಚ್ಚುಕಟ್ಟಾಗಿ ಆಗಬೇಕು ಎಂದರು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಬೆಂಗಳೂರಿನ ಕೈಲಾಸ ಆಶ್ರಮದ ವಿಜಯೇಂದ್ರ ಪುರಿ ಸ್ವಾಮೀಜಿಯವರ ಆಶಯದಂತೆ ಅವರ ಸಲಹೆ ಪಡೆದು ಕೆಲಸ ಮಾಡಬೇಕು ಎಂದು ಅಧಿಕಾರಿ ಗಳಿಗೆ ತಿಳಿಸಿದರು.

ಈ ಕುಂಭಮೇಳಕ್ಕೆ ಹಲವಾರು ರಾಜ್ಯಗಳಿಂದ ಯತಿವರ್ಯರು ಆಗಮಿಸಲಿದ್ದಾರೆ. ಅವರಿಗೆ ಎಲ್ಲಾ ರೀತಿಯ ಸೌಕರ್ಯ ಮಾಡಿ ಕೊಡಬೇಕು. ಅವರು ಕರ್ನಾಟಕದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಕುಂಭಮೇಳಕ್ಕೆ ಶಾಶ್ವತವಾದ ಮೂಲ ಸೌಕರ್ಯಗಳ ಒದಗಿಸಲು ಗಮನಹರಿಸ ಬೇಕು ಎಂದರು.

ಪ್ರವಾಸೋದ್ಯಮ ಇಲಾಖೆಯಿಂದ ಈ ಕ್ಷೇತ್ರದಲ್ಲಿ ಶಾಶ್ವತವಾದ ಅಭಿವೃದ್ಧಿ ಕೆಲಸ ಮಾಡಲು ನೀಲಿನಕ್ಷೆ ತಯಾರಿಸಿ, ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಉತ್ತರಭಾರತದಲ್ಲಿ ಇತ್ತೀಚೆಗೆ ನಡೆದ ಕುಂಭಮೇಳಕ್ಕೆ ಸಾವಿರಾರು ಕೋಟಿ ರೂ. ಖರ್ಚಾಗಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಅಲ್ಲಿ ಯಾವ ರೀತಿ ಆಯೋಜನೆ ಆಗಿದೆ ಎಂದು ಇಬ್ಬರು ಅಧಿಕಾರಿಗಳು ಹೋಗಿ ಅಧ್ಯಯನ ಮಾಡುವಂತೆ ಮುಖ್ಯಮಂತ್ರಿಗಳು ತಿಳಿಸಿದರು.

ಈ ಕುಂಭ ಮೇಳದ ಸಂದರ್ಭದಲ್ಲಿಯೂ ಸಾರ್ವಜನಿಕ ಕೆಲಸಗಳಿಗೆ ಅನಾನುಕೂಲ ಆಗಬಾರದು. ಸರ್ಕಾರದ ಕೆಲಸಗಳು ಸಹ ಆಗಬೇಕು ಎಂದರು. ಭತ್ತ ಖರೀದಿ ಕೇಂದ್ರಗಳು ಸರಿಯಾಗಿ ಕೆಲಸ ನಿರ್ವಹಿಸದೆ ಇರುವ ಬಗ್ಗೆ ದೂರುಗಳು ಬಂದಿದೆ.ಇದರ ಬಗ್ಗೆ ಗಮನಹರಿಸಬೇಕು ಎಂದರು.

ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತು ವಾರಿ ಸಚಿವರಾದ ಜಿ.ಟಿ. ದೇವೇಗೌಡ ಅವರು ಮಾತನಾಡಿ, ಮುಖ್ಯಮಂತ್ರಿಗಳ ಸೂಚನೆಯಂತೆ ಎಲ್ಲ ವ್ಯವಸ್ಥೆಗಳು ಅಟ್ಟುಕಟ್ಟಾಗಿ ನಡೆಯಬೇಕು. ಕೇವಲ 23 ದಿನಗಳು ಮಾತ್ರ ಉಳಿದಿವೆ. ಸಮರೋಪಾದಿಯಲ್ಲಿ ಕೆಲಸಗಳು ಆಗಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ, ಬೆಂಗಳೂರಿನ ಕೈಲಾಸ ಆಶ್ರಮದ ವಿಜಯೇಂದ್ರಪುರಿ ಸ್ವಾಮೀಜಿ, ಓಂಕಾರ ಪೀಠದ ಮಧುಸೂದನಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಠದ ಸೋಮೇಶ್ವರನಾಥ ಸ್ವಾಮೀಜಿ, ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವರಾದ ಸಾ.ರಾ. ಮಹೇಶ್, ಸಣ್ಣ ನೀರಾವರಿ ಸಚಿವರಾದ ಸಿ.ಎಸ್. ಪುಟ್ಟರಾಜು, ಸಾರಿಗೆ ಸಚಿವರಾದ ಡಿ.ಸಿ.ತಮ್ಮಣ್ಣ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಶಾಸಕರಾದ ಡಾ| ಯತೀಂದ್ರ ಸಿದ್ದರಾಮಯ್ಯ, ಅಶ್ವಿನ್ ಕುಮಾರ್, ಅಡಗೂರು ಹೆಚ್.ವಿಶ್ವನಾಥ್, ಸುರೇಶ್‍ಗೌಡ, ನಾರಾಯಣಗೌಡ, ಶ್ರೀನಿವಾಸ್, ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಲೋಕಸಭಾ ಸದಸ್ಯ ಎಲ್.ಆರ್.ಶಿವರಾಮೇ ಗೌಡ, ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ, ಪೊಲೀಸ್ ಅಧೀಕ್ಷಕ ಅಮಿತ್ ಸಿಂಗ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. 

Translate »